ಬಳ್ಳಾರಿ

ಹರಿದ ಹಣ: ಅಭಿವೃದ್ಧಿ ಶೂನ್ಯ

ಚಂದ್ರು ಕೊಂಚಿಗೇರಿ
ಕನ್ನಡಪ್ರಭ ವಾರ್ತೆ, ಹೂವಿನಹಡಗಲಿ, ಫೆ. 23
ಇಲ್ಲಿನ ಪುರಸಭೆ 23 ಸದಸ್ಯರನ್ನು ಹೊಂದಿದೆ. ನಿರ್ಗಮಿತ ಸದಸ್ಯರಿಗೆ ಜನಹಿತಕ್ಕಿಂತ ಸ್ವಹಿತಾಸಕ್ತಿಯೇ ಮುಖ್ಯವಾದಂತೆ ಕಂಡುಬರುತ್ತದೆ. ಹಲವು ಸದಸ್ಯರು ಕಾಮಗಾರಿ ಗುತ್ತಿಗೆ ತಾವೇ ಪಡೆದು, ಲಾಭ ಮಾಡಿಕೊಂಡಿದ್ದಾರೆ. ತಮ್ಮನ್ನು ಆಯ್ಕೆ ಮಾಡಿರುವ ಮತದಾರರನ್ನು ಮರೆತಿರುವ ಪುರಸಭೆ ಸದಸ್ಯರು, ಸರ್ಕಾರದಿಂದ ಸಾಕಷ್ಟು ಅನುದಾನ ಬಂದರೂ ಅಭಿವೃದ್ಧಿಗೆ ಮನಸ್ಸು ಮಾಡಿಲ್ಲ.
ಪಟ್ಟಣದಲ್ಲೊಂದು ಸುತ್ತು: ಅಧಿಕಾರಿಗಳು ಮತ್ತು ಸಿಬ್ಬಂದಿ ನಡುವೆ ಇಲ್ಲದ ಸಾಮರಸ್ಯ ಮತ್ತು ಪುರಪಿತೃಗಳ ಇಚ್ಛಾಶಕ್ತಿ ಕೊರತೆಯಿಂದಾಗಿ 10-15 ದಿನಕ್ಕೊಮ್ಮೆ ಕುಡಿಯುವ ನೀರು ಬರುತ್ತಿದೆ. ಗಬ್ಬೆದ್ದು ನಾರುವ ಚರಂಡಿ, ಕಸ ವಿಲೇವಾರಿ ಇಲ್ಲ, ಕಾಮಗಾರಿ ಅನುಷ್ಠಾನವಿಲ್ಲದೆ ಅದೇ ಧೂಳು ತುಂಬಿರುವ ರಸ್ತೆ. ಒಳಚರಂಡಿ ಯೋಜನೆಯಿಂದ ಪಟ್ಟಣದ ಸಿಸಿ ರಸ್ತೆಗಳೆಲ್ಲ ಕಿತ್ತು ಹಾಕಲಾಗಿದ್ದು, ಬೈಕ್ ಸಂಚಾರಕ್ಕೂ ಸರಿಯಾದ ದಾರಿಯೂ ಇಲ್ಲ. ಇದನ್ನೆಲ್ಲ ಮನಸ್ಸಿನಲ್ಲಿಟ್ಟುಕೊಂಡು ಮತದಾರರು ಚುನಾವಣೆಯಲ್ಲಿ ಪಾಠ ಕಲಿಸಲು ಸಮಯ ಕಾಯುತ್ತಿದ್ದಾರೆ.
ದಿನದಿಂದ ದಿನಕ್ಕೆ ಬೆಳೆಯುತ್ತಿರುವ ಪಟ್ಟಣದ ಪಕ್ಕದಲ್ಲೇ ತುಂಗಭದ್ರೆ ಹರಿದರೂ ಕುಡಿಯುವ ನೀರಿನ ಬರ ಮಾತ್ರ ತಪ್ಪಿಲ್ಲ. ರು. 2 ಕೋಟಿಗಳ 2ನೇ ಹಂತದ ಕುಡಿಯುವ ನೀರಿನ ಕಾಮಗಾರಿ ಪ್ರಗತಿಯಲ್ಲಿದೆ. ನಗರೋತ್ಥಾನ ಯೋಜನೆಯಡಿ ರು. 5 ಕೋಟಿ ಅನುದಾನದಲ್ಲಿ ಮುಖ್ಯರಸ್ತೆ ಅಗಲೀಕರಣ ಮಾಡಿ ರಸ್ತೆ, ಚರಂಡಿ ಅಭಿವೃದ್ಧಿ ಮಾಡಲಾಗಿದೆ. ಉಳಿದ ಬಡಾವಣೆಗಳಲ್ಲಿ ಈ ವರೆಗೂ ಸಮರ್ಪಕ ಸಿಸಿ ರಸ್ತೆ, ಚರಂಡಿ ನಿರ್ಮಾಣವಿಲ್ಲ. ಬೀದಿದೀಪ ನಿರ್ವಹಣೆಯಂತೂ ಆ ದೇವರಿಗೆ ಪ್ರೀತಿ.
