ಇಂದು ಚುನಾವಣೆ ಅಧಿಸೂಚನೆ: ಡಿಸಿ
ಕನ್ನಡಪ್ರಭ ವಾರ್ತೆ, ಬಳ್ಳಾರಿ, ಫೆ. 15
ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ-2013ಕ್ಕೆ ಸಂಬಂಧಿಸಿದಂತೆ ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯಿತಿಗಳಿಗೆ ಚುನಾವಣೆ ಅಧಿಸೂಚನೆಯನ್ನು ಫೆ. 16ರಂದು ಹೊರಡಿಸಲಾಗುವುದು ಎಂದು ಜಿಲ್ಲಾ ಚುನಾವಣಾಧಿಕಾರಿ ಅಮ್ಲಾನ್ ಆದಿತ್ಯ ಬಿಸ್ವಾಸ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಫೆ. 16ರಿಂದ 23ರವರೆಗೆ ನಾಮಪತ್ರ ಸಲ್ಲಿಸಬಹುದು. ಫೆ. 25ರಂದು ನಾಮಪತ್ರ ಪರಿಶೀಲನೆ ನಡೆಸಲಾಗುವುದು. ಫೆ. 27 ನಾಮಪತ್ರ ಹಿಂತೆಗೆದುಕೊಳ್ಳಲು ಕೊನೆಯ ದಿನವಾಗಿದೆ. ಮಾ. 7ರಂದು ಬೆಳಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಮತದಾನ ನಡೆಯಲಿದೆ. ಮತ ಎಣಿಕೆ ಮತ್ತು ಚುನಾವಣಾ ಪ್ರಕ್ರಿಯೆ ಮಾ. 11ರಂದು ಪೂರ್ಣಗೊಳ್ಳಲಿದೆ ಎಂದು ಅವರು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ 1 ಮಹಾನಗರ ಪಾಲಿಕೆ, 1 ನಗರಸಭೆ, 4 ಪುರಸಭೆ, 4 ಪಟ್ಟಣ ಪಂಚಾಯಿತಿ ಸೇರಿದಂತೆ ಒಟ್ಟು 10 ನಗರ ಸ್ಥಳೀಯ ಸಂಸ್ಥೆಗಳಿದ್ದು, ಒಟ್ಟು 246 ವಾರ್ಡ್ಗಳಿವೆ. ಈ ಎಲ್ಲಾ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ 2,46,961 ಪುರುಷ, 2,46,949 ಮಹಿಳಾ ಹಾಗೂ 11 ಇತರೆ ಸೇರಿದಂತೆ 4,93,921 ಮತದಾರರಿದ್ದಾರೆ. ಒಟ್ಟು 620 ಮತಗಟ್ಟೆಗಳನ್ನು ಸ್ಥಾಪಿಸಲಾಗುವುದು. ನೀತಿ ಸಂಹಿತೆಯು ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಗೆ ಮಾತ್ರ ಅನ್ವಯವಾಗುವಂತೆ ಫೆ. 15ರ ಬೆಳಗ್ಗೆಯಿಂದ ಜಾರಿಯಲಿದ್ದು, ಚುನಾವಣಾ ಪ್ರಕ್ರಿಯೆ ಮುಕ್ತಾಯಗೊಳ್ಳುವವರೆಗೆ ಜಾರಿಯಲ್ಲಿರುತ್ತದೆ.
ಬಳ್ಳಾರಿ ಮಹಾನಗರ ಪಾಲಿಕೆ
ಬಳ್ಳಾರಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 1,16,245 ಪುರುಷ, 1,17,427 ಮಹಿಳಾ ಮತದಾರರು ಹಾಗೂ ಓರ್ವ ಇತರೆ ಸೇರಿದಂತೆ ಒಟ್ಟು 2,33,673 ಮತದಾರರಿದ್ದಾರೆ. 306 ಮತಗಟ್ಟೆಗಳನ್ನು ತೆರೆಯಲಾಗುವುದು. ಸಿರುಗುಪ್ಪ ಪುರಸಭೆ ವ್ಯಾಪ್ತಿಯಲ್ಲಿ 14,793 ಪುರುಷ, 15,574 ಮಹಿಳಾ ಹಾಗೂ ಓರ್ವ ಇತರೆ ಮತದಾರ ಸೇರಿ 30,364 ಮತದಾರರಿದ್ದಾರೆ. 30 ಮತಗಟ್ಟೆಗಳನ್ನು ತೆರೆಯಲಾಗುವುದು. ತೆಕ್ಕಲಕೋಟೆ ಪಪಂ ವ್ಯಾಪ್ತಿಯಲ್ಲಿ 6,949 (ಪು), 7,560(ಮ) ಹಾಗೂ ಓರ್ವ ಇತರೆ ಮತದಾರ ಸೇರಿ ಒಟ್ಟು 14,510 ಮತದಾರರಿದ್ದಾರೆ. 22 ಮತಗಟ್ಟೆ ತೆರೆಯಲಾಗುವುದು.
