ಇಂದಿನಿಂದ ಪೌರಾಣಿಕ ನಾಟಕೋತ್ಸವ
ಹೊಸಪೇಟೆ: ಮರಿಯಮ್ಮನಹಳ್ಳಿಯ ಮಹಿಳಾ ವೃತ್ತಿ ರಂಗ ಕಲಾವಿದರ ಸಂಘ ಹಾಗೂ ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯದ ಆಶ್ರಯದಲ್ಲಿ ಮಹಿಳಾ ಪೌರಾಣಿಕ ನಾಟಕೋತ್ಸವ ಮರಿಯಮ್ಮನಹಳ್ಳಿಯ ದುರ್ಗಾದಾಸ್ ಕಲಾಮಂದಿರದಲ್ಲಿ ಮಾ. 1ರಿಂದ 3ರ ವರೆಗೆ ನಡೆಯಲಿದೆ. ಮಾ. 1ರಂದು ರಾತ್ರಿ 8 ಗಂಟೆಗೆ ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಾ ಹಿ.ಚಿ. ಬೋರಲಿಂಗಯ್ಯ ಉದ್ಘಾಟಿಸುವರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಚೋರನೂರು ಕೊಟ್ರಪ್ಪ ಅಧ್ಯಕ್ಷತೆ ವಹಿಸುವರು. ನಂದಿಹಳ್ಳಿ ಕೇಂದ್ರದ ಕನ್ನಡ ಅಧ್ಯಯನ ಸಂಸ್ಥೆ ಮುಖ್ಯಸ್ಥೆ ಡಾ ಮಲ್ಲಿಕಾ ಘಂಟಿ, ಮರಿಯಮ್ಮನಹಳ್ಳಿಯ ವೈದ್ಯ ಡಾ ಬಿ. ಅಂಬಣ್ಣ, ನಾಟಕ ಅಕಾಡೆಮಿ ಸದಸ್ಯ ಶೀನಾ ನಾಡೋಳಿ, ಇಫ್ಕೋ ಸಂಸ್ಥೆಯ ಅಧಿಕಾರಿ ವಿಷ್ಣುತೀರ್ಥ ಕಲ್ಲೋರಕರ್, ಲಲಿತಕಲಾರಂಗದ ಅಧ್ಯಕ್ಷ ಹುರುಕೊಳ್ಳಿ ಮಂಜುನಾಥ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಮರಿಯಮ್ಮನಹಳ್ಳಿಯ ಹಿರಿಯ ಕಲಾವಿದ ಎಂ.ಬಿ. ಹನುಮಂತಪ್ಪ ಹಾಗೂ ಚಿತ್ತವಾಡ್ಗಿಯ ಸಂಗೀತ ಭಾರತಿ ಸಂಸ್ಥೆ ಸಂಸ್ಥಾಪಕ ಅಧ್ಯಕ್ಷ ಎಚ್.ಪಿ. ಕಲ್ಲಂಭಟ್ ಅವರನ್ನು ಸನ್ಮಾನಿಸಲಾಗುವುದು. ಅನಂತರ ತಿಪಟೂರಿನ ಹೇಮಲತಾ ಕಲಾವೃಂದವರಿಂದ ಬೆಳ್ಳಾವಿ ನರಹರಿ ಶಾಸ್ತ್ರಿಗಳು ರಚಿಸಿರುವ ಟಿ.ಎಚ್. ಹೇಮಲತಾ ನಿರ್ದೇಶನದ 'ಅಶೋಕವನ ಅರ್ಥಾತ್ ಮುದ್ರಿಕಾ ಪ್ರದಾನ' ನಾಟಕ ಪ್ರದರ್ಶನಗೊಳ್ಳಲಿದೆ ಮಹಿಳಾ ವೃತ್ತಿ ರಂಗ ಕಲಾವಿದರ ಸಂಘದ ಅಧ್ಯಕ್ಷೆ ಕೆ. ನಾಗರತ್ನಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.