ಕನ್ನಡಪ್ರಭ ವಾರ್ತೆ, ಬಳ್ಳಾರಿ, ಜ. 29
ಬೇಸಿಗೆ ನಾಡು ಬಳ್ಳಾರಿಯ ಬಡ, ಮಧ್ಯಮ ವರ್ಗದವರ ತಂಪು ತಣಿಸುವ ಕಲ್ಲಂಗಡಿ ಈ ಬಾರಿ ಅಷ್ಟು ತಂಪು ನೀಡದು. ಈಗಲೇ ಕಲ್ಲಂಗಡಿಯ ಪ್ರತಿ ಹೋಳಿನ ಬೆಲೆ # 5ರಿಂದ 10ಕ್ಕೆ ಏರಿದೆ. ಇನ್ನು ಕಲ್ಲಂಗಡಿ ರಫ್ತು ಆರಂಭವಾದರೆ ಹಣ್ಣು ದುಬಾರಿಯಾದರೂ ಆಶ್ಚರ್ಯವಿಲ್ಲ. ಶ್ರೀಮಂತರು ದುಬಾರಿ ಬೆಲೆಗೆ ತಂಪು ಪಾನಿಯಗಳ ಮೊರೆ ಹೋದರೆ, ಬಡ, ಮಧ್ಯಮ ವರ್ಗದವರು ಕಡಿಮೆ ಬೆಲೆಗೆ ತಂಪು ನೀಡುವ ಕಲ್ಲಂಗಡಿಯ ಮೊರೆ ಹೋಗುತ್ತಿದ್ದರು. ಇದೀಗ ಕಲ್ಲಂಗಡಿಯೂ ಬಡವರಿಗೆ ಬಾಯಿ ಸುಡುವಂತೆ ಮಾಡುತ್ತಿದೆ.
ಕಳೆದ ಬಾರಿ ಕಲ್ಲಂಗಡಿಗೆ ಹೆಚ್ಚಿನ ಬೆಲೆ ಇಲ್ಲದಿರುವ ಕಾರಣ ರೈತರು ಈ ಬಾರಿ ಕಲ್ಲಂಗಡಿ ಬದಲಾಗಿ ಶೇಂಗಾ ಬೆಳೆ ಬೆಳೆದಿದ್ದಾರೆ. ಹೀಗಾಗಿಯೇ ಈ ಬಾರಿ ಕಲ್ಲಂಗಡಿ ದುಬಾರಿಯಾಗಲು ಕಾರಣವಾಗಿದೆ. ರೈತರು ಪ್ರತಿ ಕೆಜಿಗೆ ಕಳೆದ ಬಾರಿ # 3 ರಿಂದ 5ರ ವರೆಗೆ ಕಲ್ಲಂಗಡಿ ಕೊಡುತ್ತಿದ್ದರೆ, ಈ ಬಾರಿ # 8 ರಿಂದ 10ಗೆ ನೀಡುತ್ತಿದ್ದಾರೆ. ಇದರಿಂದಾಗಿ ವ್ಯಾಪಾರಿಗಳು ಮಾರಾಟದ ಬೆಲೆಯನ್ನು ಹೆಚ್ಚು ಮಾಡಿದ್ದಾರ.
ಎಲ್ಲೆಡೆ ತಲೆ ಎತ್ತಿವೆ ಕಲ್ಲಂಗಡಿ ಟೆಂಟ್: # 5ಗೆ ಹಣ್ಣಿನ ಒಂದು ಹೋಳು ಸಿಗುವುದರಿಂದ ದಾರಿಹೋಕರು, ಬಡವರು ಕಲ್ಲಂಗಡಿ ತಿಂದು ಬಿಸಿಲಿನ ತಾಪ ತಗ್ಗಿಸಿಕೊಳ್ಳುತ್ತಿದ್ದರು. ಶ್ರೀಮಂತರು ಇದಕ್ಕೆ ಹೊರತಲ್ಲ. ಈಗಾಗಲೇ ಬೇಸಿಗೆ ಆರಂಭವಾಗುತ್ತಿದಂತೆ ಬಳ್ಳಾರಿಯಲ್ಲಿ ರಸ್ತೆ ಬದಿಗಳಲ್ಲಿ ಕಲ್ಲಂಗಡಿ ಹಣ್ಣಿನ ಶೆಡ್ಗಳು ತೆರೆದುಕೊಂಡಿವೆ. ಡಿಸೆಂಬರ್ ಅಂತ್ಯ ಹಾಗೂ ಜನವರಿ ಆರಂಭದಲ್ಲಿ ಹಣ್ಣಿನ ವ್ಯಾಪಾರ ಶುರುವಾಗಿದ್ದು, ಬೇಸಿಗೆ ಹೆಚ್ಚಾದಂತೆ ವ್ಯಾಪಾರವು ಹೆಚ್ಚಾಗುತ್ತದೆ. ವ್ಯಾಪಾರ ಹೆಚ್ಚಾದಂತೆ ಬೆಲೆ ಸಹಜವಾಗಿ ಹೆಚ್ಚಾಗುತ್ತದೆ. ಈಗಾಗಲೇ ನಗರದ ಸುಧಾ ಕ್ರಾಸ್, ಅಂಡರ್ ಬ್ರಿಡ್ಜ್, ಅನಂತಪುರ ರಸ್ತೆ ಬದಿಯಲ್ಲಿ ಕಲ್ಲಂಗಡಿ ಹಣ್ಣಿನ ಟೆಂಟ್ಗಳು ತಲೆ ಎತ್ತಿವೆ.
ದುಬಾರಿಯಾಗುತ್ತಿರುವ ಕಲ್ಲಂಗಡಿ: ಆಂಧ್ರಪ್ರದೇಶದ ಕಡಪ, ನೆಲ್ಲೂರು, ನಾಯ್ಡುಪೇಟೆ, ರಾಜಂಪೇಟೆ, ತಮಿಳುನಾಡಿನಲ್ಲಿ ಕಲ್ಲಂಗಡಿಯನ್ನು ಹೆಚ್ಚಾಗಿ ಬೆಳೆಯುತ್ತಾರೆ. ಅಲ್ಲಿಂದ ಗುಜರಾತ್, ಮಹಾರಾಷ್ಟ್ರಗಳಿಗೆ ಪ್ರತಿನಿತ್ಯ 500 ಲೋಡ್ ಹೋಗುವುದರಿಂದ ಬೇಡಿಕೆ ಹೆಚ್ಚಾಗುತ್ತಿದೆ. ಹೀಗಾಗಿ ರೈತರು ಪ್ರತಿ ಕೆಜಿಗೆ # 8ರಿಂದ 10ವರೆಗೆ ಹಣಕ್ಕೆ ನೀಡುತ್ತಾರೆ. ದುಬೈ ಸೇರಿದಂತೆ ಇತರ ದೇಶಗಳಿಗೆ ಎಕ್ಸ್ಪೋರ್ಟ್ ಆರಂಭವಾದರೆ ಪ್ರತಿ ಕೆಜಿಗೆ # 15ಗೆ ನೀಡುತ್ತಾರೆ. ಮುಂದಿನ ದಿನಗಳಲ್ಲಿ ಕಲ್ಲಂಗಡಿ ದುಬಾರಿಯಾಗಲಿದೆ. ತಂಪು ತಣಿಸುವ ಕಲ್ಲಂಗಡಿ ಈ ಬಾರಿ ಬಡವರ ಜೇಬಿಗೆ ಕತ್ತರಿ ಹಾಕಲಿದೆ.
