5 ವರ್ಷಗಳಲ್ಲಿ 54 ಸಾವಿರ ಮತದಾರರ ಇಳಿಕೆ
ಶಶಿಧರ ಮೇಟಿ
ಕನ್ನಡಪ್ರಭ ವಾರ್ತೆ, ಬಳ್ಳಾರಿ, ಫೆ. 23
ಬಳ್ಳಾರಿ ಎಂದಾಕ್ಷಣ ಗೊಂದಲ, ವಿವಾದಗಳು ನೆನಪಾಗುತ್ತವೆ. ರಾಜಕೀಯ ಏರಿಳಿತಗಳಿಗೆ ಕಾರಣವಾದ ಬಳ್ಳಾರಿ ಮತದಾರರ ಪಟ್ಟಿಯಲ್ಲಿ ಏರಿಳಿತವಾಗಿದೆ. ಇಂತಹ ಅನುಮಾನಕ್ಕೆ ಕಾರಣವಾಗಿರುವುದು ಮಹಾನಗರ ಪಾಲಿಕೆ ವ್ಯಾಪ್ತಿಯ ಮತದಾರರ ಸಂಖ್ಯೆಯಲ್ಲಿನ ಗಣನೀಯ ಇಳಿಕೆ.
ಮತದಾರರ ಸಂಖ್ಯೆ ಏರಿಕೆಯಾಗಬೇಕು, ಆದರೆ ಬಳ್ಳಾರಿ ಮಹಾನಗರ ಪಾಲಿಕೆಯಲ್ಲಿ ಐದು ವರ್ಷಗಳಲ್ಲಿ 50 ಸಾವಿರ ಮತದಾರರು ಕಡಿಮೆಯಾಗಿದ್ದಾರೆ. ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬೋಗಸ್ ಮತದಾರರು ಇದ್ದಾರೆ ಎಂಬ ಆರೋಪಕ್ಕೆ ಇದು ರೆಕ್ಕೆಪುಕ್ಕ ಬರುವಂತೆ ಮಾಡಿದೆ. ಇಂತಹ ಏರಿಳಿತ ಆಶ್ಚರ್ಯ, ಅನುಮಾನಗಳಿಗೆ ಕಾರಣವಾಗಿದೆ.
ಮತದಾರರ ಸಂಖ್ಯೆ ಇಳಿಮುಖದ ಜಾಡು ಹಿಡಿದು 'ಕನ್ನಡಪ್ರಭ' ಪಾಲಿಕೆಯ ಕೆಲ ವಾರ್ಡ್ಗಳಿಗೆ ಹೋದಾಗ, ತಮ್ಮ ಮಕ್ಕಳಿಗೆ ಶಾಲಾ-ಕಾಲೇಜು ಶಿಕ್ಷಣ ಕೊಡಿಸಲು ಬಳ್ಳಾರಿಗೆ ಬಂದವರು ತಮ್ಮೂರಿಗೆ ವಾಪಸ್ ಆಗಿದ್ದಾರೆ. ಗಣಿ ಚಟುವಟಿಕೆ ಸಂದರ್ಭದಲ್ಲಿ ಇದ್ದವರು ಈಗಿಲ್ಲ. ಮತ್ತೆ ಕೆಲವರು ವರ್ಗಾವಣೆಯಾಗಿ ಬೇರೆಡೆಗೆ ಹೋಗಿದ್ದಾರೆ. ಎರಡು ಕಡೆಗಳಲ್ಲಿ ಹೆಸರುಳ್ಳವರು ಇದ್ದು, ಇದೀಗ ಅಂತಹ ಹೆಸರುಗಳನ್ನು ಮತದಾರರ ಪಟ್ಟಿಯಲ್ಲಿ ಕೈ ಬಿಟ್ಟಿದ್ದಾರೆ. ಮತದಾರರ ಸಂಖ್ಯೆ ಕಡಿಮೆಯಾಗುವುದಕ್ಕೆ ಇಂತಹ ಹೇಳಿಕೆಯನ್ನು ಜನರು ನೀಡುತ್ತಾ ಹೋಗುತ್ತಾರೆ. 22ನೇ ವಾರ್ಡಿನ ನಿವಾಸಿ ಗಂಗಿರೆಡ್ಡಿ ಅವರ ಪ್ರಕಾರ, ಕೆಲವರು ತಮ್ಮ ಶಕ್ತಿಯನ್ನು ಬಳಸಿಕೊಂಡು ಬೋಗಸ್ ಹೆಸರನ್ನು ಮತದಾರರ ಪಟ್ಟಿಯಲ್ಲಿ ಸೇರಿಸಿದ್ದರು. ಜಿಲ್ಲಾಡಳಿತ ಅಂತಹ ಮತದಾರರ ವಿಳಾಸ ನೋಡಲು ಬಂದಾಗ, ಅವರ ವಿಳಾಸವಿರುವುದಿಲ್ಲ, ಅದಕ್ಕಾಗಿ ಮತದಾರರ ಸಂಖ್ಯೆ ಕಡಿಮೆಯಾಗಿದೆ ಎಂದು ನೇರವಾಗಿ ಆರೋಪ ಮಾಡುತ್ತಾರೆ.
