ಪ್ರಾದೇಶಿಕ ಪಕ್ಷಗಳ ಪರ ತೀರ್ಪು: ಶ್ರೀರಾಮುಲು
ಬಳ್ಳಾರಿ: ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಜನತೆ ಪ್ರಾದೇಶಿಕ ಪಕ್ಷಗಳ ಪರವಾಗಿ ತೀರ್ಪು ನೀಡುವ ಮೂಲಕ ರಾಷ್ಟ್ರೀಯ ಪಕ್ಷಗಳಿಗೆ ಮಣ್ಣು ಮುಕ್ಕಿಸಲಿದ್ದಾರೆ ಎಂದು ಬಿಎಸ್ಸಾರ್ ಪಕ್ಷದ ಸಂಸ್ಥಾಪಕ ಅಧ್ಯಕ್ಷ ಬಿ. ಶ್ರೀರಾಮುಲು ಭವಿಷ್ಯ ನುಡಿದರು. ಪಕ್ಷದ ಕಚೇರಿಯಲ್ಲಿ ಸಿರುಗುಪ್ಪ ಕ್ಷೇತ್ರದ ಕಾಂಗ್ರೆಸ್ ಮತ್ತು ಜೆಡಿಎಸ್ ಮುಖಂಡರನ್ನು ಪಕ್ಷಕ್ಕೆ ಸ್ವಾಗತಿಸಿದ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಮತ್ತು ಬಿಜೆಪಿಯ ಕಾರ್ಯವೈಖರಿಯನ್ನು ಜನರು ಸೂಕ್ಷ್ಮವಾಗಿ ಗಮನಿಸಿದ್ದಾರೆ. ಕಾವೇರಿ ನದಿ ನೀರು ಕುರಿತು ರಾಜ್ಯಕ್ಕೆ ಅನ್ಯಾಯ ಮಾಡಲಾಗಿದೆ. ರಾಜ್ಯದ ಜನರನ್ನು ಬಿಜೆಪಿ ಸರ್ಕಾರ 5 ವರ್ಷಗಳಿಂದ ಶೋಷಿಸುತ್ತಾ ಬಂದಿದೆ. ಜಿಲ್ಲೆಯ ಮಹಾನಗರ ಪಾಲಿಕೆ, ಹೊಸಪೇಟೆ ನಗರಸಭೆ ಸೇರಿದಂತೆ ಒಟ್ಟು 10 ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಎಸ್ಸಾರ್ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ತೆಕ್ಕಲಕೋಟೆ ಪಪಂ ಮಾಜಿ ಅಧ್ಯಕ್ಷ ಟಿ.ಎಂ. ಸಿದ್ಧರಾಮಯ್ಯಸ್ವಾಮಿ, ಬಿ. ಸಿನೆಮಾ ಸಿದ್ಧಯ್ಯ, ಎಪಿಎಂಸಿ ಸದಸ್ಯರಾದ ಎಚ್. ಎಂ. ಮಲ್ಲಿಕಾರ್ಜುನ, ಪಪಂನ ಉಪಾಧ್ಯಕ್ಷರಾಗಿದ್ದ ಬಿ.ಪರಮೇಶ್ವರಪ್ಪ, ಎಪಿಎಂಸಿ ಕುಡುದಾಳ ಕ್ಷೇತ್ರದ ಸದಸ್ಯ ಭೀಮಲಿಂಗಪ್ಪ, ಮುಖಂಡರಾದ ಎಂ.ಎಸ್. ಬಂದೇನವಾಜ್, ಶಾಬಾದಿ ಶ್ರೀಪಾದ, ಪಪಂ ಮಾಜಿ ಸದಸ್ಯ ಎಚ್. ಉಮಾಪತಿ, ಮಾಬುಸಾಬ್, ಜಿಲಾನ್‌ಬಾಷಾ ಸೇರಿದಂತೆ ಇತರರು ಬಿಎಸ್ಸಾರ್ ಸೇರ್ಪಡೆಯಾದರು. ಬಿಎಸ್ಸಾರ್ ಪಕ್ಷದ ಜಿಲ್ಲಾಧ್ಯಕ್ಷ ಎಸ್. ಗುರುಲಿಂಗನಗೌಡ, ಮುಖಂಡರಾದ ಕೆ. ಬಸವರಾಜ, ಡಾ. ಮಹಿಪಾಲ್, ಮಹಾನಗರ ಪಾಲಿಕೆ ಮೇಯರ್ ಇಬ್ರಾಹಿಂಬಾಬು, ಎಪಿಎಂಸಿ ಅಧ್ಯಕ್ಷ ವೀರೇಶಗೌಡ, ಎನ್. ರುದ್ರಗೌಡ, ತಿಮ್ಮಪ್ಪ, ಸೂರಿಬಾಬು ಸೇರಿದಂತೆ ಇತರರಿದ್ದರು.