ವಿಮ್ಸ್ ಆಡಳಿತ: ಸೇವೆ ಇಲ್ಲ, ಅಧಿಕಾರಕ್ಕಾಗಿ ಎಲ್ಲ
ಶಶಿಧರ ಮೇಟಿ
ಕನ್ನಡಪ್ರಭ ವಾರ್ತೆ, ಬಳ್ಳಾರಿ, ಜ. 22
ವೈದ್ಯಕೀಯ ಪ್ರವೇಶ ಪರೀಕ್ಷೆಯ ಅಕ್ರಮದ ಆರೋಪದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಸುದ್ದಿ ಮಾಡಿ, ಸಿಐಡಿ ತನಿಖೆ ಎದುರಿಸುತ್ತಿರುವ ಬಳ್ಳಾರಿ ವಿಮ್ಸ್ನ ವೈದ್ಯರು ಇದೀಗ ವಿಮ್ಸ್ ಆಡಳಿತಕ್ಕಾಗಿ ಕಿತ್ತಾಟ ನಡೆಸುವ ಮೂಲಕ ಮತ್ತೊಮ್ಮೆ ಸುದ್ದಿಯಾಗಲು ಹೊರಟಿದ್ದಾರೆ. ವಿಮ್ಸ್ನ್ನು ಪ್ರತಿಷ್ಠಿತ ಸಂಸ್ಥೆಯನ್ನಾಗಿ ರೂಪಿಸುವುದು ಬಿಟ್ಟು, ಅಧಿಕಾರದ ಆಸೆಗಾಗಿ ಕಚ್ಚಾಟ ನಡೆಸಿದ್ದಾರೆ ಇಲ್ಲಿನ ಅಧಿಕಾರಿಗಳು. ಈಗ ನಡೆದಿರುವುದು ವಿಮ್ಸ್ ನಿರ್ದೇಶಕ ಹಾಗೂ ಅಧೀಕ್ಷಕ ಸ್ಥಾನದ ಕುರ್ಚಿ ರಾಜಕೀಯದ ಕಾರುಬಾರು.
ಅತ್ತ ರಾಜಕೀಯದಲ್ಲಿ ಕುರ್ಚಿಗಾಗಿ ಕಿತ್ತಾಟ ನಡೆಯುತ್ತಿದ್ದರೆ ಇತ್ತ ವೈದ್ಯಕೀಯ ವಲಯದಲ್ಲಿ ಇಂತಹ ಕಿತ್ತಾಟ ನಡೆದಿದೆ ಎಂಬುದನ್ನು ತೋರಿಸಲು ಹೊರಟಿದೆ ಬಳ್ಳಾರಿ ವಿಮ್ಸ್. ವೈದ್ಯಕೀಯ ಪ್ರವೇಶ ಪರೀಕ್ಷೆಯ ಅಕ್ರಮ ಆರೋಪ ಇನ್ನೂ ಕಳಚಿಲ್ಲ, ಆಗಲೇ ಅಧೀಕ್ಷಕ ಕುರ್ಚಿಗಾಗಿ ನ್ಯಾಯಾಲಯದ ಮೆಟ್ಟಿಲು ಹತ್ತುವವರೆಗೆ ವಿಮ್ಸ್ನ ಕುರ್ಚಿ ರಾಜಕೀಯ ಬಂದು ನಿಂತಿರುವುದು ದುರಂತವೇ ಸರಿ. ಸಾಂಗವಾಗಿ ಸಾಗುತ್ತಿರುವ ವಿಮ್ಸ್ಗೆ ಸ್ಥಾನಗಳ ಬದಲಾವಣೆ ಗೊಂದಲ ಸೃಷ್ಟಿಸುತ್ತಿದೆ.
