ಮಳೆ, ಬೆಳೆ ಸಂಪಾತಲೇ ಪರಾಕ್...
ಹೂವಿನಹಡಗಲಿ: ಮಳೆ-ಬೆಳೆ ಸಂಪಾತಲೇ ಪರಾಕ್...
- ಇದು ನಾಡಿನ ಸುಪ್ರಸಿದ್ಧ ಶ್ರೀ ಮೈಲಾರಲಿಂಗೇಶ್ವರ ಜಾತ್ರೆಯ ಕಾರ್ಣಿಕೋತ್ಸವದ ಉದ್ಘೋಷ.
ತುಪ್ಪ ಹಚ್ಚಿದ 20 ಅಡಿಯ ಬಿಲ್ಲನ್ನೇರಿ ಲಕ್ಷಾಂತರ ಸಂಖ್ಯೆಯಲ್ಲಿ ಸೇರಿದ್ದ ನಾಡಿನ ಭಕ್ತರ ಕಡೆಗೆ ಮತ್ತು ದಶದಿಕ್ಕುಗಳ ಕಡೆಗೆ ನೋಡುತ್ತಾ ಸದ್ದಲೇ... ಎಂದು ಗ್ವಾರಪ್ಪ ಹೇಳಿದ ಕೂಡಲೇ ಡೆಂಕಣ ಮರಡಿಯಲ್ಲಿ ಕ್ಷಣ ಕಾಲ ಮೌನ ಆವರಿಸಿತು. ನಂತರದಲ್ಲಿ 'ಮಳೆ, ಬೆಳೆ ಸಂಪಾತಲೇ ಪರಾಕ್'(ಸಕಾಲದಲ್ಲಿ ಮಳೆ, ಬೆಳೆಯಾಗುವುದು) ಎಂದು ನಾಡಿನ ಭವಿಷ್ಯ ನುಡಿದರು.
ಕಾರ್ಣಿಕೋತ್ಸವವು ಮುಗಿದ ಕೂಡಲೇ ಡೆಂಕಣ ಮರಡಿಯಲ್ಲಿ ನೆರೆದಿದ್ದ ಭಕ್ತ ಸಮೂಹ ಕಾರ್ಣಿಕದ ಆಗು ಹೋಗುಗಳ ಕುರಿತು ಚರ್ಚೆಯಲ್ಲಿ ತೊಡಗಿದರು. ಕಳೆದ ವರ್ಷ 'ಕಷ್ಟ ಪಟ್ಟು ಸುಖ ಪಟ್ಟಿಲೇ ಪರಾಕ್' ಎಂದು ಕಾರ್ಣಿಕ ನುಡಿಯನ್ನು ಗ್ವಾರಪ್ಪ ಹೇಳಿದ್ದನು. ಈ ಬಾರಿ ಮಳೆ- ಬೆಳೆ ಸಂಪಾತಲೇ ಪರಾಕ್ ಎಂದು ಗ್ವಾರಪ್ಪ ಹೇಳಿದ ಕೂಡಲೇ ನೆರೆದಿದ್ದ ರೈತ ಸಮೂಹವು ಮುಂಬರುವ ದಿನಗಳಲ್ಲಿ ಸಕಾಲಕ್ಕೆ ಮಳೆ- ಬೆಳೆಗಳು ಚೆನ್ನಾಗಿ ಆಗುತ್ತವೆ ಎಂದು ಹೇಳುತ್ತಲೇ ಮಂದಹಾಸ ಬೀರಿದರು. ಈ ಬಾರಿಯ ಕಾರ್ಣಿಕದ ನುಡಿ ಈ ಹಿಂದೆ ನಾಲ್ಕು ಬಾರಿ ಹೇಳಲಾಗಿದೆ. ದಾಖಲೆಯ ಪ್ರಕಾರ ಈ ವರ್ಷದ ಕಾರ್ಣಿಕ 112ನೇ ಭವಿಷ್ಯದ ನುಡಿಯಾಗಿದೆ. ಮೈಲಾರಲಿಂಗೇಶ್ವರ ಕಾರ್ಣಿಕವು 19ನೇ ಶತಮಾನದಿಂದ ನಡೆದು ಬಂದಿದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.