54,268 ಮತದಾರರು ಕಡಿಮೆ: ಒಂದು ಕ್ಷೇತ್ರ, ವಾರ್ಡ್ನ ಮತದಾರರ ಸಂಖ್ಯೆಯು ಚುನಾವಣೆಯಿಂದ ಚುನಾವಣೆಗೆ ಸೇರ್ಪಡೆ, ತಿದ್ದುಪಡಿ, ಸಾವಿನಿಂದಾಗಿ ಬದಲಾಗುತ್ತಾ ಹೋಗುತ್ತದೆ. ಡಿಲೀಟ್ಗಿಂತ ತಿದ್ದುಪಡಿ, ಸೇರ್ಪಡೆಯೇ ಹೆಚ್ಚಾಗಿರುತ್ತದೆ. ಆದರೆ ಬಳ್ಳಾರಿ ಮಹಾನಗರದ ಮಟ್ಟಿಗೆ ಮಾತ್ರ ಡಿಲೀಟ್ ಹೆಚ್ಚಾಗಿದೆ. ಬೋಗಸ್ ಮತದಾರರ ಸಂಖ್ಯೆ ಹೆಚ್ಚಾಗಿತ್ತೋ ಅಥವಾ ಎರಡು ಕಡೆಗಳಲ್ಲಿ ಮತದಾರರ ಪಟ್ಟಿಯಲ್ಲಿ ಹೆಸರಿರುವವರನ್ನು ಒಂದು ಕಡೆ ಡಿಲೀಟ್ ಮಾಡಿದ್ದಾರೆಯೋ ಗೊತ್ತಿಲ್ಲ. ಕೆಲ ವಾರ್ಡ್ಗಳಲ್ಲಿ ಮತದಾರರ ಸಂಖ್ಯೆ ಶೇ. 30ರಷ್ಟು ಕಡಿಮೆಯಾಗಿದೆ. 2013ರ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಬಳ್ಳಾರಿ ಮಹಾನಗರ ಪಾಲಿಕೆಯ ಮತದಾರರ ಯಾದಿಯನ್ನು ನೋಡಿದಾಕ್ಷಣ ಯಾರಿಗಾದರೂ ಆಶ್ಚರ್ಯ ಮೂಡದೆ ಇರಲಾರದು. 2007ರಲ್ಲಿ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸುಮಾರು 3 ಲಕ್ಷ ಮತದಾರರು ಇದ್ದರೆ, 2013ರ ಚುನಾವಣೆಗೆ 2,45,732 ಮತದಾರರಿದ್ದಾರೆ.
ಸಹಜವಾಗಿಯೇ ನಗರದ ಒಂದು ಪ್ರದೇಶದಲ್ಲಿರುವ ಜನರು ಮತ್ತೊಂದು ಪ್ರದೇಶಕ್ಕೆ ಹೋಗುತ್ತಾರೆ, ಇನ್ನು ನೌಕರರ ವರ್ಗಾವಣೆ, ಹೆಣ್ಮಕ್ಕಳು ಮದುವೆಯಾಗಿ ಗಂಡನ ಮನೆಗೆ ಹೋಗುತ್ತಾರೆ. ಕೆಲವರು ಮೃತಪಡುತ್ತಾರೆ. ಚುನಾವಣೆಯ ಅರ್ಹತೆಯನ್ನು ಪಡೆಯುವವರು ಇರುತ್ತಾರೆ. ಅಂತಹ ಸಂದರ್ಭದಲ್ಲಿ 5 ವರ್ಷಗಳ ಅವಧಿಯಲ್ಲಿಯೇ 54,268 ಮತದಾರರು ಇಳಿಕೆಯಾಗಲು ಹೇಗೆ ಸಾಧ್ಯ? ಬೋಗಸ್ ಮತದಾರರು ಇರಬಹುದಾ ಎನ್ನುವ ಪ್ರಶ್ನೆ ಯಾರನ್ನಾದರೂ ಕಾಡದೆ ಇರಲಾರದು.