ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ರಂಗನಟರಲ್ಲಿ ಸೌಹಾರ್ದತೆ ಕೊರತೆ

Mainashree
Updated On : 26 Jan 2013, 10:49 am

ಕನ್ನಡಪ್ರಭ ವಾರ್ತೆ, ಬಳ್ಳಾರಿ, ಜ. 25
ಹಿಂದಿನ ಕಾಲದಂತೆ ಇಂದು ರಂಗಭೂಮಿಗೆ ತಮ್ಮನ್ನು ತಾವು ಅರ್ಪಣೆ ಮಾಡಿಕೊಂಡವರಿಲ್ಲ. ತ್ಯಾಗ ಮನೋಭಾವಿಲ್ಲ, ಗೌರವವಿಲ್ಲ, ರಂಗನಟರ ನಡುವೆ ಸೌಹಾರ್ದತೆ ಕಂಡು ಬರುತ್ತಿಲ್ಲವೆಂದು ಹಿರಿಯ ರಂಗಭೂಮಿ ನಟ ಮಾಸ್ಟರ್ ಹಿರಣ್ಣಯ್ಯ ಬೇಸರ ವ್ಯಕ್ತಪಡಿಸಿದರು.
ನಗರದಲ್ಲಿ ಶುಕ್ರವಾರ ಸಂಜೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ, ರಂಗಭೂಮಿಯಲ್ಲಿ ಇಂದು ಉತ್ತಮ ರೀತಿಯ ವಾತಾವರಣ ಕಂಡು ಬರುತ್ತಿಲ್ಲ. ಹೀಗಾಗಿಯೇ ರಂಗಭೂಮಿಗೆ ಕುತ್ತು ಬಂದಿದೆ. ರಂಗಭೂಮಿ ಉಳಿಯಬೇಕೆಂಬ ಆಸೆ ಹೊಂದಿದ್ದೇನೆ ಆದರೆ ಅದಕ್ಕೆ ಪೂರಕವಾಗಿರುವ ವಾತಾವರಣ ಕಂಡು ಬರಲಾರದಷ್ಟು ಪರಿಸ್ಥಿತಿ ಕೆಟ್ಟು ಹೋಗಿದೆ. ಸ್ಥಳೀಯ ಕಲಾವಿದರು ರಂಗಕಲೆ ಉಳಿಸುವ ಕೆಲಸ ಮಾಡಬೇಕಿದೆ. ಆದರೆ ವೃತ್ತಿ ರಂಗಭೂಮಿಯನ್ನು ಕಟ್ಟಿಕೊಂಡು ನಾಟಕಗಳನ್ನು ಮಾಡಿಸುವ ಕಾಲ ದೂರವಾಗಿದೆ ಎಂದರು.
10 ಸಾವಿರಕ್ಕೂ  ಹೆಚ್ಚು ಪ್ರದರ್ಶನ: ಲಂಚಾವತಾರ ನಾಟಕ ರಾಜ್ಯದಲ್ಲಿ ಸುಮಾರು 10 ಸಾವಿರಕ್ಕೂ ಹೆಚ್ಚು ಪ್ರದರ್ಶನ ಕಂಡಿದೆ. ಹೊರ ದೇಶಗಳಲ್ಲೂ ನೂರಾರು ಪ್ರದರ್ಶನಗಳನ್ನು ಕಂಡಿದೆ. ಆದರೆ, ಲಂಚ ಪಡೆಯುವುದು ಮಾತ್ರ  ನಿಂತಿಲ್ಲ ಎಂದ ಅವರು, ರಂಗಭೂಮಿ ಒಂದು ಮಾಧ್ಯಮವಾಗಿದೆ. ವಾಸ್ತವ ಸ್ಥಿತಿಯನ್ನು ಜನರಿಗೆ ತಿಳಿಸುವುದಷ್ಟೇ ರಂಗಭೂಮಿ ಕಲಾವಿದರ ಕರ್ತವ್ಯ. ಸ್ವಾತಂತ್ರ್ಯ ನಂತರದ ದಿನಗಳಲ್ಲಿ ಈ ಮಟ್ಟಿಗೆ ಲಂಚ, ಭ್ರಷ್ಟಾಚಾರ ಇರಲಿಲ್ಲ. ನಾವು ಬಾಲ್ಯದಲ್ಲಿ ಇದ್ದಾಗ ಲಂಚ ಪಡೆಯುವುದೇ ದೊಡ್ಡ ಪಾಪ ಎಂಬ ವಾತಾವರಣವಿತ್ತು. ಆದರೀಗ ಅದು ಅರ್ಹತೆಯಾಗಿ, ಪರಿವರ್ತನೆಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ದೊಡ್ಡ ಜಗಳವೇ ಆಗಿತ್ತು: ಲಂಚಾವತಾರ ನಾಟಕದಲ್ಲಿ ಪ್ರತಿಯೊಂದು ಪಕ್ಷಗಳನ್ನು ಛೇಡಿಸಿದ್ದೇನೆ. ಎಲ್ಲ ನಾಯಕರನ್ನು ವಿಡಂಬನಾತ್ಮಕವಾಗಿ ಅವರ ಮನ ಮುಟ್ಟುವಂತೆ ಬೈದಿದ್ದೇನೆ. ಅಲ್ಲಿ ಸಮಾಜದ ಕಾಳಜಿ ಇತ್ತೇ ಹೊರತು, ಬೇರೆ ಉದ್ದೇಶವಿರಲಿಲ್ಲ. ನಿಜಲಿಂಗಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ದೊಡ್ಡ ಜಗಳವೇ ನಡೆದಿತ್ತು, ಲಂಚಾವತಾರ ನಾಟಕವನ್ನೇ ಬ್ಯಾನ್ ಮಾಡಲು ನಿರ್ಧರಿಸಿದ್ದರು. ಕಾಂಗ್ರೆಸ್ಸಿನ ನಿಷ್ಠಾವಂತರಾಗಿದ್ದ ಅವರ ಮುಂದೆಯೇ ಕಾಂಗ್ರೆಸ್ ಪಕ್ಷವನ್ನೇ ಟೀಕಿಸಿ ಅವರ ಎದುರೇ ಪ್ರದರ್ಶನ ನೀಡಿದ್ದು, ಅವರಿಗೆ ನುಂಗಲಾರದ ತುತ್ತಾಗಿತ್ತು. ಕೊನೆಗೆ ನ್ಯಾಯಾಲಯದಲ್ಲಿ ನನಗೆ ಜಯ ಸಿಕ್ಕಿತು. ಆದರೆ, ಎಂದೂ ನಿಜಲಿಂಗಪ್ಪನವರು ನಮ್ಮ ವಿರುದ್ಧ ವೈಷಮ್ಯ ಸಾಧಿಸಲಿಲ್ಲ ಎಂದು ಹಳೆ ನೆನಪನ್ನು ಸ್ಮರಿಸಿಕೊಂಡರು. ಹಿರಿಯ ರಂಗಕರ್ಮಿ ಡಾ.ಬಿ.ವಿ. ರಾಜಾರಾಂ, ರಂಗತೋರಣ ಸಾಂಸ್ಕೃತಿಕ ಸಂಘಟನೆ ಕಾರ್ಯದರ್ಶಿ ಪ್ರಭುದೇವ ಕಪ್ಪಗಲ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement