ಶೈಕ್ಷಣಿಕ ಸಂಸ್ಥೆಗಳಿಗೆ ಎಲ್ಲ ಸಹಕಾರ
ಕನ್ನಡಪ್ರಭ ವಾರ್ತೆ, ಹೂವಿನಹಡಗಲಿ, ಜು. 1
ಎಲ್ಲ ವರ್ಗದ ಸಮುದಾಯಗಳಿಗೆ ಉಚಿತ ಶಿಕ್ಷಣ ನೀಡುತ್ತಿರುವ ಶೈಕ್ಷಣಿಕ ಸಂಘ, ಸಂಸ್ಥೆಗಳಿಗೆ ಸರ್ಕಾರದಿಂದ ಎಲ್ಲ ರೀತಿಯ ಸಹಕಾರ ನೀಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಕಾರ್ಮಿಕ ಸಚಿವ ಪಿ.ಟಿ. ಪರಮೇಶ್ವರನಾಯ್ಕ ಹೇಳಿದರು.
ಪಟ್ಟಣದ ಕಾರ್ಮೆಲ್ ಚರ್ಚ್‌ನಲ್ಲಿ ತಾಲೂಕು ಕಸಾಪ ಹಾಗೂ ಕಾರ್ಮೆಲ್ ಜ್ಯೋತಿ ಎನ್‌ಜಿಓ ಸಹಯೋಗದಲ್ಲಿ ಆಯೋಜಿಸಲಾಗಿದ್ದ 10ನೇ ತರಗತಿಯ ಪರೀಕ್ಷೆಯಲ್ಲಿ ಕನ್ನಡದಲ್ಲಿ ಅತ್ಯಧಿಕ ಅಂಕ ಪಡೆದಿರುವ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಇಂದಿನ ದಿನಗಳಲ್ಲಿ ಹಣ ಗಳಿಸುವುದಕ್ಕಾಗಿಯೇ ಸಾಕಷ್ಟು ಶೈಕ್ಷಣಿಕ ಸಂಘ, ಸಂಸ್ಥೆಗಳು ಹುಟ್ಟುಕೊಂಡು ಶಿಕ್ಷಣವನ್ನು ವ್ಯಾಪಾರದ ಸರಕನ್ನಾಗಿ ಮಾಡಿಕೊಂಡಿವೆ. ಉತ್ತರ ಕರ್ನಾಟಕ ಸೇರಿದಂತೆ ರಾಜ್ಯದ ಮೂಲೆ ಮೂಲೆಗಳಲ್ಲಿಯೂ ಸಿದ್ಧಗಂಗಾ, ಆದಿಚುಂಚನಗಿರಿ, ಮುರುಘಾಮಠ ಸೇರಿದಂತೆ ಹತ್ತು ಹಲವು ಮಠಗಳು ಇಂದಿಗೂ ಕಡು ಬಡವರ ಪ್ರತಿಭಾವಂತ ಮಕ್ಕಳಿಗೆ ಆಸರೆಯಾಗಿ ನಿಂತು ಉಚಿತ ಶಿಕ್ಷಣ ನೀಡುತ್ತಿವೆ. ಆ ಮೂಲಕ ಸಮಾಜದಲ್ಲಿ ಸಾಕಷ್ಟು ಬದಲಾವಣೆ ತಂದಿದ್ದು, ಇತರ ಸಂಸ್ಥೆಗಳಿಗೆ ಆದರ್ಶಪ್ರಾಯವಾಗಿವೆ ಎಂದರು.
ತಾಲೂಕು ಕಸಾಪ ಅಧ್ಯಕ್ಷ ಸುರೇಶ ಅಂಗಡಿ ಮಾತನಾಡಿದರು. ಸಮಾರಂಭದಲ್ಲಿ ಜಿ.ಪಂ. ಸದಸ್ಯ ಜಿ. ವಸಂತ, ಎಪಿಎಂಸಿ ಅಧ್ಯಕ್ಷ ವಾರದ ಗೌಸ್ ಮೊಹಿದ್ದೀನ್, ಮುಖಂಡರಾದ ಅಟವಾಳಿಗಿ ಕೊಟ್ರೇಶ, ಅರವಳ್ಳಿ ವೀರಣ್ಣ, ನವಲಿ ಗ್ರಾಪಂ ಅಧ್ಯಕ್ಷ ಹಾಲಪ್ಪ, ಕಾರ್ಮೆಲ್ ಜ್ಯೋತಿ ಎನ್‌ಜಿಓದ ಸಿಲ್ವೆಸ್ಟರ್, ಬಿಇಓ ಬಿ. ವಿಜಯಕುಮಾರ ಹಾಗೂ ಇತರರು ಉಪಸ್ಥಿತರಿದ್ದರು.
ಇದೇ ವೇಳೆ ಕನ್ನಡದಲ್ಲಿ 125ಕ್ಕೆ 125 ಅಂಕಗಳನ್ನು ಪಡೆದಿರುವ ದುರುಗಮ್ಮ, ಎಂ.ಎಸ್. ಶಿಲ್ಪಾ ಅವರಿಗೆ ಸಚಿವರು ತಮ್ಮ ವೈಯಕ್ತಿಕ ತಲಾ ರು. 5 ಸಾವಿರ ನಗದು ನೀಡಿದರು. ಅತಿ ಹೆಚ್ಚು ಅಂಕ ಗಳಿಸಿದ 41 ವಿದ್ಯಾರ್ಥಿಗಳಿಗೆ ಕನ್ನಡ ಕುವರ-ಕುವರಿ ಪ್ರಶಸ್ತಿಗಳನ್ನು ನೀಡಿ ಪುರಸ್ಕರಿಸಲಾಯಿತು. ಕಸಾಪ ಕಾರ್ಯದರ್ಶಿ ಚಿದಾನಂದ, ನಾಗರಾಜ ಮಲ್ಕಿಒಡೆಯರ್ ನಿರ್ವಹಿಸಿದರು.