ಮಾದಕ ವಸ್ತುಗಳ ನಿರ್ಮೂಲನೆ ದಿನಾಚರಣೆ
ಬಳ್ಳಾರಿ: ಮೈತ್ರಿ ಸಮಗ್ರ ವ್ಯಸನ ಮುಕ್ತಿ ಕೇಂದ್ರದ ವತಿಯಿಂದ ನಗರದ ಸಂತ ಜೋಸೆಫ್ ಬಾಲಕರ ಪ್ರೌಢಶಾಲೆಯಲ್ಲಿ ಅಂತಾರಾಷ್ಟ್ರೀಯ ಮಾದಕ ಪದಾರ್ಥಗಳ ನಿರ್ಮೂಲನಾ ದಿನಾಚರಣೆಯನ್ನು ಆಚರಿಸಲಾಯಿತು. ಮಹಿಳಾ ಮತ್ತು ಮಕ್ಕಳ ಕಲ್ಯಾಣಾಭಿವೃದ್ಧಿ ಇಲಾಖೆ ಉಪನಿರ್ದೇಶಕ ಬಿ.ಎಸ್ ಕಲಾದಗಿ ಕಾರ್ಯಕ್ರಮ ಉದ್ಘಾಟಿಸಿದರು. ನಂತರ ಮಾತನಾಡಿ, ಮಾದಕ ಪದಾರ್ಥಗಳ ಸೇವನೆಯಿಂದ ದೂರವಿರಲು ಯುವ ಜನತೆಗೆ ಸಲಹೆ ನೀಡಿದರು.
ಕೌಲ್‌ಬಜಾರ್ ಪಿಎಸ್‌ಐ ಮಹಮ್ಮದ್ ಗೌಸ್ ಮುಖ್ಯ ಅತಿಥಿಯಾಗಿ ಮಾತನಾಡಿ, ಇಂದು ಸಮಾಜದಲ್ಲಿ ಮಾದಕ ಪದಾರ್ಥಗಳ ಸೇವನೆಯಿಂದ ಅಪರಾಧ ಕೃತ್ಯಗಳು ಹೆಚ್ಚಾಗುತ್ತಿದ್ದು, ಇದರಿಂದಾಗಿ ಯುವ ಸಮಾಜವು ದಾರಿ ತಪ್ಪುತ್ತಿದೆ. ಆದ್ದರಿಂದ ದುಶ್ಚಟಗಳಿಂದ ದೂರವಿರಬೇಕು ಎಂದು ತಿಳಿಸಿದರು. ಮೈತ್ರಿ ಅಸೋಸಿಯೇಷನ್‌ನ ಪ್ರಾದೇಶಿಕ ಯೋಜನಾ ನಿರ್ದೇಶಕ ಸಿ.ಎಚ್. ಕುಮಾರಸ್ವಾಮಿ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಪಶುಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕ ಡಾ. ಗಾದಿಲಿಂಗನಗೌಡ, ಸಂತ ಜೋಸೆಫ್ ಪ್ರೌಢ ಶಾಲೆ ಪ್ರಾಚಾರ್ಯ ಐವಾನ್ ಪಿಂಟೋ, ನ್ಯಾಷನಲ್ ಎಂಎಸ್‌ಡಬ್ಲ್ಯೂ ಕಾಲೇಜು ಪ್ರಾಚಾರ್ಯ ವೆಂಕಟೇಶ್, ಡಾ. ವೀರಭದ್ರಗೌಡ, ಬಸವರಾಜ್, ಜಗನ್ನಾಥ, ಸಂತ ಜೋಸೆಫ್ ಪ್ರೌಢಶಾಲೆ ಮುಖ್ಯೋಪಾಧ್ಯಾಯ ರಜಿಯಾ ಬೇಗಂ ಇದ್ದರು. ಸಿ. ಚಂದ್ರಶೇಖರ್ ಸ್ವಾಗತಿಸಿದರು. ಎಂ.ಬಿ. ಸತೀಶ್ ನಿರೂಪಿಸಿದರು.