ಹೊಸಪೇಟೆ: ಜಗತ್ತಿಗೆ ಭಾವೈಕ್ಯದ ಪಾಠ ಹೇಳಿದ ದೇಶ ಭಾರತ. ವಿವಿಧ ಜಾತಿ, ಧರ್ಮಗಳು, ಸಂಸ್ಕೃತಿಯ ವೈವಿಧ್ಯತೆಯ ತವರಾದ ಭಾರತದಲ್ಲಿ ಹುಟ್ಟಿರುವ ನಾವೆಲ್ಲರೂ ಧನ್ಯರು ಎಂದು ಬಿಎಂಎಂ ಇಸ್ಪಾತ್ನ ಪ್ರಧಾನ ವ್ಯವಸ್ಥಾಪಕ ಜಿ. ಕ್ಷ್ಮಿನಾರಾಯಣ ಹೇಳಿದರು. ತಾಲೂಕಿನ ಮರಿಯಮ್ಮನಹಳ್ಳಿಯ ಎಸ್ಎಲ್ಎನ್ಎ ಶಿಕ್ಷಣ ಸಂಸ್ಥೆ ಆವರಣದಲ್ಲಿ 64ನೇ ಗಣರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆ ಜಗತ್ತಿಗೇ ಮಾದರಿಯಾಗಿದೆ. ಪ್ರತಿಯೊಬ್ಬರು ಸಂವಿಧಾನ ಗೌರವಿಸುವ ಮೂಲಕ ದೇಶಭಕ್ತಿ ಮೆರೆಯಬೇಕು. ಉತ್ತಮ ಪ್ರಜೆಗಳಾಗಿ ಜೀವಿಸಿದಾಗ ಮಾತ್ರ ದೇಶದಲ್ಲಿ ಶಾಂತಿ ಮತ್ತು ನೆಮ್ಮದಿ ಕಾಣಲು ಸಾಧ್ಯ. ಈ ನಿಟ್ಟಿನಲ್ಲಿ ಎಲ್ಲರೂ ಮುಂದಾಗಬೇಕಿದೆ ಎಂದರು. ಉಪನ್ಯಾಸಕ ಎಸ್. ನವೀನ್ಕುಮಾರ್, ಎಸ್ಎಲ್ಎನ್ಎ ಶಿಕ್ಷಣ ಸಂಸ್ಥೆ ಅಧ್ಯಕ್ಷ ಎನ್. ಸತ್ಯನಾರಾಯಣ ಮಾತನಾಡಿದರು. ಪಿಎಸ್ಐ ಕೆ. ಜಯಪ್ರಕಾಶ ಧ್ವಜವಂದನೆ ಸ್ವೀಕರಿಸಿದರು. ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಕಚಟಿ ಸೋಮಣ್ಣ, ವಾಲ್ಮೀಕಿ ಮಹಸಭಾದ ಅಧ್ಯಕ್ಷ ಟಿ. ಹುಲುಗಪ್ಪ, ನೀರಳ್ಳಿ ಹನುಮಂತಪ್ಪ, ವಸ್ತ್ರದ ವೀರಭದ್ರಯ್ಯ, ವಿನಾಯಕ ಹಿರಿಯ ಪ್ರಾಥಮಿಕ ಶಾಲೆ ಮುಖ್ಯಗುರು ಪೂರ್ಣಿಮಾ, ರಜನಿ, ಹುಲಿಗೇಶ, ಅನಂತಪದ್ಮನಾಭಾಚಾರ್, ಪ್ರಾಚಾರ್ಯ ಎಂ. ಅಶೋಕ್ ಉಪಸ್ಥಿತರಿದ್ದರು.