ರಾಜಕೀಯ ಮೇಲಾಟ: ರಸ್ತೆ ಅಗಲೀಕರಣ ಆಗಿ 3 ವರ್ಷ ಕಳೆಯುತ್ತ ಬಂದರೂ ಪುರಸಭೆ ಈ ವರೆಗೂ ಸಾರ್ವಜನಿಕ ಶೌಚಾಲಯಗಳನ್ನು ನಿರ್ಮಾಣ ಮಾಡಿಲ್ಲ. ಈ ಹಿಂದಿನ ಬಹುತೇಕ ಚುನಾವಣೆಗಳಲ್ಲಿ ಎಂ.ಪಿ. ಪ್ರಕಾಶ್ ನೇತೃತ್ವದ ಜೆಡಿಎಸ್ ತೆಕ್ಕೆಯಲ್ಲಿ ಪುರಸಭೆ ಇತ್ತು. ಜೆಡಿಎಸ್, ಕಾಂಗ್ರೆಸ್ ಮಧ್ಯೆ ಸ್ಪರ್ಧೆ ಏರ್ಪಡುತ್ತಿತ್ತು. ಕಳೆದ ಚುನಾವಣೆಯಿಂದ ಬಿಜೆಪಿ ಎಂಟ್ರಿಯಾಗಿ ಖಾತೆ ತೆರೆಯಲಿಲ್ಲ. ಅನಂತರದ ರಾಜಕೀಯ ಬೆಳವಣಿಗೆಯಿಂದ ಎಂ.ಪಿ. ಪ್ರಕಾಶ್ ಕಾಂಗ್ರೆಸ್ ಸೇರ್ಪಡೆಯಾದ ಬಳಿಕ ಜೆಡಿಎಸ್ ಸದಸ್ಯರು ಕಾಂಗ್ರೆಸ್ ಸದಸ್ಯರಾಗಿದ್ದರು. ಆ. 15 ಪಾರ್ಕ್, ರಂಗಭಾರತಿ ಪಾರ್ಕ್, ಮಿನಿವಿಧಾನಸೌಧದಲ್ಲಿ ಪಾರ್ಕ್ ಹೀಗೆ ಸಾಕಷ್ಟು ಅನುದಾನವನ್ನು ಪಾರ್ಕ್ ಅಭಿವೃದ್ಧಿಗೆ ವೆಚ್ಚ ಮಾಡಲಾಗಿದೆ. ರು. 11 ಕೋಟಿಯನ್ನು ಒಳಚರಂಡಿ ಯೋಜನೆಗೆ ಮಂಜೂರು ಮಾಡಿಸಿದ್ದರು.
ಬಿ ಫಾರಂಗೆ ಹೆಚ್ಚಿದ ಒತ್ತಡ: ಶಾಸಕ ಚಂದ್ರನಾಯ್ಕ ಸಾಕಷ್ಟು ವಿರೋಧದ ನಡುವೆ ದಿಟ್ಟತನದಿಂದ ರಸ್ತೆ ಅಗಲೀಕರಣ ಮಾಡಿದ್ದಾರೆ. ನಗರೋತ್ಥಾನ ಯೋಜನೆಯಡಿ ರು. 5 ಕೋಟಿ ಅನುದಾನದಲ್ಲಿ ರಸ್ತೆ, ಚರಂಡಿ, ರಸ್ತೆ ಅಗಲೀಕರಣ ಮಾಡಲಾಗಿದೆ. ಪಟ್ಟಣಗಳ ಅಭಿವೃದ್ಧಿಗೆ ನೀಡಿರುವ ಎಸ್‌ಎಫ್‌ಸಿ ಅನುದಾನ 5 ವರ್ಷದಲ್ಲಿ ರು. 1063.29 ಲಕ್ಷ ಬಿಡುಗಡೆಯಾಗಿದೆ. ಇಷ್ಟೊಂದು ಅನುದಾನ ಬಂದರೂ ಅಭಿವೃದ್ಧಿ ಮಾತ್ರ ಎಲ್ಲಿಯೂ ಕಣ್ಣಿಗೆ ಕಾಣುತ್ತಿಲ್ಲ. ಕಾಂಗ್ರೆಸ್, ಬಿಜೆಪಿ, ಜೆಡಿಎಸ್, ಕೆಜೆಪಿ, ಬಿಎಸ್ಸಾರ್ ಕಾಂಗ್ರೆಸ್ ಪಕ್ಷಗಳ ಟಿಕೆಟ್‌ಗಾಗಿ ಬಾಗಿಲು ತಟ್ಟುತ್ತಿರುವ ಅಭ್ಯರ್ಥಿಗಳ ಸಂಖ್ಯೆ ಹನುಮನ ಬಾಲದಂತೆ ಬೆಳೆದಿದೆ. ಕಾಂಗ್ರೆಸ್‌ನಲ್ಲಿ ಭಿನ್ನಮತದಿಂದ ಸ್ಥಳೀಯ ಕಾಂಗ್ರೆಸ್ ನಾಯಕರು 11 ಬಿ ಫಾರಂ ತಮ್ಮ ಸ್ವಾಧೀನ ನೀಡಬೇಕೆಂದು ಪಟ್ಟು ಹಿಡಿದಿದ್ದಾರೆ.
ಪುರಸಭೆಯ 23 ವಾರ್ಡ್‌ಗಳ ಚುನಾವಣಾ ವೆಚ್ಚವನ್ನು ಮುಂಬರುವ ವಿಧಾನಸಭಾ ಚುನಾವಣೆಯ ಆಕಾಂಕ್ಷಿ ಅಭ್ಯರ್ಥಿಗಳೇ ಭರಿಸುತ್ತಿರುವುದರಿಂದ ಸ್ಪರ್ಧಾಳುಗಳ ಪಟ್ಟಿ ಗಜಗಾತ್ರದಲ್ಲಿದೆ. ಒಟ್ಟಾರೆ ಆಕಾಂಕ್ಷಿಗಳಾದವರಿಗೆ ಅವಕಾಶಗಳು ಹೆಚ್ಚಾಗಿವೆ, ಇದರಿಂದ ಮತದಾರ ಯಾವ ಪಕ್ಷಕ್ಕೆ ಮಣೆ ಹಾಕುತ್ತಾನೋ ಕಾದು ನೋಡಬೇಕಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಾಳೆ CJPಯ ತಿರಂಗಾ ಮೆರವಣಿಗೆ ನಡೆಯಬೇಕಿದ್ದ ದೆಹಲಿಯ ಸೆಂಟ್ರಲ್ ಪಾರ್ಕ್ ಅನ್ನು 2 ದಿನ ಮುಚ್ಚಿದ NDMC!

ಕನ್ನಡಿಗರು ಕೊಟ್ಟ ದುಡ್ಡಲ್ಲೇ AR Rahman ತಮ್ಮ ಮೊದಲ ಸ್ಟುಡಿಯೋ ಕಟ್ಟಿದ್ದು: ನಟ ಯಶ್

ದೇಶಕ್ಕೆ ಹೇಗೆ ಬೆಂಕಿ ಹಚ್ಚಬೇಕು ಎಂಬುದನ್ನು ಬಾಂಗ್ಲಾದೇಶ ನಮಗೆ ತೋರಿಸಿಕೊಟ್ಟಿದೆ: ನೇಹಾ ಬೋರಾ ಹೇಳಿಕೆಗೆ ಬಿಜೆಪಿ ಆಕ್ರೋಶ!

Ramayana: 'ರಾಮಾಯಣ'ದ ರನ್ ಟೈಮ್ ಮೂರು ಗಂಟೆಗೂ ಹೆಚ್ಚು; ಅಮೆರಿಕದಲ್ಲಿ 'PG-13' ರೇಟಿಂಗ್!

ದೆಹಲಿಯ ರಾಮಲೀಲಾದಲ್ಲಿ ಈ ಬಾರಿ ರಾವಣನ ಜೊತೆಗೆ 30 ಅಡಿ ಎತ್ತರದ ಕಾಕ್ರೋಚ್ ಪ್ರತಿಕೃತಿ ದಹನ!