ಸ್ಥಾನ ಕಳೆದುಕೊಂಡರೂ!: ವಿಮ್ಸ್ ವೈದ್ಯಕೀಯ ಸ್ನಾತಕೋತ್ತರ ಪ್ರವೇಶ ಪರೀಕ್ಷೆಯಲ್ಲಿನ ಅವ್ಯವಹಾರದ ಆರೋಪದ ಹಿನ್ನೆಲೆಯಲ್ಲಿ ವಿಮ್ಸ್ ನಿರ್ದೇಶಕ ಡಾ.ಬಿ. ದೇವಾನಂದ್ ಮಂಡ್ಯಕ್ಕೆ ವರ್ಗಾವಣೆಯಾದರೆ, ವಿಮ್ಸ್ನ ಪ್ರಾಚಾರ್ಯ ಶ್ರೀನಿವಾಸಮೂರ್ತಿ ಪ್ರಾಂಶುಪಾಲ ಸ್ಥಾನ ತ್ಯಜಿಸಿ ರಾಯಚೂರಿಗೆ ವರ್ಗಾವಣೆಯಾಗಿದ್ದರು. ಹಲವರು ಅಮಾನತ್ತಿನ ಶಿಕ್ಷೆಗೆ ಒಳಗಾದರು. ಅಷ್ಟಾದರೂ ಇನ್ನೂ ಕೆಲವರಿಗೆ ಬುದ್ಧಿ ಬಂದಿಲ್ಲ. ವಿಮ್ಸ್ ಅಧಿಕಾರಕ್ಕಾಗಿ ರಾಜಕಾರಣ ನಡೆಸುತ್ತಿದ್ದಾರೆ. ವರ್ಗಾವಣೆಯಾಗಿ ಮಂಡ್ಯಕ್ಕೆ ಹೋಗಿರುವ ದೇವಾನಂದ್ ಬಳ್ಳಾರಿಗೆ ಬರಬೇಕೆಂದು ಹವಣಿಸುತ್ತಿದ್ದರೆ, ಅಧೀಕ್ಷಕ ಎಂ.ಡಿ. ಲಕ್ಷ್ಮಿನಾರಾಯಣ ಅವರನ್ನು ತೆಗೆದು ಆ ಸ್ಥಾನದಲ್ಲಿ ಶ್ರೀನಿವಾಸ್ ಅವರನ್ನು ಈಗಿನ ನಿರ್ದೇಶಕ ಗಂಗಾಧರಗೌಡ ನೇಮಕ ಮಾಡಿದ್ದಾರೆ. ಲಕ್ಷ್ಮಿ ನಾರಾಯಣ ನ್ಯಾಯಾಲಯದ ಮೆಟ್ಟಿಲೇರಿ ಅಧೀಕ್ಷಕ ಸ್ಥಾನಕ್ಕೆ ತಡೆಯಾಜ್ಞೆ ತಂದಿದ್ದಾರೆ.
ನಿರ್ದೇಶಕ ಡಾ.ಬಿ. ದೇವಾನಂದ ವರ್ಗಾವಣೆಯಾದರೆ, ವಿದ್ಯಾಧರ ಕಿನ್ನಾಳ್ ಅಧೀಕ್ಷಕ ಸ್ಥಾನವೇ ಬೇಡವೆಂದು ರಾಜಿನಾಮೆ ನೀಡಿದರು. ಆಗಿನಿಂದಲೂ ಎರಡು ಸ್ಥಾನಗಳಲ್ಲಿ ಗೊಂದಲ ಮನೆ ಮಾಡಿದೆ. ಜುಲೈ 10, 2012ರಂದು ವಸಂತ್ ಶೇಠ್ ನಿರ್ದೇಶಕರಾಗಿ ನೇಮಕರಾದರು. ಹೆಚ್ಚಿದ ಒತ್ತಡ ಲಾಬಿಗಳಿಂದಾಗಿ ಅದೇ ವರ್ಷ ನವಂಬರ್ನಲ್ಲಿ ರಾಜಿನಾಮೆ ನೀಡಿದರು. 2012ರ ಜನವರಿಯಲ್ಲಿ ವಿಮ್ಸ್ ಎಂ.ಡಿ. ಲಕ್ಷ್ಮಿನಾರಾಯಣ ಅಧೀಕ್ಷಕರಾಗಿ ನೇಮಕವಾದರು. ವಸಂತ ಶೇಠ್ ರಾಜಿನಾಮೆ ನಂತರ ಗಂಗಾಧರಗೌಡ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ. ಅಧೀಕ್ಷಕರಾಗಿದ್ದ ಲಕ್ಷ್ಮಿನಾರಾಯಣ ಅವರ ಸ್ಥಾನದಲ್ಲಿ ಶ್ರೀನಿವಾಸ ಅವರನ್ನು ಅಧೀಕ್ಷಕರಾಗಿ ನೇಮಕ ಮಾಡಿರುವುದು ಈ ಎಲ್ಲ ಗೊಂದಲಗಳಿಗೆ ಕಾರಣವಾಗಿದೆ.
