ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಶತಮಾನೋತ್ಸವ ಆಚರಿಸಿದ್ದೇ ಸಾಧನೆ

Mainashree
Updated On : 24 Feb 2013, 11:22 am

ಹೊಸಪೇಟೆ ನಗರಸಭೆ ನೂರು ವಸಂತಕ್ಕೆ ಕಾಲಿರಿಸಿ ಇತ್ತೀಚಿಗೆ ಶತಮಾನೋತ್ಸವ ಆಚರಿಸಿಕೊಂಡಿತು. ಇದರ ಸವಿನೆನಪಿಗಾಗಿ ಶತಮಾನೋತ್ಸವ ಭವನವನ್ನಾಗಿ ಕಚೇರಿಯನ್ನು ನಿರ್ಮಿಸಿದ್ದರಿಂದ ನಗರಸಭೆಯ ನೂತನ ಕಚೇರಿ ಮದುವಣಗಿತ್ತಿಯಂತೆ ಶೃಂಗಾರಗೊಂಡಿದೆ. ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ ಅವರ ಇಚ್ಛಾಶಕ್ತಿಯಿಂದ ನಗರದಲ್ಲಿ ವಿಜಯನಗರ ಸಾಮ್ರಾಜ್ಯ ವಾಸ್ತುಶಿಲ್ಪದ ಮಾದರಿಯಲ್ಲಿ ಜೆಎಸ್‌ಡ್ಬ್ಯೂ ವಿಜಯನಗರ ನೂತನ ಬಸ್ ನಿಲ್ದಾಣ ಹೈಟೆಕ್ ಬಸ್ ನಿಲ್ದಾಣವಾಗಿ ತಲೆ ಎತ್ತಿದೆ. ಇನ್ನಷ್ಟು ಅಭಿವೃದ್ಧಿ ಕಾರ್ಯಗಳು ನಡೆದಿವೆ. ಈ ಬಾರಿಯ ಚುನಾವಣೆ ಕೆಲವರ ಪಾಲಿಗೆ ಪ್ರತಿಷ್ಠೆಯದ್ದಾಗಿದೆ. ಎಲ್ಲಾ ಪಕ್ಷಗಳ ಅಭ್ಯರ್ಥಿಗಳು ತಾಲಿಮು ನಡೆಸಿದ್ದಾರೆ. ನಗರಸಭೆಯ ಉಳಿದ 5 ವಾರ್ಡ್‌ಗಳ ಕುರಿತು ಸಂಕ್ಷಿಪ್ತ ಮಾಹಿತಿಯನ್ನು ಸಿ.ಕೆ. ನಾಗರಾಜ್ ನಿಮಗೆ ಒದಗಿಸಿದ್ದಾರೆ.
ಭಾಗಶಃ ಅಭಿವೃದ್ಧಿ
15ನೇ ವಾರ್ಡ್ ಪ್ರತಿಷ್ಠಿತ ವಿಜಯನಗರ ಕಾಲೇಜನ್ನು ಹೊಂದಿದೆ. ಕಾಂಗ್ರೆಸ್‌ನಿಂದ ಗೆದ್ದು ಬಿಜೆಪಿಯಲ್ಲಿ ಗುರುತಿಸಿಕೊಂಡಿರುವ ಪಾರ್ವತಮ್ಮ ಈ ವಾರ್ಡ್‌ನ ನಿರ್ಗಮಿತ ಸದಸ್ಯೆ. ಇಂದಿರಾ ನಗರ, ಬಸವೇಶ್ವರ ಬಡಾವಣೆ, ಗಣೇಶ್ ಗ್ಯಾಸ್ ಗೋಡೌನ್ ಪ್ರದೇಶ, ಪಂಪಾ ಕಲಾಮಂದಿರ, ವಸ್ತ್ರದ ಆಸ್ಪತ್ರೆ, ವಿನಾಯಕ ಆಸ್ಪತ್ರೆ, ದೀಪಾಲಿ ಆಸ್ಪತ್ರೆ, ಚರ್ಚ್, ಈಗಲ್ ಗಾರ್ಡನ್, ಅಂಬೇಡ್ಕರ್ ವೃತ್ತ ಸೇರಿ ಕೆಲ ಪ್ರದೇಶಗಳು ಈ ವಾರ್ಡ್‌ನಲ್ಲಿವೆ. ರು. 