ಪತ್ರಕರ್ತನಿಗೆ ಸಮಾಜದ ಏಳಿಗೆ ಮೂಲವಾಗಲಿ
ಕನ್ನಡಪ್ರಭ ವಾರ್ತೆ, ಬಳ್ಳಾರಿ, ಫೆ.17
ಸ್ಪರ್ಧಾತ್ಮಕ ಪತ್ರಿಕೋದ್ಯಮದಲ್ಲಿ ಪತ್ರಕರ್ತರು ಸಮಾಜದ ಶಾಂತಿ, ಸಮಾಜದ ಏಳಿಗೆಯ ಉದ್ದೇಶವನ್ನು ಮೂಲವಾಗಿಟ್ಟುಕೊಂಡು ವೃತ್ತಿ ನಿರ್ವಹಿಸುವುದು ಅಗತ್ಯವಾಗಿದೆ ಎಂದು ಹಿರಿಯ ಪತ್ರಕರ್ತ ಸಿ.ಜಿ. ಹಂಪಣ್ಣನವರು ತಿಳಿಸಿದ್ದಾರೆ.
ನಗರದ ರಾಘವಕಲಾ ಮಂದಿರದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ಹಾಗೂ ಸಿ.ಜಿ. ಹಂಪಣ್ಣನವರ ಅಭಿನಂದನಾ ಸಮಿತಿ ಭಾನುವಾರ ಏರ್ಪಡಿಸಿದ್ದ ಪತ್ರಿಕೋದ್ಯಮಿ, ಸಾಹಿತಿ ಸಿ.ಜಿ. ಹಂಪಣ್ಣನವರ 75 ಅಮೃತ ಮಹೋತ್ಸವದ ಅಭಿನಂದನಾ ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ಸ್ಪರ್ಧೆಯ ನೆಪದಲ್ಲಿ ಮಾಧ್ಯಮಗಳು ಜನರನ್ನು ಆಕರ್ಷಿಸುವ ಉದ್ದೇಶದಿಂದಾಗಿ ಅಪರಾಧಿ ಪ್ರಕರಣಗಳನ್ನು ವೈಭವೀಕರಣ ಮಾಡಿ ತೋರಿಸುವುದು, ಸಮಾಜದಲ್ಲಿ ಶಾಂತಿ ಕದಡುವ ಘಟನೆಗಳನ್ನು ಹೆಚ್ಚಾಗಿ ಬಿಂಬಿಸುವುದರ ಬಗ್ಗೆ ಕೊಂಚ ಆಲೋಚಿಸಬೇಕಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಿ.ಜಿ. ಹಂಪಣ್ಣನವರ ಕುರಿತಾಗಿ ಮುದ್ರಿತವಾಗಿರುವ ಸವಿಜೇನು ಅಭಿನಂದನಾ ಗ್ರಂಥವನ್ನು ಗಂಗಾವತಿ ಎಪಿಎಂಸಿ ಅಧ್ಯಕ್ಷ ತಿಪ್ಪೇರುದ್ರಸ್ವಾಮಿ ಬಿಡುಗಡೆ ಮಾಡಿ ಮಾತನಾಡಿ, ಪತ್ರಕರ್ತರು ಸಮಾಜ ಮುಖಿಯಾಗಿ ಕೆಲಸ ಮಾಡಿದರೆ, ಅವರ ಹೆಸರು ಜನಮಾನಸದಲ್ಲಿ ಉಳಿಯಲು ಸಾಧ್ಯವಾಗುತ್ತದೆ. ಇದಕ್ಕೆ ಸಿ.ಜಿ. ಹಂಪಣ್ಣನವರೇ ನಿದರ್ಶನ. 75ರ ವಯಸ್ಸಿನಲ್ಲಿ ಪತ್ರಿಕೋದ್ಯಮದಲ್ಲಿ ಸೇವೆ ಸಲ್ಲಿಸುತ್ತಿರುವ ಅವರ ಕ್ರಿಯಾಶೀಲತೆಯು ನಿಜಕ್ಕೂ ಮೆಚ್ಚುವಂತದ್ದು ಎಂದು ತಿಳಿಸಿದರು.
