ಕ್ಯಾನ್ಸರ್ ಮುಕ್ತ ಸಮಾಜ ನಿರ್ಮಾಣವಾಗಲಿ
ಹೊಸಪೇಟೆ: ಕ್ಯಾನ್ಸರ್ ಮುಕ್ತ ಆರೋಗ್ಯವಂತ ಸಮಾಜ ನಿರ್ಮಾಣವಾಗಲಿ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಾ ಹಿ.ಚಿ. ಬೋರಲಿಂಗಯ್ಯ ಹೇಳಿದರು.
ಹಂಪಿ ಕನ್ನಡ ವಿವಿಯ ಪಂಪ ಸಭಾಂಗಣದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡ ವೈದ್ಯಕೀಯ ಆರೋಗ್ಯ ತಪಸಣಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಇತ್ತೀಚಿನ ಆಹಾರ ಪದ್ಧತಿ ಮತ್ತು ಜೀವನ ಶೈಲಿಯಿಂದಾಗಿ ರೋಗ-ರುಜಿನಗಳು ಹೆಚ್ಚಾಗುತ್ತಿದ್ದು, ನಿತ್ಯ ವ್ಯಾಯಾಮ ಮತ್ತು ಕ್ರೀಡೆಗಳ ಮೂಲಕ ಆರೋಗ್ಯ ಕಾಪಾಡಿಕೊಳ್ಳಬೇಕು. ಮಾನಸಿಕವಾಗಿ ಸದೃಢರಾಗಬೇಕಿದೆ ಎಂದರು.
ಬೆಂಗಳೂರಿನ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯ ವೈದ್ಯ ಡಾ ಮಹಾಂತೇಶ ಮಾತನಾಡಿ, ಇತ್ತೀಚೆಗೆ ಗರ್ಭಕೋಶ, ಮೆದುಳು, ಶ್ವಾಸಕೋಶ, ಬಾಯಿ ಹಾಗೂ ಸ್ತನದ ಕ್ಯಾನ್ಸರ್‌ಗಳು ಹೆಚ್ಚುತ್ತಿದ್ದು, ಆರೋಗ್ಯದ ಕಡೆಗೆ ಹೆಚ್ಚು ಗಮನ ಹರಿಸಬೇಕಾಗಿದೆ ಎಂದರು.
ಕಿದ್ವಾಯಿ ಸಂಸ್ಥೆಯ ಸಮಾಜ ಕಲ್ಯಾಣ ಅಧಿಕಾರಿ ಬಿ. ಲೋಕೇಶ್ ಮಾತನಾಡಿ, ಕ್ಯಾನ್ಸರ್‌ನ ಲಕ್ಷಣಗಳು, ರೋಗ ಹರಡುವ ವಿಧಾನ ಮತ್ತು ಅದನ್ನು ತಡೆಗಟ್ಟುವ ರೀತಿ; ಬೀಡಿ, ಸಿಗರೇಟ್, ಗುಟಕಾ ಮತ್ತು ತಂಬಾಕು ಸೇವನೆಯಿಂದ ಉಂಟಾಗುವ ಕ್ಯಾನ್ಸರ್ ಬಗ್ಗೆ ಸಭೆಯಲ್ಲಿ ವಿವರಿಸಿದರು. ಕಿದ್ವಾಯಿ ಸಂಸ್ಥೆಯ ವೈದ್ಯ ಡಾ ಪ್ರಿಯದರ್ಶಿನಿ ಉಪಸ್ಥಿತರಿದ್ದರು. ಹಂಪಿ ಕನ್ನಡ ವಿವಿಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಂಯೋಜನಾಧಿಕಾರಿ ಡಾ ತಾರಿಹಳ್ಳಿ ಹನುಮಂತಪ್ಪ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಶೋಧನಾ ವಿದ್ಯಾರ್ಥಿ ಧರ್ಮವೀರ ನಿರೂಪಿಸಿದರು.