ಶಿಕ್ಷಕರ ವರ್ಗಾವಣೆ ಕಾಯ್ದೆಗೆ ತಿದ್ದುಪಡಿ ತನ್ನಿ
ಹೂವಿನಹಡಗಲಿ: ಶಿಕ್ಷಕರ ವರ್ಗಾವಣೆಯು ಹಲವಾರು ಲೋಪದೋಷಗಳಿಂದ ಕೂಡಿದೆ, ಆದರಿಂದ ವರ್ಗಾವಣೆ ಕಾಯ್ದೆಗೆ ತಿದ್ದುಪಡಿ ತರಬೇಕೆಂದು ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಒತ್ತಾಯಿಸಿದೆ. ಈ ಕುರಿತು ಇಲ್ಲಿನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಮೂಲಕ ಸಂಘದ ಪದಾಧಿಕಾರಿಗಳು ಶಿಕ್ಷಣ ಸಚಿವರಿಗೆ ಮನವಿ ಸಲ್ಲಿಸಿದರು. ಶಿಕ್ಷಕರ ವರ್ಗಾವಣೆ ಕಾಯ್ದೆಗೆ ತಿದ್ದುಪಡಿ ತಂದು ಹೊಸದಾಗಿ ನೇಮಕಗೊಂಡು 2 ವರ್ಷ ಪೂರೈಸಿದ ಶಿಕ್ಷಕರು ಕೂಡ ವರ್ಗಾವಣೆ ಆಗಲು ಅವಕಾಶ ಮಾಡಿಕೊಡಬೇಕು. ಘಟಕದಿಂದ ಘಟಕಕ್ಕೆ ಶೇ. 1ರ ಬದಲಾಗಿ ಶೇ. 5ರಷ್ಟು ವರ್ಗಾವಣೆಗೆ ಅವಕಾಶ ನೀಡುವಂತೆ ಮನವಿಯಲ್ಲಿ ಒತ್ತಾಯಿಸಿದ್ದಾರೆ. ನಿರಂತರ ವ್ಯಾಪಕ ಮೌಲ್ಯಮಾಪನ ಪದ್ಧತಿಯಲ್ಲಿರುವ ಲೋಪದೋಷ ಸರಿಪಡಿಸಬೇಕು. ಶಿಕ್ಷಕರಿಗೆ ಬಡ್ತಿ ನೀಡುವಾಗ ಎ. ಬಿ.ಸಿ. ವಲಯದ ಖಾಲಿ ಇರುವ ಹುದ್ದೆಗಳಿಗೆ ಬಡ್ತಿ ನೀಡಬೇಕು. ವಿಶೇಷ ವೇತನ ರು. 300 ಮೂಲ ವೇತನದಲ್ಲಿ ವಿಲೀನಗೊಳಿಸಬೇಕೆಂಬ ಬೇಡಿಕೆ ಈಡೇರಿಸುವಂತೆ ಶಿಕ್ಷಕರು ಆಗ್ರಹಿಸಿದ್ದಾರೆ. ಶಿಕ್ಷಕರ ಸಂಘದ ಅಧ್ಯಕ್ಷ ಮುಖ್ತಾರ್ ಅಹ್ಮದ್, ಕಾರ್ಯದರ್ಶಿ ಎಚ್.ಎಂ. ಕೊಟ್ರಯ್ಯ, ಗೌರವಾಧ್ಯಕ್ಷ ಎ.ವಿ. ಗುಡ್ಯಾನಾಯ್ಕ, ಖಜಾಂಚಿ ಯು. ಆನಂದ, ಸಹ ಕಾರ್ಯದರ್ಶಿ ಎಸ್. ವಿಜಯಕುಮಾರಿ, ಸಂಘಟನಾ ಕಾರ್ಯದರ್ಶಿ ಎಚ್.ಟಿ. ಶೋಭಾ ಇದ್ದರು.