ಅನುದಾನದ ಅರಿವು ಕಾರಣವಾಯ್ತೇ?: ವೈದ್ಯಕೀಯ ವೃತ್ತಿ ಜತೆಗೆ ಆಡಳಿತ ನಡೆಸುವುದು ತೀರಾ ಕಷ್ಟದ ಕೆಲಸವೆಂದು ವೈದ್ಯರು ಆಡಳಿತದ ಹತ್ತಿರವೂ ಸುಳಿಯುವುದಿಲ್ಲ. ಆದರೆ ವೈದ್ಯರು ಆಡಳಿತದ ಹಿಂದೆ ಹೀಗೆ ದುಂಬಾಲು ಬೀಳಲು ಕಾರಣವೇನು? ಉತ್ತಮ ಆಡಳಿತ ನಡೆಸುವ ಮೂಲಕ ಹೆಸರು ಗಳಿಸಬೇಕೆಂಬ ಹಂಬಲವಿದ್ದರೂ ಕುರ್ಚಿಗಾಗಿ ಕಚ್ಚಾಟ ನಡೆಯುತ್ತಿವೆ. ವಿಮ್ಸ್ಗೆ ಹರಿದು ಬರುವ ಅನುದಾನವೇ ಇದೀಗ ಕುರ್ಚಿಗಾಗಿ ಕಚ್ಚಾಟ ನಡೆಯಲು ಕಾರಣ ಎಂಬ ಮಾತೂ ಕೇಳಿಬರುತ್ತಿವೆ. ಇಷ್ಟೊಂದು ದೊಡ್ಡ ಸಂಸ್ಥೆಗೆ ನಿರ್ದೇಶಕನಾದೆ, ಅಧೀಕ್ಷಕನಾದೆ ಎಂಬ ಹೆಗ್ಗಳಿಕೆಗೆ ಸ್ಥಾನ ಬೇಕೆ? ಅಥವಾ ಹರಿದು ಬರುತ್ತಿರುವ ಹಣವೇ ಎಂಬುದು ಪ್ರಶ್ನಾರ್ಥಕ.
ಚರಂಡಿಯಾಗಿದೆ ವಿಮ್ಸ್: ವಿಮ್ಸ್ ಚರಂಡಿಯಾಗಿದೆ. ರಾಜಕೀಯ ಪಕ್ಷಗಳಲ್ಲಿಯೂ ಇಷ್ಟು ರಾಜಕಿಯ ನಡೆಯುವುದಿಲ್ಲ. ಸಾಮರ್ಥ್ಯಕ್ಕೆ ತಕ್ಕಂತೆ ಇಲ್ಲಿ ಸ್ಥಾನ ಅಲಂಕರಿಸುವುದಿಲ್ಲ, ವೈದ್ಯರಿಗಿರುವ ರಾಜಕೀಯ ವ್ಯಕ್ತಿಗಳ ಸಂಬಂಧದ ಮೇಲೆ ಸ್ಥಾನಗಳನ್ನು ಅಲಂಕರಿಸುತ್ತಾರೆ. ಇದರಿಂದಾಗಿ ವಿಮ್ಸ್ ವೈದ್ಯಕೀಯ ಸೇವೆ ಹಾಗೂ ಆಸ್ಪತ್ರೆಯ ಕಾರ್ಯದಕ್ಷತೆಯ ಮೇಲೆ ಪ್ರಭಾವ ಬೀಳುತ್ತದೆ. ಇನ್ನು ಸಂಸ್ಥೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವವರ ಮೇಲೆ ಪರಿಣಾಮ ಬೀಳುತ್ತದೆ ಎಂದು ಹೆಸರೇಳಲಿಚ್ಚಿಸದ ವೈದ್ಯರೊಬ್ಬರು ತಮ್ಮ ಅಳಲನ್ನು 'ಕನ್ನಡಪ್ರಭ'ದೊಂದಿಗೆ ಹೇಳಿಕೊಳ್ಳುತ್ತಾರೆ.
ವೈದ್ಯರು ಯಾವುದೇ ಅಧಿಕಾರದ ಹಿಂದೆ ಬೀಳದೆ ವೈದ್ಯೋಃ ನಾರಾಯಣೋ ಹರಿ ಎಂಬ ಕಲ್ಪನೆಯಲ್ಲಿ ರೋಗಿಗಳಯತ್ತ ಹೆಚ್ಚಿನ ಕಾಳಜಿ ವಹಿಸುವುದನ್ನು ನೋಡಿದ್ದೇವೆ. ಆದರೆ ಬಳ್ಳಾರಿ ವಿಮ್ಸ್ನ ಕೆಲ ವೈದ್ಯರಿಗೆ ತಮ್ಮ ಕ್ಷೇತ್ರದ ಸೇವೆಯ ಆಸಕ್ತಿಗಿಂತ ವಿಮ್ಸ್ ಆಡಳಿತದ ಆಸಕ್ತಿಯೇ ಹೆಚ್ಚಾಗಿದೆ. ವಿಮ್ಸ್ ನಿರ್ದೇಶಕ ಹಾಗೂ ಅಧೀಕ್ಷಕ ಹುದ್ದೆಗಳ ಮೇಲೆ ನಡೆಯುತ್ತಿರುವ ಲಾಬಿಗಳೇ ಇದಕ್ಕೆ ಸಾಕ್ಷಿ. ಇದೆಲ್ಲ ವೈದ್ಯರಿಗೆ ಬೇಕಾ ಎನ್ನುವುದು ಜನತೆ ಪ್ರಶ್ನೆ.