ಕನ್ನಡ ವಾತಾವರಣದಲ್ಲಿ ಇಂಗ್ಲಿಷ್ ಕಲಿಸಿ: ಕಾಳೇಗೌಡ
ಹೊಸಪೇಟೆ: ಕನ್ನಡ ವಾತಾವರಣದಲ್ಲಿ ಇಂಗ್ಲಿಷ್ ಕಲಿಸಬೇಕು ಎಂದು ಮೈಸೂರಿನ ಹಿರಿಯ ಲೇಖಕ ಪ್ರೊ. ಕಾಳೇಗೌಡ ನಾಗವಾರ್ ಹೇಳಿದರು.
ಹಂಪಿ ಕನ್ನಡ ವಿಶ್ವವಿದ್ಯಾಲಯದ ಭುವನ ವಿಜಯದಲ್ಲಿ ಸೋಮವಾರ ನಡೆದ 21ನೇ ನುಡಿಹಬ್ಬ ಘಟಿಕೋತ್ಸವ ಸಂದರ್ಭ 50 ಪುಸ್ತಕಗಳ ಬಿಡುಗಡೆ ಸಮಾರಂಭದಲ್ಲಿ ಪುಸ್ತಕಗಳನ್ನು ಲೋರ್ಕಾಪಣೆ ಮಾಡಿ ಮಾತನಾಡಿದರು.
ಇಂಗ್ಲಿಷ್ ಮಾಧ್ಯಮದಲ್ಲೇ ಶಿಕ್ಷಣ ನೀಡಬೇಕು ಎನ್ನುವ ಭ್ರಮೆಯಲ್ಲಿ ಇರುವುದಕ್ಕಿಂತ ಕನ್ನಡ ಮಾಧ್ಯಮದಲ್ಲಿಯೇ ಇಂಗ್ಲಿಷ್ ಭಾಷೆ ಕಲಿಸುವ ಮೂಲಕ ಕನ್ನಡ ವಾತಾವರಣದಲ್ಲಿ ಇಂಗ್ಲಿಷ್ ಭಾಷೆ ಕಲಿಸುವ ಮೂಲಕ ಕನ್ನಡತನದ ವಾತಾವರಣದಲ್ಲಿ ಇಂಗ್ಲಿಷ್ ಕಲಿಸಬೇಕಾಗಿದೆ ಎಂದರು.
ಅರ್ಹರಿಗೆ ಗೌರವ ಸಿಗಲಿ: ಹಂಪಿ ಕನ್ನಡ ವಿವಿ ವಿವಿಧ ಕ್ಷೇತ್ರಗಳಲ್ಲಿ ಶ್ರಮಿಸಿದ ಗಣ್ಯರಿಗೆ ನಾಡೋಜ ಗೌರವ ಪದವಿ ನೀಡುವಾಗ 10 ಬಾರಿ ಆಲೋಚಿಸಿ, ಅರ್ಹರಿಗೆ ಮತ್ತು ಪ್ರತಿಭಾವಂತರಿಗೆ ನೀಡುವುದು ಸೂಕ್ತ ಎಂದು ಮೈಸೂರಿನ ಹಿರಿಯ ಲೇಖಕ ಪ್ರೊ. ಕಾಳೇಗೌಡ ನಾಗವಾರ ಪ್ರತಿಕ್ರಿಯಿಸಿದರು.
ಅನೇಕ ಪ್ರತಿಭಾವಂತರು ಸಮಾಜದಲ್ಲಿ ಎಲೆಮರೆ ಕಾಯಿಯಾಗಿ ದುಡಿದವರು ಇದ್ದರೂ ಸಹ ಇದುವರೆಗೂ ಅಂತಹ ವ್ಯಕ್ತಿಗಳಿಗೆ ನಾಡೋಜ ಗೌರವ ಪದವಿ ನೀಡಲು ಮುಂದಾಗಿಲ್ಲ. ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಸಾಕಷ್ಟು ರೀತಿಯಲ್ಲಿ ದುಡಿದ ಕಿ.ರಂ. ನಾಗರಾಜ್, ಎ. ಕೆ. ರಾಮಾನುಜಂ, ಕೋ. ಚೆನ್ನಬಸಪ್ಪ ಅವರಿಗೆ ಎಂದೋ ನಾಡೋಜ ಗೌರವ ನೀಡಬೇಕಾಗಿತ್ತು. ಇದೇ ರೀತಿಯಲ್ಲಿ ಸಮಾಜದಲ್ಲಿ ಸಾಕಷ್ಟು ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸಿದ ಅಂಬಿಗೇರಿ ವಿರೂಪಾಕ್ಷಪ್ಪ, ಸದಾಶಿವರಾಯ್ ಅನೇಕ ಪ್ರತಿಭಾವಂತರಿಗೆ ನಾಡೋಜ ಗೌರವ ಪದವಿ ನೀಡಬೇಕಾಗಿತ್ತು ಎಂದರು.
ಹಂಪಿ ಕನ್ನಡ ವಿಶ್ವವಿದ್ಯಾಲಯ ಕುಲಪತಿ ಡಾ. ಹಿ.ಚಿ. ಬೋರಲಿಂಗಯ್ಯ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕುಲಸಚಿವ ಡಾ. ಮಂಜುನಾಥ ಬೇವಿನಕಟ್ಟಿ, ಪ್ರಸಾರಂಗದ ನಿರ್ದೇಶಕ ಡಾ. ಎ. ಸುಬ್ಬಣ್ಣ ರೈ ಸಭೆಯಲ್ಲಿ ಭಾಗವಹಿಸಿದ್ದರು.
ಡಾ. ಮಂಜುನಾಥ ಬೇವಿನಕಟ್ಟಿ ಸ್ವಾಗತಿಸಿದರು. ಡಾ. ಎ. ಸುಬ್ಬಣ್ಣ ರೈ ಪ್ರಾಸ್ತಾವಿಕ ಮಾತನಾಡಿದರು. ಪ್ರಕಟಣೆ ಪುಸ್ತಕಗಳ ಕುರಿತು ಕೆ.ಎಲ್. ರಾಜಶೇಖರ್ ವಿವರಿಸಿದರು. ಎಚ್.ಬಿ. ರವೀಂದ್ರ ನಿರೂಪಿಸಿದರು. ಬಿ. ಸುಜ್ಞಾನಮೂರ್ತಿ ವಂದಿಸಿದರು.