ಕಲ್ಲಂಗಡಿ ಹಣ್ಣು ಆರೋಗ್ಯಕ್ಕೆ ಉತ್ತಮ. ಹಣ್ಣಿನಲ್ಲಿ ನೀರಿನ ಅಂಶ ಹೆಚ್ಚಿರುವುದರಿಂದ ಆರೋಗ್ಯಕ್ಕೆ ಸಹಕಾರಿ. ಕಲ್ಲಂಗಡಿಯಲ್ಲಿನ ವಿಟಮಿನ್ ಸಿ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ. ರಕ್ತಸ್ರಾವ, ರಕ್ತ ಹೆಪ್ಪುಗಟ್ಟುವುದನ್ನು ತಡೆಯುತ್ತದೆ. ಪಚನ ಕ್ರಿಯೆಗೂ ಸಹಕಾರಿ. ಆದರೆ ರಾಸಾಯನಿಕ ಬಳಸಿ ಹಣ್ಣಾಗಿಸಿದ್ದು ಹಾಗೂ ತೆರೆದಿಟ್ಟ ಹಣ್ಣು ತಿನ್ನುವುದು ಆರೋಗ್ಯಕ್ಕೆ ಹಾನಿಕಾರಕ. ಈ ಬಗ್ಗೆ ಎಚ್ಚರಿಕೆಯೂ ಅಗತ್ಯ. ಇದನ್ನು ಬಿಟ್ಟರೆ ಕಲ್ಲಂಗಡಿ ಆರೋಗ್ಯಕ್ಕೆ ಉತ್ತಮ ಹಣ್ಣು ಎನ್ನುತ್ತಾರೆ ವೈದ್ಯ ಡಾ. ಯೋಗಾನಂದ ರೆಡ್ಡಿ. ಏನೇ ಆದರೂ ಕಲ್ಲಂಗಡಿ ಬೆಲೆ ಗಗನಕ್ಕೆ ಏರಿದ್ದರಿಂದ ಈ ಬಾರಿ ಬೇಸಿಗೆ ಬಿಸಿಲನಷ್ಟೇ ಹಣ್ಣುಗಳ ಬೆಲೆಯೂ ಗ್ರಾಹಕರ ಜೇಬಿಗೆ ಬಿಸಿ ಮುಟ್ಟಿಸುವುದು ಖಚಿತ.
ಇನ್ನಷ್ಟು ದುಬಾರಿ ಸಾಧ್ಯತೆ...
ಆಂಧ್ರಪ್ರದೇಶದ ನೆಲ್ಲೂರು, ನಾಯ್ಡುಪೇಟೆ, ಕಾಳಶ್ರೀಯಿಂದ. ಸ್ಥಳೀಯವಾಗಿ ದರ್ಗಾ ಹೊನ್ನೂರ್, ಬೆಳಗಲ್ ಕ್ರಾಸ್ನಿಂದ ತರಿಸಲಾಗುತ್ತದೆ. ಆದರೆ ಈ ಬಾರಿ ಬೆಲೆ ಹೆಚ್ಚಾಗಿದೆ. ನಾವು ಸೀಜನ್ ವ್ಯಾಪಾರಿಗಳಾಗಿದ್ದು, ಮೇ, ಜೂನ್ವರೆಗೆ ಕಲ್ಲಂಗಡಿ ಸೀಜನ್ ಇರುತ್ತದೆ. ಕಲ್ಲಂಗಡಿ ರಫ್ತು ಇಲ್ಲ, ಆದರೂ ಹಣ್ಣುಗಳು ದುಬಾರಿಯಾಗಿವೆ, ಎಕ್ಸ್ಪೋರ್ಟ್ ಆರಂಭವಾದರೆ ಒಂದು ಹೋಳಿನ ಬೆಲೆ # 15 ಆಶ್ಚರ್ಯಪಡಬೇಕಿಲ್ಲ.
ಣ ದಾದಾಪೀರ್, ಹಣ್ಣಿನ ವ್ಯಾಪಾರಿ
ಗ್ರಾಹಕರಿಗೆ ಹೊರೆ...
ಕಲ್ಲಂಗಡಿ ಹಣ್ಣು ಸುಲಭ ದರದಲ್ಲಿ ಬಡವರಿಗೆ ಸಿಗುವ ಮೂಲಕ ಬಿಸಿಲಿನ ತಾಪ ತಣಿಸುತ್ತಿತ್ತು. ಇದೀಗ ಹಣ್ಣು ದುಬಾರಿಯಾದರೆ ಹೇಗೆ? # 10 ಕೊಟ್ಟು ತಿನ್ನುವುದು ನಮಗೆ ಹೊರೆಯಾಗುತ್ತದೆ.
ಣ ಬಸವರಾಜ್, ಗ್ರಾಹಕ