ಸಂಡೂರು ಪುರಸಭೆ ವ್ಯಾಪ್ತಿಯಲ್ಲಿ 10,833(ಪು), 10,108(ಮ) ಹಾಗೂ ಐವರು ಇತರೆ ಮತದಾರರು ಸೇರಿ 20,946 ಮತದಾರರಿದ್ದಾರೆ. 24 ಮತಗಟ್ಟೆಗಳನ್ನು ತೆರೆಯಲಾಗುವುದು. ಹೊಸಪೇಟೆ ನಗರಸಭೆ ವ್ಯಾಪ್ತಿಯಲ್ಲಿ 52,547(ಪು), 51,273(ಮ) ಹಾಗೂ ಇಬ್ಬರು ಇತರೆ ಮತದಾರರು ಸೇರಿ 1,03,422 ಮತದಾರರಿದ್ದಾರೆ. 113 ಮತಗಟ್ಟೆಗಳನ್ನು ತೆರೆಯಲಾಗುವುದು. ಕಮಲಾಪುರ ಪಪಂ ವ್ಯಾಪ್ತಿಯಲ್ಲಿ 7,155(ಪು), 7,253(ಮ) ಸೇರಿದಂತೆ 14,388 ಮತದಾರರಿದ್ದಾರೆ. 21 ಮತಗಟ್ಟೆಗಳನ್ನು ತೆರೆಯಲಾಗುವುದು. ಕಂಪ್ಲಿ ಪುರಸಭೆ ವ್ಯಾಪ್ತಿಯಲ್ಲಿ 15,0839(ಪು) ಹಾಗೂ 12,849(ಮ) ಸೇರಿದಂತೆ ಒಟ್ಟು 25,932 ಮತದಾರರಿದ್ದಾರೆ. 26 ಮತಗಟ್ಟೆಗಳನ್ನು ತೆರೆಯಲಾಗುವುದು.
ಹಡಗಲಿ ಪುರಸಭೆ
ಹಡಗಲಿ ಪುರಸಭೆ ವ್ಯಾಪ್ತಿಯಲ್ಲಿ 8,534(ಪು), 7,893(ಮ) ಸೇರಿದಂತೆ ಒಟ್ಟು 16,427 ಮತದಾರರಿದ್ದಾರೆ. 23 ಮತಗಟ್ಟೆ ತೆರೆಯಲಾಗುವುದು. ಕೂಡ್ಲಿಗಿ ಪಪಂ ವ್ಯಾಪ್ತಿಯಲ್ಲಿ 7,600(ಪು), 7,949(ಮ) ಹಾಗೂ ಓರ್ವ ಇತರೆ ಮತದಾರ ಸೇರಿದಂತೆ 15,550 ಮತದಾರರಿದ್ದಾರೆ. 23 ಮತಗಟ್ಟೆಗಳನ್ನು ತೆರೆಯಲಾಗುವುದು. ಕೊಟ್ಟೂರು ಪಪಂ ವ್ಯಾಪ್ತಿಯಲ್ಲಿ 9,242 ಪುರುಷ ಹಾಗೂ 9,063 ಮಹಿಳಾ ಮತದಾರರು ಸೇರಿ 18,305 ಮತದಾರರಿದ್ದಾರೆ. 22 ಮತಗಟ್ಟೆಗಳನ್ನು ತೆರೆಯಲಾಗುವುದು. ಎಲ್ಲ ವಾರ್ಡ್ಗಳಿಗೆ ಚುನಾವಣಾಧಿಕಾರಿಗಳು ಹಾಗೂ ಸಹಾಯಕ ಚುನಾವಣಾಧಿಕಾರಿಗಳನ್ನು ನೇಮಿಸಲಾಗಿದೆ. ಈಗಾಗಲೇ ಮಾದರಿ ನೀತಿ ಸಂಹಿತೆಯನ್ನು ಕಟ್ಟು ನಿಟ್ಟಾಗಿ ಜಾರಿಗೊಳಿಸಲು ಜಿಲ್ಲಾ ಹಾಗೂ ತಾಲೂಕು ಮಟ್ಟದ ಉಸ್ತುವಾರಿ ಸಮಿತಿಗಳನ್ನು ನೇಮಿಸಲಾಗಿದೆ ಎಂದು ತಿಳಿಸಿದ್ದಾರೆ.