ಮಕ್ಕಳಿಗೆ ಪೌಷ್ಟಿಕ ಆಹಾರ ನೀಡಿ
ಕನ್ನಡಪ್ರಭ ವಾರ್ತೆ, ಬಳ್ಳಾರಿ ಜ. 25
ಮಕ್ಕಳಿಗೆ ಪೌಷ್ಠಿಕ ಆಹಾರ ನೀಡಿ ಅವರನ್ನು ಆರೋಗ್ಯವಂತರನ್ನಾಗಿ ಬೆಳೆಸುವುದರಿಂದ ಸದೃಢ ಸಮಾಜ ನಿರ್ಮಾಣವಾಗುತ್ತದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಬಿ.ಎಸ್. ಕಲಾದಗಿ ತಿಳಿಸಿದರು.
ನಗರದ ಸರ್ಕಾರಿ ಬಾಲಕಿಯರ ವಸತಿ ನಿಲಯದಲ್ಲಿ ವಾರ್ತಾ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಸರ್ಕಾರಿ ಪರಿಶಿಷ್ಟ ಜಾತಿ ಬಾಲಕಿಯರ ನಿಲಯಗಳ ಸಹಯೋಗದಲ್ಲಿ ಮಕ್ಕಳ ಪೌಷ್ಠಿಕ ಆಹಾರ ಮತ್ತು ಮಹಿಳಾ ದೌರ್ಜನ್ಯ ತಡೆ ಕುರಿತು ಗುರುವಾರ ಸಂಜೆ ಏರ್ಪಡಿಸಿದ್ದ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ಅವರು, ಮಗು ಗರ್ಭಾವಸ್ಥೆಯಲ್ಲಿರುವಾಗಲೇ ಪೂರಕ ಪೌಷ್ಠಿಕ ಆಹಾರ ಒದಗಿಸಬೇಕು. ಇದರಿಂದ ಆರೋಗ್ಯವಂತ ಮಗುವಿನ ಜನನವಾಗುತ್ತದೆ ಎಂದರು.
ಉಪ ಪೊಲೀಸ್ ಅಧೀಕ್ಷಕ ಮುರುಗಣ್ಣನವರ್ ಮಾತನಾಡಿ, ಮಹಿಳೆಯರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಸರ್ಕಾರ ಇಂಥ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಕಾರ್ಯಕ್ರಮದಿಂದ ಅರಿತ ವಿಷಯಗಳ ಬಗ್ಗೆ ಇತರರಿಗೂ ತಿಳಿಸಬೇಕು. ಇದರಿಂದ ಯೋಜನೆಗಳ ಪರಿಚಯ ಎಲ್ಲರಿಗೂ ತಲುಪಲು ಸಾಧ್ಯ. ಮಹಿಳೆಯರ ರಕ್ಷಣೆಗಾಗಿ ಮಹಿಳಾ ದೌರ್ಜನ್ಯ ತಡೆ ಕಾಯ್ದೆಯನ್ನು ರೂಪಿಸಲಾಗಿದೆ. ಹೆಣ್ಣು ಮಕ್ಕಳು ಈ ಕಾಯ್ದೆಯ ಪ್ರಯೋಜನ ಪಡೆಯಬೇಕೇ ಹೊರತು ದುರುಪಯೋಗ ಮಾಡಿಕೊಳ್ಳಬಾರದು. ಯಾವುದೇ ಹೆಣ್ಣು ತನ್ನ ಗಂಡನ ಮನೆಯಲ್ಲಿ ಸಣ್ಣ-ಪುಟ್ಟ ಜಗಳವನ್ನು ದೊಡ್ಡದನ್ನಾಗಿ ಮಾಡದೆ ಹೊಂದಾಣಿಕೆ ಮಾಡಿಕೊಂಡಲ್ಲಿ ಸಾಮರಸ್ಯದ ಜೀವನ ಸಾಗಿಸಬಹುದು ಎಂದರು.
ಉಪನ್ಯಾಸ ನೀಡಿದ ಮೇಲ್ವಿಚಾರಿಕಿ ಮಾಧವಿ, ದಿನನಿತ್ಯದ ಊಟ ಶುಚಿ, ರುಚಿಯಿಂದ ಕೂಡಿರಬೇಕು. ದೇಹಕ್ಕೆ ಅಗತ್ಯವಿರುವ ಪೋಷಕಾಂಶ, ಜೀವಸತ್ವ, ಖನಿಜಾಂಶ, ಕಬ್ಬಿಣಾಂಶ, ನಾರಿನಂಶ, ನೀರಿನಂಶವುಳ್ಳ ಆಹಾರ ಸೇವಿಸಬೇಕು. ಅಪೌಷ್ಠಿಕ ತಾಯಿ ಅಪೌಷ್ಠಿಕ ಮಕ್ಕಳಿಗೆ ಜನ್ಮ ನೀಡುತ್ತಾಳೆ. ಅಪೌಷ್ಠಿಕ ಮಗು ಎಲ್ಲರಿಗೂ ಹೊರೆಯಾಗುತ್ತದೆ. ಮಗುವಿನ ಬೆಳವಣಿಗೆಗೆ ದ್ವಿದಳ, ಏಕದಳ ಧಾನ್ಯ, ರಾಗಿ, ಸಜ್ಜೆ, ಗೋಧಿ, ಮೊಳಕೆ ಕಾಳು, ಎ, ಬಿ, ಸಿ, ಡಿ, ಅನ್ನಾಂಗಗಳಿರುವ ಶಕ್ತಿಯುತ ಆಹಾರ ಪೂರಕವಾಗಿರುತ್ತದೆ. ಹಾಲು, ಮೊಟ್ಟೆಯ ಹಳದಿ ಭಾಗದಿಂದ ಪ್ರೊಟೀನ್ ದೊರೆಯುತ್ತದೆ. ಇವುಗಳನ್ನು ಸಮರ್ಪಕವಾಗಿ ಸೇವಿಸಬೇಕು ಎಂದರು.
ನ್ಯಾಯವಾದಿ ಶಿವಲೀಲಾ, ಸಮಾಜ ಕಲ್ಯಾಣಾಧಿಕಾರಿ ಕಾಜಪ್ಪ ಮಾತನಾಡಿದರು. ಜಯಂತಿ ಪ್ರಾರ್ಥಿಸಿದರು, ವಾರ್ತಾ ಇಲಾಖೆಯ ಎಸ್.ಕೆ. ಸುರೇಶ್ಬಾಬು ಸ್ವಾಗತಿಸಿದರು. ಸುಷ್ಮ ನಿರೂಪಿಸಿದರು. ಪಲ್ಲವಿ ವಂದಿಸಿದರು. ವಸತಿ ನಿಲಯದ ಎಲ್ಲ ಮೇಲ್ವಿಚಾರಕರು, ವಿದ್ಯಾರ್ಥಿಗಳು, ಸಿಬ್ಬಂದಿ ಇದ್ದರು.