ಸ್ಥಳೀಯ ಸಂಸ್ಥೆಗೆ ಆಡಳಿತಾಧಿಕಾರಿ ನೇಮಕ
ಬಳ್ಳಾರಿ: ನಗರ ಸ್ಥಳೀಯ ಸಂಸ್ಥೆಗಳ 2007ರ ಚುನಾವಣೆಯಲ್ಲಿ ಆಯ್ಕೆಯಾದ ಸದಸ್ಯರ ಅವಧಿ ಇದೇ ಫೆಬ್ರವರಿಗೆ ಮುಕ್ತಾಯಗೊಳ್ಳಲಿದ್ದು, ಚುನಾವಣೆ ನಡೆದು ಅಧ್ಯಕ್ಷರ ಆಯ್ಕೆವರೆಗೆ ಅಧ್ಯಕ್ಷರ ಅಧಿಕಾರ ಚಲಾಯಿಸಲು ಆಡಳಿತಾಧಿಕಾರಿಗಳನ್ನು ನೇಮಿಸಿ ಜಿಲ್ಲಾ ಚುನಾವಣಾಧಿಕಾರಿಯೂ ಆದ ಜಿಲ್ಲಾಧಿಕಾರಿ ಅಮ್ಲಾನ್ ಆದಿತ್ಯ ಬಿಸ್ವಾಸ್ ಆದೇಶ ಹೊರಡಿಸಿದ್ದಾರೆ.
ಕೆಎಂಸಿ ಕಾಯ್ದೆ 1864 ಕಲಂ 42(5)ರನ್ವಯ ಹೊಸಪೇಟೆ ನಗರ ಸಭೆ ಅವಧಿ ಫೆ. 17ರಂದು ಮುಕ್ತಾಯವಾಗಲಿದ್ದು, ಹೊಸಪೇಟೆ ಸಹಾಯಕ ಆಯುಕ್ತರನ್ನು ಅಧಿಕಾರಿಯನ್ನಾಗಿ ನೇಮಿಸಲಾಗಿದೆ. ಸಿರುಗುಪ್ಪ ಪುರಸಭೆ ಅವಧಿ ಫೆ. 18ರಂದು ಮುಕ್ತಾಯವಾಗಲಿದ್ದು, ಸಿರುಗುಪ್ಪ ತಹಸೀಲ್ದಾರ್, ಸಂಡೂರು ಪುರಸಭೆ ಅವಧಿ ಫೆ. 21ರಂದು ಮುಕ್ತಾಯವಾಗಲಿದ್ದು, ಸಂಡೂರು ತಹಸೀಲ್ದಾರ್, ಕಂಪ್ಲಿ ಪುರಸಭೆ ಅವಧಿ ಫೆ. 21ರಂದು ಮುಕ್ತಾಯವಾಗಲಿದ್ದು, ಕುರುಗೋಡಿನ ವಿಶೇಷ ತಹಸೀಲ್ದಾರ್ರನ್ನು, ಹೂವಿನಹಡಗಲಿ ಪುರಸಭೆ ಅವಧಿ ಫೆ. 22ರಂದು ಮಕ್ತಾಯವಾಗಲಿದ್ದು, ಹಡಗಲಿ ತಹಸೀಲ್ದಾರ್, ತೆಕ್ಕಲಕೋಟೆ ಪಟ್ಟಣ ಪಂಚಾಯಿತಿ ಅವಧಿ ಫೆ. 20ರಂದು ಮುಕ್ತಾಯವಾಗಲಿದ್ದು, ಜಿಲ್ಲಾಧಿಕಾರಿಗಳ ಕಚೇರಿಯ ಮುನ್ಸಿಪಲ್ ತಹಸೀಲ್ದಾರ್, ಕಮಾಲಾಪುರ ಪಟ್ಟಣ ಪಂಚಾಯಿತಿ ಅವಧಿ ಫೆ. 18ರಂದು ಮುಕ್ತಾಯವಾಗಲಿದ್ದು, ಹೊಸಪೇಟೆ ತಹಸೀಲ್ದಾರ್, ಕೂಡ್ಲಿಗಿ ಪಟ್ಟಣ ಪಂಚಾಯಿತಿ ಅವಧಿ ಫೆ. 15ರಂದು ಮುಕ್ತಾಯವಾಗಲಿದ್ದು, ಕೂಡ್ಲಿಗಿ ತಹಸೀಲ್ದಾರ್ ಗ್ರೇಡ್ 2ರನ್ನು , ಕೊಟ್ಟೂರು ಪಟ್ಟಣ ಪಂಚಾಯಿತಿ ಅವಧಿ ಫೆ. 17ರಂದು ಮುಕ್ತಾಯವಾಗಲಿದ್ದು, ಕೂಡ್ಲಿಗಿ ತಹಸೀಲ್ದಾರ್ ಅವರನ್ನು ನೇಮಕ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.