ಹಂಪಣ್ಣನವರು ಕೇವಲ ಪತ್ರಿಕೋದ್ಯಮದಲ್ಲಿ ಮಾತ್ರವಲ್ಲದೆ ಸಾಹಿತ್ಯದಲ್ಲಿ, ಸಿನಿಮಾರಂಗದಲ್ಲಿ ಸೇವೆ ಸಲ್ಲಿಸಿದ್ದಾರೆ. ಸಾಮಾಜಿಕ ಕ್ಷೇತ್ರದಲ್ಲಿ ಅಪಾರ ಸೇವೆ ಸಲ್ಲಿಸಿದ್ದಾರೆ. ಇಂತಹ ಸೇವೆ ಅವರನ್ನು ಜನ ಗುರುತಿಸಲು, ಅಭಿನಂದಿಸಲು ಕಾರಣವಾಗಿದೆ ಎಂದು ತಿಳಿಸಿದರು. ನಿವೃತ್ತ ಪೊಲೀಸ್ ಅಧಿಕಾರಿ ಗಿರಿಜಾಪತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಹಣದಿಂದ ಸಂತೃಪ್ತ ಜೀವನ ಅಸಾಧ್ಯ, ನಿಸ್ವಾರ್ಥ ಸೇವೆ, ಸಮಾಜ ಮುಖಿಯ ಜೀವನದಿಂದ ನೆಮ್ಮದಿ ಸಾಧ್ಯ ಎಂದು ಸಿ.ಜಿ. ಹಂಪಣ್ಣನವರು ತೋರಿಸಿಕೊಟ್ಟಿದ್ದಾರೆ ಎಂದರು. ಕಾರ್ಯಕ್ರಮದಲ್ಲಿ ವೀ.ವಿ. ಸಂಘದ ಉಪಾಧ್ಯಕ್ಷ ಮಹೇಶ್ವರಸ್ವಾಮಿ ಮಾತನಾಡಿ, 75 ವಯಸ್ಸಾದರೂ ಅವರ ಕ್ರಿಯಾಶೀಲತೆ ಪ್ರತಿಯೊಬ್ಬರಿಗೆ ಮಾದರಿಯಾಗಿದೆ ಎಂದು ತಿಳಿಸಿದರು. ಚೇಳ್ಳಗುರ್ಕಿ ರಾಜಶೇಖರ್ ಮಾತನಾಡಿದರು.
ಕಾರ್ಯಕ್ರಮದಲ್ಲಿ ಸಿ.ಜಿ. ಹಂಪಣ್ಣನವರ ಅಭಿನಂದಾನ ಗ್ರಂಥ ಸವಿಜೇನು ಪುಸ್ತಕವನ್ನು ಬಿಡುಗಡೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ವಿವಿಧ ಸಂಘ ಸಂಸ್ಥೆಗಳು, ಜನರು ಅವರನ್ನು ಸನ್ಮಾನಿಸಿ, ಗೌರವಿಸಿದರು. ಕಾರ್ಯಕ್ರಮದಲ್ಲಿ ವೀ.ವಿ. ಸಂಘದ ಅಧ್ಯಕ್ಷ ಅಲ್ಲಂ ಗುರುಬಸವರಾಜ, ಸಂಘದ ಗುರುಸಿದ್ದಸ್ವಾಮಿ, ಅರವಿಬಸವನಗೌಡ, ಸಾಲಿ ಸಿದ್ದಯ್ಯ, ಟಿ.ಎಚ್.ಎಂ. ಬಸವರಾಜ್. ದರೂರು ಪುರುಷೋತ್ತಮಗೌಡ, ನೇಪಾಕ್ಷಪ್ಪ, ಜಾನೆಕುಂಟೆ ಬಸವರಾಜ್, ರಾಮನಗೌಡ, ಬಾಳನಗೌಡ ಸೇರಿದಂತೆ ಇತರರು ಇದ್ದರು.