ಕಸಾಪ ತಾಲೂಕು ಅಧ್ಯಕ್ಷರಾಗಿ ರೆಡ್ಡಿ ನಾಯ್ಕ
ಹಗರಿಬೊಮ್ಮನಹಳ್ಳಿ: ಕಸಾಪ ಹಗರಿಬೊಮ್ಮನಹಳ್ಳಿ ತಾಲೂಕು ಘಟಕದ ನೂತನ ಅಧ್ಯಕ್ಷರನ್ನಾಗಿ ತಾಲೂಕಿನ ತಂಬ್ರಹಳ್ಳಿ ಸರ್ಕಾರಿ ಉರ್ದು ಪ್ರಾಥಮಿಕ ಶಾಲೆ ಕನ್ನಡ ಶಿಕ್ಷಕ ರೆಡ್ಡಿ ನಾಯ್ಕ ಅವರನ್ನು ನೇಮಿಸಿ ಜಿಲ್ಲಾಧ್ಯಕ್ಷ ಸಿರಿಗೇರಿ ಯರ್ರಿಸ್ವಾಮಿ ಆದೇಶ ಹೊರಡಿಸಿದ್ದಾರೆ. ರೆಡ್ಡಿ ನಾಯ್ಕ ಪ್ರಸಕ್ತ ಸಾಲಿನ ರಾಜ್ಯ ಮಟ್ಟದ ವಿಶೇಷ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ. ಶಿಕ್ಷಕ ವೃತ್ತಿ ಜೊತೆಯಲ್ಲೇ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ವಲಯದ ಅಭಿವೃದ್ಧಿಗಾಗಿ ಸಲ್ಲಿಸುತ್ತಿರುವ ಅವರ ಸೇವೆ ಮನ್ನಿಸಿ ಈಗ ಜಿಲ್ಲಾ ಕಸಾಪ ಅಧ್ಯಕ್ಷರು ಅವರನ್ನು ತಾಲೂಕು ಘಟಕದ ಅಧ್ಯಕ್ಷ ಸ್ಥಾನಕ್ಕೆ ನೇಮಿಸಿದ್ದಾರೆ. ಕಸಾಪ ಮಾಜಿ ಅಧ್ಯಕ್ಷ ಮಾತಾ ಗ್ಯಾಸ್ ಯರ್ರಿಸ್ವಾಮಿ, ಭಾರತ ಜ್ಞಾನವಿಜ್ಞಾನ ಸಮಿತಿ ಅಧ್ಯಕ್ಷ ಚಿದ್ರಿ ಅಮರನಾಥ, ಸತ್ಸಂಗ ಸಮಿತಿ ಅಧ್ಯಕ್ಷ ಜಿ. ಲಕ್ಷ್ಮೀಪತಿ, ರಾಜ್ಯ ಕುರುಬರ ಸಂಘದ ನಿರ್ದೇಶಕ ಜಿ. ಅಜ್ಜಯ್ಯ, ಯುವಮುಖಂಡ ಬ್ಯಾಡಿಗಿ ಪ್ರಭು, ಗಂಗಾಮತ ಸಂಘದ ಬಾರಿಕರ ಬಾಪೂಜಿ, ಭಾವಸಾರ ಕ್ಷತ್ರಿಯ ಸಮಾಜದ ಅಧ್ಯಕ್ಷ ಡಿಶ್ ವೆಂಕಟೇಶ್, ವೀರಶೈವ ಪಂಚಮಸಾಲಿ ಸಹಕಾರ ಸೌಹಾರ್ದ ಬ್ಯಾಂಕ್ ನಿರ್ದೇಶಕ ಎಚ್.ಪಿ. ಶಿವಶಂಕರಗೌಡ, ಭೋವಿ ಸಮಾಜದ ಮುಖಂಡರಾದ ಹಂಚಿನಮನಿ ಹನುಮಂತಪ್ಪ, ಆರ್ಯವೈಶ್ಯ ಯುವಕ ಸಂಘದ ಅಧ್ಯಕ್ಷ ಕೊರಗಲ್ ಗಿರೀಶ್, ಕರವೇ ಅಧ್ಯಕ್ಷ ಬುಡ್ಡಿ ಬಸವರಾಜ, ಸಾಹಿತಿ ಜೆ. ನಾಗರಾಜ, ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ವೀರೇಶ್ ಮಜ್ಗಿ, ಸಾಹಿತಿಗಳಾದ ಟಿ. ಶೇಕ್ಷಾವಲಿ, ಲಿಯಾಖತ್ ಅಲಿ ನೂತನ ಅಧ್ಯಕ್ಷರನ್ನು ಅಭಿನಂದಿಸಿದ್ದಾರೆ.
ಮುನಿರಾಬಾದ್: ಗಣರಾಜ್ಯೋತ್ಸವ
ಮುನಿರಾಬಾದ್: 64ನೇ ಗಣರಾಜ್ಯೋತ್ಸವದ ನಿಮತ್ತ ಇಲ್ಲಿನ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಮೈದಾನದಲ್ಲಿ ಶನಿವಾರ ನೀರಾವರಿ ಇಲಾಖೆಯ ಮುಖ್ಯ ಅಭಿಯಂತರ ಮಲ್ಲಿಕಾರ್ಜುನ್ ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ನಮ್ಮ ದೇಶದ ಸಂವಿಧಾನವು ತುಂಬ ಶಕ್ತಿಶಾಲಿಯಾಗಿದೆ. ದೇಶದಲ್ಲಿ 64 ವರ್ಷದಿಂದ ಆಡಳಿತ ನಡೆಯುತ್ತಿರುವು ಇದಕ್ಕೆ ಸಾಕ್ಷಿ ಎಂದರು. ನಮ್ಮ ಸಂವಿಧಾನದ ದೇಶದ ಎಲ್ಲ ಜಾತಿ, ಧರ್ಮದ ಜನರನ್ನು ಒಗ್ಗೂಡಿಸಿಕೊಂಡು ಪ್ರಗತಿ ಪಥದತ್ತ ನಡೆಸಿಕೊಂಡು ಹೋಗುತ್ತಿದೆ. ಇದರ ಕೀರ್ತಿ ಸಂವಿಧಾನ ಶಿಲ್ಪಿ ಡಾ. ಅಂಬೇಡ್ಕರ್ ಅವರಿಗೆ ಸಲ್ಲಬೇಕು ಎಂದು ಹೇಳಿದರು. ಈ ಸಂದರ್ಭದಲ್ಲಿ ವಿವಿಧ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು. ಗ್ರಾಪಂ ಅಧ್ಯಕ್ಷೆ ರಾಧಿಕಾ ರವಿ, ಉಪಾಧ್ಯಕ್ಷ ಸಾಧಿಕ್, ಶಾಲೆಯ ಎಸ್ಡಿಎಂಸಿ ಅಧ್ಯಕ್ಷ ನಾಗರಾಜ ರಾಜು, ಮುಖ್ಯ ಗುರುಗಳಾದ ಬೆಲ್ಲಿಯಪ್ಪ ಚೌರದ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ರವಿಕುಮಾರ್, ಗ್ರಾಪಂ ಸದಸ್ಯರು ಗ್ರಾಮಸ್ಥರು ಉಪಸ್ಥಿತರಿದ್ದರು.