ಸರ್ಕಾರದ ಯೋಜನೆ ಸಮರ್ಪಕವಾಗಿ ಬಳಸಿಕೊಳ್ಳಿ
ಕನ್ನಡಪ್ರಭ ವಾರ್ತೆ, ಹೊಸಪೇಟೆ, ಜ. 29
ಸಮಾಜದ ಬಡವರು, ಕಡು ಬಡವರು ಸರ್ಕಾರದ ಸೌಲಭ್ಯವನ್ನು ಸಮರ್ಪಕವಾಗಿ ಬಳಸಿಕೊಂಡು ಮುಖ್ಯವಾಹಿನಿಗೆ ಬರಬೇಕು ಎಂದು ಸಹಾಯಕ ಆಯುಕ್ತ ಡಾ. ಡಿ.ಆರ್. ಅಶೋಕ್ ಹೇಳಿದರು.
ತಾಲೂಕಿನ ವಡ್ಡರಹಳ್ಳಿ ಗ್ರಾಮದಲ್ಲಿ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಜಿಲ್ಲಾ ಆಡಳಿತದ ಆಶ್ರಯದಲ್ಲಿ ಪತ್ತಿಕೊಂಡ ವಿರೂಪಾಕ್ಷ ಶ್ರೇಷ್ಠಿ ಸ್ಮರಣಾರ್ಥ ನೀಡಿದ ನಿವೇಶನದಲ್ಲಿ, ಬಸವ ವಸತಿ ಯೋಜನೆಯಡಿ # 78 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡ ಆನಂದ್ ಸಿಂಗ್ ನಗರದ 104 ಮನೆಗಳ ಹಸ್ತಾಂತರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಬಡವರ ಅಭಿವೃದ್ಧಿಗೆ ಸರ್ಕಾರ ಸಾಕಷ್ಟು ಯೋಜನೆಗಳನ್ನು ರೂಪಿಸಿದ್ದು, ಸರ್ಕಾರದ ಯೋಜನೆಗಳನ್ನು ಸಮರ್ಪಕವಾಗಿ ಬಳಸಿಕೊಂಡು ಆರ್ಥಿಕಾಭಿವೃದ್ಧಿ ಹೊಂದಬೇಕು ಎಂದು ಹೇಳಿದರು.
ಪ್ರವಾಸೋದ್ಯಮ, ಜಿಲ್ಲಾ ಉಸ್ತುವಾರಿ ಸಚಿವ ಬಿ.ಎಸ್. ಆನಂದ್ ಸಿಂಗ್ ಅವರು ತಮ್ಮ ಕ್ಷೇತ್ರದ ಕಡು ಬಡವರನ್ನು ಗುರುತಿಸಿ, ಅವರಿಗೆ ಸೂರು ಒದಗಿಸುವ ಯೋಜನೆ ರೂಪಿಸಿದ್ದಾರೆ. ವಡ್ಡರಹಳ್ಳಿ ಗ್ರಾಮದಲ್ಲಿ 104 ಗುಂಪು ಮನೆಗಳನ್ನು ಕಟ್ಟಿಸಿ, ಮಾದರಿ ನಗರ ನಿರ್ಮಿಸಿಕೊಟ್ಟಿದ್ದಾರೆ. ಜನಪ್ರತಿನಿಧಿಗಳು, ಅಧಿಕಾರಿಗಳು ಸೇರಿ ಅಭಿವೃದ್ಧಿ ಕೆಲಸ ಮಾಡಿದಾಗ ಮಾತ್ರ ಕ್ಷೇತ್ರದಲ್ಲಿ ಎಲ್ಲ ಕಾರ್ಯಗಳು ಯಶಸ್ವಿಯಾಗಿ ನಡೆಯಲು ಸಾಧ್ಯ ಎಂದು ಅಶೋಕ್ ಹೇಳಿದರು.
ತಹಸೀಲ್ದಾರ್ ಬಸವರಾಜ್ ಸೋಮಣ್ಣವರ್, ತಾಪಂ ಕಾರ್ಯನಿರ್ವಹಣಾಧಿಕಾರಿ ಬಾಲಸ್ವಾಮಿ ದೇಶಪ್ಪ, ಜಿಪಂ ಕಾರ್ಯನಿರ್ವಾಹಕ ಅಭಿಯಂತ ವೆಂಕಟರಾಜು, ಭೂಸೇನಾ ನಿಗಮದ ಸಹಾಯಕ ನಿರ್ದೇಶಕ ಬಿ.ಪಿ. ಲಿಂಗರಾಜ್, ಬಿಜೆಪಿ ಮುಖಂಡ ಧರ್ಮೇಂದ್ರ ಸಿಂಗ್, ತಾಪಂ ಅಧ್ಯಕ್ಷೆ ತಾರಿಹಳ್ಳಿ ಹಾಲಮ್ಮ ಶಿವಮೂರ್ತಿ, ಸ್ಥಳೀಯ ಗ್ರಾಪಂ ಅಧ್ಯಕ್ಷ ಪಿ. ಹುಚ್ಚಪ್ಪ, ಸ್ಥಳದ ದಾನಿ ಪತ್ತಿಕೊಂಡ ಸೋಮನಾಥ ಶೆಟ್ಟಿ, ಮುಖಂಡರಾದ ಕುಮಾರೆಪ್ಪ, ಕೊಟ್ರಪ್ಪ, ದೇವೇಂದ್ರಪ್ಪ, ಮಹಾಂತ ರೆಡ್ಡಿ, ರುದ್ರಪ್ಪ, ಗಂಗಾಧರಪ್ಪ, ಪಂಚಪ್ಪ, ಸಂಡೂರು ತಿಮ್ಮಪ್ಪ, ಗೋವಿಂದ ರೆಡ್ಡಿ, ಪಂಪನಗೌಡ, ಶಂಕರ್ ಮೇಟಿ, ಆನಂದ್, ನಾಗರಾಜ್ ಶೆಟ್ಟಿ, ಇಂಗಳಿಗಿ ನಟರಾಜ್ ಉಪಸ್ಥಿತರಿದ್ದರು.
ಸ್ಥಳದ ದಾನಿ ಪತ್ತಿಕೊಂಡ ಸೋಮನಾಥ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಬಾಲಸ್ವಾಮಿ ದೇಶಪ್ಪ ಸ್ವಾಗತಿಸಿದರು. ಡಾ. ಬಸವರಾಜ್ ಬೆಣ್ಣೆ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.