ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಮಾಲ್ವಿ ಡ್ಯಾಂಗೆ ಶಾಶ್ವತ ನೀರು: ಭರವಸೆ

Rashmi Kasaragodu
Updated On : 29 Jan 2013, 1:28 am




ಹಗರಿಬೊಮ್ಮನಹಳ್ಳಿ: ರಾಜ್ಯದಲ್ಲಿ ಜಾತ್ಯತೀತ ಜನತಾದಳ ಅಧಿಕಾರಕ್ಕೆ ಬಂದರೆ ದಶಕಗಳಿಂದ ನೆನೆಗುದಿಗೆ ಬಿದ್ದಿರುವ ಇಪ್ಪತ್ತು ಸಾವಿರ ಎಕರೆ ಒಣಭೂಮಿಗೆ ನೀರುಣಿಸುವ ತಾಲೂಕಿನ ಮಾಲ್ವಿ ಜಲಾಶಯಕ್ಕೆ ತುಂಗಭದ್ರಾ ಜಲಾಶಯದ ಹಿನ್ನಿರಿನಿಂದ ಶಾಶ್ವತ ನೀರು ತುಂಬಿಸುವ ಯೋಜನೆ ಜಾರಿಗೊಳಿಸಲಾಗುತ್ತದೆ ಎಂದು ಜಿಲ್ಲಾ ಜೆಡಿಎಸ್ ಅಧ್ಯಕ್ಷ ನಾರಾ ಸೂರ್ಯನಾರಾಯಣ ರೆಡ್ಡಿ ಅವರು ಭರವಸೆ ನೀಡಿದರು.
ಪಟ್ಟಣದ ರಾಮನಗರದ ಶ್ರೀ ವಾಸವಿ ಕಲ್ಯಾಣ ಮಂಟಪದಲ್ಲಿ ಸೋಮವಾರ ಮಧ್ಯಾಹ್ನ ಜಾತ್ಯತೀತ ಜನತಾದಳ ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರ ಮಟ್ಟದ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಮಾಲ್ವಿ ಡ್ಯಾಂಗೆ ನೀರು ತುಂಬಿಸುವುದಾಗಿ ಚುನಾವಣೆ ಸಮಯದಲ್ಲಿ ಹುಸಿ ಭರವಸೆ ನೀಡುತ್ತಲೇ ಇಲ್ಲಿಂದ ನಾಲ್ಕೈದು ಶಾಸಕರು ಆಯ್ಕೆಯಾಗಿದ್ದನ್ನು ಬಿಟ್ಟರೆ ಅವರ ಅವಧಿಯಲ್ಲಿ ಜಲಾಶಯಕ್ಕೆ ನೀರು ತುಂಬಿಸುವ ಶಾಶ್ವತ ಯೋಜನೆ ಜಾರಿ ಕುರಿತಂತೆ ಒಂದು ಮಾತನ್ನೂ ಆಡಲಿಲ್ಲ. ಬದಲಿಗೆ ಜನತೆ ನೀಡಿದ ಅಧಿಕಾರವನ್ನು ಆಕ್ರಮ ಆಸ್ತಿ ಸಂಪಾದನೆಗಾಗಿ ದುರ್ಬಳಕೆ ಮಾಡಿಕೊಂಡರು ಎಂದು ಆರೋಪಿಸಿದರು.
ಈ ಕ್ಷೇತ್ರದಲ್ಲಿ ಜೆಡಿಎಸ್‌ಗೆ ಅಶೀರ್ವಾದ ಮಾಡಿ, ನಮ್ಮ ಪಕ್ಷದ ಶಾಸಕರನ್ನು ಗೆಲ್ಲಿಸಿ ಕಳುಹಿಸಿದರೆ ಖಂಡಿತ ಮಾಲ್ವಿ ಡ್ಯಾಂಗೆ ತುಂಗಭದ್ರಾ ಜಲಾಶಯದಿಂದ ನೀರು ತುಂಬಿಸುವ ಯೋಜನೆ ಜಾರಿಗೊಳ್ಳುತ್ತದೆ ಎಂದ ಅವರು, ತಳಮಟ್ಟದಿಂದ ಪಕ್ಷವನ್ನು ಸಂಘಟಿಸುವ ಮೂಲಕ ಬರುವ ವಿಧಾನಸಭಾ ಚುನಾವಣೆ ಹೊತ್ತಿಗೆ ಜೆಡಿಎಸ್‌ನ್ನು ಪ್ರಬಲವಾಗಿ ಸಂಘಟಿಸಬೇಕೆಂದು ಕಾರ್ಯಕರ್ತರಿಗೆ ಕರೆ ನೀಡಿದರು.
