ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಸಮರ್ಪಕ ವಿದ್ಯುತ್ ಪೂರೈಸದಿದ್ದರೆ ಚುನಾವಣೆ ಬಹಿಷ್ಕಾರ

Rashmi Kasaragodu
Updated On : 28 Feb 2013, 11:10 am

ಕನ್ನಡಪ್ರಭ ವಾರ್ತೆ, ಸಂಡೂರು, ಫೆ. 27
ತಮ್ಮ ವಾರ್ಡ್‌ಗೆ ಗುಣಮಟ್ಟದ ವಿದ್ಯುತ್ ಪೂರೈಕೆ ಮಾಡದಿದ್ದರೆ ಪುರಸಭೆ ಚುನಾವಣೆ ಬಹಿಷ್ಕರಿಸುವುದಾಗಿ ಪಟ್ಟಣದ 1ನೇ ವಾರ್ಡ್‌ನಲ್ಲಿ ಬರುವ ಶ್ರೀನಿವಾಸ ಚಿತ್ರಮಂದಿರದ ಬಳಿಯ ಪಾರ್ಕ್ ಹತ್ತಿರದ ಜನತೆ ಹೇಳಿದ್ದಾರೆ.
ಈ ಕುರಿತು ಈ ಪ್ರದೇಶದ ನಾಗರಿಕರು ಬುಧವಾರ ತಹಸೀಲ್ದಾರ್ ಆರ್. ತಿಮ್ಮಯ್ಯ ಅವರಿಗೆ ಮನವಿ ಸಲ್ಲಿಸಿದ್ದಾರೆ. ಮನೆಗಳಿಗೆ ತ್ರೀಫೇಸ್ ವಿದ್ಯುತ್ ಪೂರೈಕೆಯಾಗುತ್ತಿಲ್ಲ. ಈ ಭಾಗದಲ್ಲಿ ಒಂದು ಹೆಚ್ಚುವರಿ ಟಿಸಿ ಕೂರಿಸಿ, ಗುಣಮಟ್ಟದ ವಿದ್ಯುತ್ ಪೂರೈಸುವಂತೆ ಹಲವು ಬಾರಿ ಜೆಸ್ಕಾಂ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಕ್ರಮ ಕೈಗೊಂಡಿಲ್ಲ. ಗುಣಮಟ್ಟದ ವಿದ್ಯುತ್ ಪೂರೈಸಲು ಕ್ರಮ ಕೈಗೊಳ್ಳುವಂತೆ ಜೆಸ್ಕಾಂ ಅಧಿಕಾರಿಗಳಿಗೆ ಸೂಚಿಸಬೇಕು. ಇಲ್ಲದಿದ್ದರೆ ಮಾ. 7ರಂದು ನಡೆಯಲಿರುವ ಪುರಸಭೆ ಚುನಾವಣೆ ಬಹಿಷ್ಕರಿಸುವುದಾಗಿ ಹೇಳಿದರು.
ಒಂದನೇ ವಾರ್ಡ್‌ನ ಪಾರ್ಕ್ ಹತ್ತಿರವಿರುವ ಮನೆಗಳಲ್ಲಿ ಬೆಳಗ್ಗೆ ಹಾಗೂ ಸಾಯಂಕಾಲವಾಯಿತೆಂದರೆ ಕಡಿಮೆ ವೋಲ್ಟೇಟ್ ಪೂರೈಕೆಯಾಗುತ್ತದೆ. ಅಲ್ಲದೇ ಆಗಾಗ ಹೆಚ್ಚು ಕಡಿಮೆಯಾಗುತ್ತದೆ. ಅದರಿಂದ ವಿದ್ಯುತ್ ಉಪಕರಣಗಳು ಹಾಳಾಗುತ್ತವೆ. ಬೀದಿ ದೀಪಗಳು ಬೇಗನೆ ಹಾಳಾಗುವುದರಿಂದ, ಕತ್ತಲಿನಲ್ಲಿ ಈ ಭಾಗದಲ್ಲಿ ಹೆಣ್ಣುಮಕ್ಕಳು ಹಾಗೂ ಚಿಕ್ಕಮಕ್ಕಳು ತಿರುಗಾಡಲು ಅಂಜುವಂತಹ ವಾತಾವರಣ ಉಂಟಾಗಿದೆ. ಈ ಭಾಗದಲ್ಲಿ ಗುಣಮಟ್ಟದ ವಿದ್ಯುತ್ ಪೂರೈಕೆಗೆ ಒತ್ತಾಯಿಸಿ, ಈ ಭಾಗದ ನಾಗರಿಕರು ಜೆಸ್ಕಾಂ ಕಚೇರಿಗೆ ನ. 2012ರಲ್ಲಿ ನಡೆದ ಸಾರ್ವಜನಿಕರ ಕುಂದುಕೊರತೆ ಸಭೆಯಲ್ಲಿ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ. ಪುರಸಭೆಯ ಸಾಮಾನ್ಯ ಸಭೆಯಲ್ಲಿ ಹಲವು ಬಾರಿ ಚರ್ಚಿತವಾಗಿದೆ ಹಾಗೂ ಬಳ್ಳಾರಿ ಜೆಸ್ಕಾಂ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಸೂಪರಿಂಟೆಂಡೆಂಟ್ ಎಂಜಿನಿಯರ್ ಅವರ  ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಒಂದನೇ ವಾರ್ಡ್ ನಾಗರಿಕರಾದ ಬಿ.ಎಂ. ಕುಮಾರಸ್ವಾಮಿ, ಬಿ.ಎಸ್. ನಾಗಪ್ಪ, ವಿ.ಎಂ. ನಾಗಭೂಷಣ, ಎಂ. ದಕ್ಷಿಣಮೂರ್ತಿ, ಪಿ. ರಾಜಾಭಕ್ಷಿ, ಎಚ್. ಶ್ರೀನಿವಾಸಲು, ಎಚ್.ಕೆ. ವಾಗೀಶ, ಎಂ. ಕುಮಾರಸ್ವಾಮಿ, ತಾಲೂಕು ನಾಗರಿಕ ಹಿತರಕ್ಷಣಾ ಸಮಿತಿ ಅಧ್ಯಕ್ಷ ಟಿ.ಎಂ. ಶಿವಕುಮಾರ್, ಕಾರ್ಯದರ್ಶಿ ಶ್ರೀಶೈಲ, ಕರವೇ (ಪ್ರವೀಣ ಶೆಟ್ಟಿ ಬಣ) ತಾಲೂಕು ಅಧ್ಯಕ್ಷ ಕೆ.ಆರ್. ಕುಮಾರಸ್ವಾಮಿ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement