ಕೂಡ್ಲಿಗಿ: ತಾಲೂಕಿನ ಇಮಡಾಪುರ ಬಳಿ ರಾಷ್ಟ್ರೀಯ ಹೆದ್ದಾರಿ -13ರಲ್ಲಿ ಮಂಗಳವಾರ ಬೆಳಗಿನ ಜಾವ 5 ಗಂಟೆಗೆ ಖಾಸಗಿ ಬಸ್ಸೊಂದು ಉರುಳಿ ಬಿದ್ದು, 12ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದಾರೆ. ಅದರಲ್ಲಿ ನಾಲ್ವರಿಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದು, ಚಿತ್ರದುರ್ಗ ಆಸ್ಪತ್ರೆಗೆ ಸಾಗಿಸಲಾಗಿದೆ. ಬಸ್ ಚಾಲಕ ಬಾಬುಮಿಯಾ ಕೂಡ ಗಾಯಗೊಂಡಿದ್ದು, ಕೂಡ್ಲಿಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾನೆ. ಈ ಬಸ್ಸು ಬಿಜಾಪುರದಿಂದ ಬೆಂಗಳೂರಿಗೆ ತೆರಳುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಗಾಯಾಳುಗಳು ಸಮೀಪದ ಕಾನಹೊಸಹಳ್ಳಿ, ಕೂಡ್ಲಿಗಿ ಹಾಗೂ ಚಿತ್ರದುರ್ಗ ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಕಾನಹೊಸಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೊಟ್ಟೆನೋವು: ಮಹಿಳೆ ಆತ್ಮಹತ್ಯೆ
ಬಳ್ಳಾರಿ: ಹೊಟ್ಟೆನೋವಿನ ಬಾಧೆ ತಾಳಲಾರದೆ ಯುವತಿಯೋರ್ವಳು ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಕೌಲ್ಪ್ರದೇಶ ಜಮ್ಮ ಮಸೀದಿ ಕಾಲನಿಯಲ್ಲಿ ನಡೆದಿದೆ. ನರಸಮ್ಮ (28) ಕೆಲವು ತಿಂಗಳಿಂದ ಹೊಟ್ಟೆನೋವಿನಿಂದ ಬಳಲುತ್ತಿದ್ದು, ಸೋಮವಾರ ನೋವು ಉಲ್ಬಣಿಸಿದ ಹಿನ್ನೆಲೆಯಲ್ಲಿ ಸಂಜೆ ಮನೆಯಲ್ಲಿ ಯಾರೂ ಇಲ್ಲದ ಹೊತ್ತಿನಲ್ಲಿ ವಿಷ ಸೇವಿಸಿದ್ದಾಳೆ. ಈ ಕುರಿತಾಗಿ ಕೌಲ್ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.