15 ಲಕ್ಷ ವೆಚ್ಚದಲ್ಲಿ ದೊಡ್ಡ ಚರಂಡಿ ನಿರ್ಮಾಣ ಮಾಡಲಾಗಿದೆ. ಅಮರಾವತಿ, ಬಸವೇಶ್ವರ ಬಡಾವಣೆಯಲ್ಲಿ ರು. 60 ಲಕ್ಷದಲ್ಲಿ ಡಾಂಬರ್ ರಸ್ತೆ, ಚರಂಡಿ ನಿರ್ಮಾಣವಾಗಿವೆ. ಸಿಸಿ ರಸ್ತೆ ನಿರ್ಮಿಸಲಾಗಿದೆ. ರು. 10 ಲಕ್ಷ ವೆಚ್ಚದಲ್ಲಿ ಕುಡಿಯುವ ನೀರಿನ ಪೈಪ್‌ಲೈನ್ ಸೇರಿ ಅಭಿವೃದ್ಧಿ ಕಾರ್ಯಗಳು ನಡೆದಿವೆ. ಕಳೆದ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ಓ. ಶಾಂತಮ್ಮ ಸೋತಿದ್ದರು.
ಸ್ಲಂಗೆ ಬೇಕು ಕಾಯಕಲ್ಪ
ಕಾಂಗ್ರೆಸ್‌ನಿಂದ ಗೆದ್ದು ಬಿಜೆಪಿಯಲ್ಲಿ ಗುರುತಿಸಿಕೊಂಡಿರುವ ಎ. ಖುರ್ಷಿದ್ 16ನೇ ವಾರ್ಡ್‌ನ ನಿರ್ಗಮಿತ ಸದಸ್ಯೆ. ಚಲುವಾದಿ ಕೇರಿ, ಹಳೆ ಕೆಇಬಿ ಕಚೇರಿ, ಬಾಬುಜಿ ಶಾಲೆಯಿಂದ ದೋಬಿಘಾಟ್ ಪ್ರದೇಶ, ಗುಂಡಮ್ಮ ಬಾವಿ, ಎಂ.ಎಸ್. ರಘು ಪ್ಲಾಟ್, ನೂರಾನಿ ಮಸೀದಿ ಹಿಂಭಾಗ ಸೇರಿ 2 ಸ್ಲಂ ಪ್ರದೇಶಗಳು ಈ ವಾರ್ಡ್‌ನಲ್ಲಿವೆ. 33 ಕೆವಿ ವಿದ್ಯುತ್ ತಂತಿ ಮನೆಗಳ ಮೇಲೆ ಹಾದು ಹೋಗಿತ್ತು. ರು. 12 ಲಕ್ಷ ವೆಚ್ಚದಲ್ಲಿ ತಂತಿಯನ್ನು ಸ್ಥಳಾಂತರಿಸಲಾಗಿದೆ. ರು. 7 ಲಕ್ಷ ವೆಚ್ಚದಲ್ಲಿ ಸಮುದಾಯ ಭವನ, ಶೌಚಾಲಯ, ನೂರಾನಿ ಮಸೀದಿ ಪ್ರದೇಶದ 6 ಓಣಿಗಳಲ್ಲಿ ಸಿಸಿ ರಸ್ತೆ, ಚರಂಡಿ, ನೀರಿನ ಪೈಪ್‌ಲೈನ್, ದೋಬಿಘಾಟ್‌ನಲ್ಲಿ ಮಳೆ ನೀರು ಮನೆಗೆ ನುಗ್ಗುವುದನ್ನು ದುರಸ್ತಿಗೊಳಿಸಲಾಗಿದೆ. ಆದರೆ ಸ್ಲಂ ಪ್ರದೇಶ ಅಭಿವೃದ್ಧಿಯಾಗಬೇಕು. ವಾರ್ಡ್‌ನ ಒಳ ರಸ್ತೆಗಳು, ಒಳಚರಂಡಿ ಇನ್ನೂ ಅಭಿವೃದ್ಧಿಯಾಗಬೇಕಿದೆ.
ಓದಲಿಕ್ಕೆ ಗ್ರಂಥಾಲಯ ಸಿಕ್ಕಿತು
ಬಿಜೆಪಿಯಿಂದ ಆಯ್ಕೆಯಾದ ರತ್ನಮ್ಮ 24ನೇ ವಾರ್ಡ್‌ನ ನಿರ್ಗಮಿತ ಸದಸ್ಯೆ. ಕಂಚಗಾರ ಪೇಟೆ, ಅಂಬಾಚರಕ ಪ್ರದೇಶ, ಅಂಬೇಡ್ಕರ್ ನಗರ, ವಡಕರಾಯ ದೇವಸ್ಥಾನ, ಬಳ್ಳಾರಿ ರಸ್ತೆಯ ಆರ್.ಪಿ. ಮನೆ ಸಮೀಪದ ಪ್ರದೇಶ ಸೇರಿ ಇತರೆ ಪ್ರದೇಶಗಳು ಈ ವಾರ್ಡ್‌ಗೆ ಸೇರುತ್ತವೆ. ಈಶ್ವರ ನಗರದ 5 ಸಿಸಿ ರಸ್ತೆ ನಿರ್ಮಾಣ, ಚರಂಡಿ, ಅಂಬೇಡ್ಕರ್ ನಗರದಲ್ಲಿ ಸಿಡಿ ಕೆಲಸ, ಅಂಬೇಡ್ಕರ್ ಶಾಲೆ ಸುತ್ತಲೂ ಕಾಂಪೌಂಡ್, ಕಂಚಗಾರ ಪೇಟೆ, ಅಂಬಾಚರಕ ಪ್ರದೇಶದಲ್ಲಿ ಸಿಸಿ ರಸ್ತೆ, ಚರಂಡಿ, ನೆಲಕ್ಕೆ ಟೈಲ್ಸ್ ಹಾಕಲಾಗಿದೆ. ರು. 10 ಲಕ್ಷ ವೆಚ್ಚದಲ್ಲಿ ಗ್ರಂಥಾಲಯ, ರು. 6 ಲಕ್ಷ ವೆಚ್ಚದಲ್ಲಿ ಸಮುದಾಯ ಭವನ ನಿರ್ಮಾಣ. ಇನ್ನೂ ಕೆಲ ರಸ್ತೆಗಳ ಅಭಿವೃದ್ಧಿ, ಚರಂಡಿ, ಒಳಚರಂಡಿ ವ್ಯವಸ್ಥೆ, ಕುಡಿಯುವ ನೀರಿನ ಪೈಪ್‌ಲೈನ್, ಬಳ್ಳಾರಿ ರಸ್ತೆಯಿಂದ ಉಕ್ಕಡಕೇರಿ ಗರಡಿಮನೆಗೆ 30 ಅಡಿ ಡಾಂಬರ್ ರಸ್ತೆ ನಿರ್ಮಾಣವಾಗಬೇಕಿದೆ. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಮಮ್ತಾಜ್ ಬೇಗಂ ಸೋಲುಂಡಿದ್ದರು.
ಈ ಬಾರಿ ಇಲ್ಲ ಅವಿರೋಧ
ಅವಿರೋಧವಾಗಿ ಬಿಜೆಪಿಯಿಂದ ಆಯ್ಕೆಗೊಂಡ ನೀಲಮ್ಮ 25ನೇ ವಾರ್ಡ್‌ನ ನಿರ್ಗಮಿತ ಸದಸ್ಯೆ. ಚಿತ್ರಕೇರಿ, ಪಲ್ಲದಕಟ್ಟೆ ಪ್ರದೇಶ, ಮುದಿಯಪ್ಪನಗುಡಿ, ಕೊಟ್ಟೂರುಸ್ವಾಮಿ ಮಠ, ಮೇನ್ ಬಜಾರ್, ಕಡ್ಲೇರ್ ಓಣಿ, ಹಳೇ ಮ್ಯಾದಾರ್ ರಸ್ತೆ, ಜಾಲೇರ್ ಓಣಿ ಈ ವಾರ್ಡ್‌ನ ವ್ಯಾಪ್ತಿಗೆ ಒಳಪಡುತ್ತದೆ. ವಾಲ್ಮೀಕಿ, ಲಿಂಗಾಯಿತ, ಜೈನ ಸಮುದಾಯ ನಿರ್ಣಾಯಕರು. ಚಿತ್ರಕೇರಿಯಲ್ಲಿ ಸಿಸಿ ರಸ್ತೆ, ಚರಂಡಿ, ಪಲ್ಲದಕಟ್ಟೆ ರಸ್ತೆ, ಚರಂಡಿ, ಕೊಟ್ಟೂರುಸ್ವಾಮಿ ಮಠದ ರಸ್ತೆಗಳು, ಸಮುದಾಯ ಭವನ ನಿರ್ಮಾಣ, ಒಳಚರಂಡಿ ವ್ಯವಸ್ಥೆ ಅಭಿವೃದ್ಧಿ ಕಾರ್ಯಗಳು ನಡೆದಿವೆ. ಆದರೆ ಇನ್ನೂ ರಸ್ತೆಗಳ ಅಭಿವೃದ್ಧಿ, ಶಾಚಾಲಯ, ಗ್ರಂಥಾಲಯ, ವಿದ್ಯುತ್ ದೀಪಗಳ ವ್ಯವಸ್ಥೆ ಕಲ್ಪಿಸಬೇಕು. ಕಳೆದ ಬಾರಿ ಇಲ್ಲಿ ಅವಿರೋಧ ಆಯ್ಕೆಯಾಗಿತ್ತು. ಆದರೆ ಈ ಬಾರಿ ಚುನಾವಣೆ ನಡೆಯುವುದು ಖಚಿತ.
ಅಂದುಕೊಂಡಂತೆ ಆಗಿಲ್ಲ
ಬಿಜಿಪಿಯಿಂದ ಆಯ್ಕೆಯಾಗಿರುವ ಚಿಗಟೇರಿ ಶಂಕ್ರಮ್ಮ 34ನೇ ವಾರ್ಡ್‌ನ ನಿರ್ಗಮಿತ ಸದಸ್ಯೆ. ಬಾಣದಕೇರಿ, ಉಕ್ಕಡಕೇರಿ ಕೆಲ ಪ್ರದೇಶ, ಚಿತ್ರಕೇರಿ ಸ್ಪಲ್ಪ ಪ್ರದೇಶ, ಹರಿಜನ ಕೇರಿ, ದೇವಾಂಗ ಪೇಟೆ, ಗೌಳೇರ್ ಓಣಿ, ಶಂಕ್ರಮ್ಮನಗುಡಿ, ಊರಮ್ಮನ ಗುಡಿ ಸೇರಿದಂತೆ ಕೆಲ ಪ್ರದೇಶಗಳು 34ನೇ ವಾರ್ಡ್‌ಗೆ ಒಳಪಡುತ್ತವೆ. ವಾಲ್ಮೀಕಿ,  ದೇವಾಂಗ, ಗೌಳೇರ್, ಮಡಿವಾಳ, ಜೀನುಗಾರ ಸಮುದಾಯ ಸೇರಿದಂತೆ ಅಲ್ಪಸಂಖ್ಯಾತರು, ಹಿಂದುಳಿದ ವರ್ಗದವರು ಈ ವಾರ್ಡ್ ವ್ಯಾಪ್ತಿಯಲ್ಲಿದ್ದಾರೆ. ಸಮುದಾಯ ಭವನ, ಶೌಚಾಲಯ ನಿರ್ಮಾಣ, ರಸ್ತೆ, ಚರಂಡಿ, ಒಳ ಚರಂಡಿ ವ್ಯವಸ್ಥೆ, ಕುಡಿಯುವ ನೀರಿನ ಪೈಪ್‌ಲೈನ್, ವಿದ್ಯುತ್ ದೀಪಗಳ ಅಳವಡಿಕೆ ಅಭಿವೃದ್ಧಿ ಕೆಲಸಗಳು ನಡೆದಿವೆ. ಈ ವಾರ್ಡ್ ಸ್ಪಲ್ಪಮಟ್ಟಿಗೆ ದೊಡ್ಡ ಪ್ರದೇಶ ಹೊಂದಿರುವುದರಿಂದ ಅಭಿವೃದ್ಧಿ ಕಾರ್ಯಗಳು ಇನ್ನೂ ನಡೆದಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement