ಬಳ್ಳಾರಿ: ನಗರದ ಮೋಕಾ ಕೇಂದ್ರ ಸ್ಥಾವರದಿಂದ ಗಾಂಧಿನಗರ ಯಂತ್ರಾಗಾರದವರೆಗೆ ಶುದ್ಧನೀರು ಪೂರೈಕೆ ಮಾಡುತ್ತಿದ್ದ 450 ಎಂಎಂ ವ್ಯಾಸದ ಏರು ಕೊಳವೆ ಮಾರ್ಗದ ಮಧ್ಯದಲ್ಲಿ ನೀರು ಸೋರಿಕೆ ಕಂಡುಬಂದಿದ್ದು, ಮಾ. 2ರಂದು ಈ ಮಾರ್ಗದ ದುರಸ್ತಿ ಕಾರ್ಯ ಕೈಗೊಳ್ಳಲಾಗುವುದು. ದುರಸ್ತಿ ಕಾರ್ಯ ಕೈಗೊಳ್ಳುವ ಹಿನ್ನೆಲೆಯಲ್ಲಿ ಯಂತ್ರಾಗಾರದಿಂದ ಸರಬರಾಜು ಆಗುವ ಪ್ರದೇಶಗಳಿಗೆ ಮಾ. 2 ಮತ್ತು 3ರಂದು ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಮಹಾನಗರ ಪಾಲಿಕೆ ಆಯುಕ್ತ ಡಿ.ಎಲ್. ನಾರಾಯಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಸಾರ್ವಜನಿಕರು ಜಲಮಂಡಳಿ ಮತ್ತು ಪಾಲಿಕೆಯೊಂದಿಗೆ ಸಹಕರಿಸಬೇಕೆಂದು ಮನವಿ ಮಾಡಿದ್ದಾರೆ.