ಅಕ್ರಮ ಆಸ್ತಿ ಸಂಪಾದನೆ: ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಗೊಂಡಿರುವ ಬಿಜೆಪಿ ಶಾಸಕ ಕೆ. ನೇಮಿರಾಜ ನಾಯ್ಕ ಆಕ್ರಮ ಮಾರ್ಗದಲ್ಲಿ ಆಸ್ತಿ ಸಂಪಾದನೆ ಮಾಡಿದ್ದಲ್ಲದೆ, ತನ್ನ ಸಂಬಂಧಿಕರ ಹೆಸರಿನಲ್ಲಿ ಸಹ ಸಾಕಷ್ಟು ಆಕ್ರಮ ಆಸ್ತಿ ಸಂಪಾದನೆ ಮಾಡಿದ್ದಾರೆ. ಕ್ಷೇತ್ರವನ್ನು ಹಾಡುಹಗಲೇ ಲೂಟಿ ಹೊಡೆಯುತ್ತಿರುವ ನೇಮಿರಾಜ ನಾಯ್ಕಗೆ ಬರುವ ಚುನಾವಣೆಯಲ್ಲಿ ಕ್ಷೇತ್ರದ ಜನತೆ ತಕ್ಕಪಾಠ ಕಲಿಸಲಿದ್ದಾರೆ ಎಂದರು.
ಬಿಎಸ್ಸಾರ್ ಒಂದು ಗೀಲಿಟ್ ಪಾರ್ಟಿ ಇದ್ದಂತೆ. ಬೇರೆ ಪಕ್ಷದಲ್ಲಿನ ಅಭ್ಯರ್ಥಿಗಳನ್ನು ಬಲವಂತವಾಗಿ ಕರೆತಂದು ಚುನಾವಣೆಗೆ ಸಿದ್ಧರಾಗಿದ್ದಾರೆ. ಇತ್ತ ಕಾಂಗ್ರೆಸ್ ಮತ್ತು ಬಿಜೆಪಿ ಬಗ್ಗೆ ಜನತೆ ಭ್ರಮನಿರಸನಗೊಂಡಿದ್ದಾರೆ. ಈ ಬಾರಿ ಜಿಲ್ಲೆಯಲ್ಲಿ ಜೆಡಿಎಸ್‌ಗೆ ಭವಿಷ್ಯವಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ಕ್ಷೇತ್ರದ ಐವತ್ತಕ್ಕೂ ಹೆಚ್ಚು ಗ್ರಾಮಗಳ ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಬಿಜೆಪಿ, ಕಾಂಗ್ರೆಸ್ ಪಕ್ಷ ತೊರೆದು ಜೆಡಿಎಸ್ ಸೇರ್ಪಡೆಗೊಂಡರು.
ಪಕ್ಷದ ಕ್ಷೇತ್ರ ಸಮಿತಿ ಅಧ್ಯಕ್ಷ ವೈ. ಮಲ್ಲಿಕಾರ್ಜುನ ಅಧ್ಯಕ್ಷತೆ ವಹಿಸಿದ್ದರು. ಜೆಡಿಎಸ್ ಮುಖಂಡ ಮುಂಡ್ರಿಗಿ ನಾಗರಾಜ, ಭಾಗ್ಯಮ್ಮ, ಏಕಾಂಬ್ರೇಶ್ ನಾಯ್ಕ್, ಪಿ.ಎಸ್. ಸೋಮನಗೌಡ, ಭಾಸ್ಕರರೆಡ್ಡಿ, ಮೀನಳ್ಳಿ ಚಂದ್ರಶೇಖರ, ಬನ್ನಿಗೋಳ ವೆಂಕಣ್ಣ, ಪೋಟೋ ರಾಮಣ್ಣ, ಅಂಬಳಿ ಬಸವರಾಜ, ಪಾಂಡುರಂಗ ಶೆಟ್ಟಿ, ಹೂಗಾರ ಬಸವರಾಜ, ಕಲ್ಗುಡಿ ಕಮಲಮ್ಮ, ಡಿಶ್ ಪಾಂಡುರಂಗ ನಾಯ್ಕ, ಸಣ್ಣಪವಾಡಿ ಹನುಮಂತಪ್ಪ, ಟಿ. ಚಂದ್ರಶೇಖರ, ಎಂ.ಎ. ರಾಮಪ್ಪ, ದಾದಮ್ಮನವರ ಪರಶುರಾಮ, ಎಣ್ಣಿದಾದಾ, ಇಕ್ಬಾಲ್ ಸೇರಿದಂತೆ ಹಲವರು ಭಾಗವಹಿಸಿದ್ದರು.
ಶಶಿಧರ ಸ್ವಾಮಿ ಪ್ರಾರ್ಥಿಸಿ, ಮಾತಾಗ್ಯಾಸ್ ಎರ್ರಿಸ್ವಾಮಿ ಸ್ವಾಗತಿಸಿ, ಬ್ಯಾಲಾಳು ಕರಿಬಸಪ್ಪ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement