ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಖಾತ್ರಿ ಇಲ್ಲದ ಕಮ್ಮಾರ ಬಯಲಿಗೆ

Lingaraj Badiger
Updated On : 5 Jul 2013, 11:02 am

- ಚಂದ್ರು ಕೊಂಚಿಗೇರಿ
ಹೂವಿನಹಡಗಲಿ: ಬದುಕು ಜಟಕಾ ಬಂಡಿ, ವಿಧಿ ಅದರ ಸಾಹೇಬ, ಕುದುರೆ ನೀನ್, ಅವನು ಪೇಳ್ದೆಂತೆ ಪಯಣಿಗರು ಮದುವೆಗೋ, ಮಸಣಕೋ ಹೋಗೆಂದ ಕಡೆಗೋಡು ಪದ ಕುಸಿಯೆ ನೆಲವಿಹುದು ಮಂಕುತಿಮ್ಮ....
ಡಿ.ವಿ. ಗುಂಡಪ್ಪನವರ ಮಂಕುತಿಮ್ಮನ ಕಗ್ಗದ ಈ ಸಾಲಿನಂತೆ ತುತ್ತಿನ ಚೀಲ ತುಂಬಿಸಿಕೊಳ್ಳಲು ಅಸಂಖ್ಯಾತ ಕುಟುಂಬಗಳು ಬೀದಿಯಲ್ಲೆ ಬದುಕು ಸಾಗಿಸುತ್ತಿವೆ.
ಬಯಲಲ್ಲೇ ಜೀವನ: ಪಟ್ಟಣದಲ್ಲಿ ರಾಜಸ್ಥಾನ ಹಾಗೂ ಮಧ್ಯಪ್ರದೇಶ ಮೂಲಕ ಬಯಲು ಕಮ್ಮಾರರ ಕುಟುಂಬ ಬಯಲಲ್ಲೇ ಜೀವನ ಸಾಗಿಸುತ್ತಿವೆ. ಬಯಲಲ್ಲಿ ಜೋಪಡಿ ಇಲ್ಲದೆ ರಸ್ತೆ ಬದಿ ಕಬ್ಬಿಣ ಕಾಯಿಸಿ ಅದರಿಂದ ಕೊಡ್ಲಿ, ಪಿಕಾಸಿ, ಕುಡಗೋಲು, ಮಚ್ಚು ಇತರೆ ರೈತರಿಗೆ ಅಗತ್ಯ ಸಲಕರಣೆ ತಯಾರಿಸಿ ಅದರಿಂದ ಬಂದ ಅಲ್ಪ ಹಣದಲ್ಲೇ ಬದುಕಿನ ಬಂಡಿ ಸಾಗಿಸುತ್ತಿದ್ದಾರೆ. ಪಟ್ಟಣಕ್ಕೆ ಬಂದ ಅಲೆಮಾರಿ ಜನಾಂಗದಂತೆ ಜೀವನ ಸಾಗಿಸುವ ಈ ಕುಟುಂಬಗಳಿಗೆ ಸರ್ಕಾರದ ಯಾವುದೇ ಸೌಲಭ್ಯಗಳಿಲ್ಲ, ಜತೆಗೆ ಈ ಕುಟುಂಬ ಸದಸ್ಯರ ಮಕ್ಕಳ ವಿದ್ಯಾಭ್ಯಾಸ ಚಿಂತೆ ಇಲ್ಲ. ಕಬ್ಬಿಣ ಕಾಯಿಸಿ ಕೃಷಿಗೆ ಬೇಕಾದ ರೈತರ ಪರಿಕರಗಳನ್ನು ಮಾಡುವುದೇ ಇವರ ಕಾಯಕ.
ಮಕ್ಕಳಿಗೂ ಇದೆ ಕಾಯಕ: ಈ ದುನಿಯಾದಾಗ ಮಕ್ಕಳು ಅಕ್ಷರ ಕಲಿತು ಏನು ಮಾಡಬೇಕ್ರಿ? ನಾವ್ ಒಂದ್ ಕಡೆ ನಮ್ಮ ಮಕ್ಕಳು ಒಂದ್ ಕಡೆ ಆಗುತ್ತಾವು. ಅದಕ್ಕೆ ನಾವು ಮಕ್ಕಳನ್ನು ಶಾಲೆಗೆ ಕಳಿಸದೇ ನಮ್ಮ ಮಕ್ಕಳಲ್ಲೂ ಇದೇ ಕಾಯಕ ರೂಢಿಯಾಗಿದೆ, ಇವ್ರನ್ನ ಶಾಲೆಗೆ ಕಳಿಸಿದರೆ ನಮ್ಮ ಜೀವನ ನಡೆಯೋದು ಕಷ್ಟ ಐತಿ ಸಾಹೇಬ್ರ ಎಂದು ಕಲಿತಿರುವ ಅಲ್ಪ ಸ್ವಲ್ಪ ಕನ್ನಡದಲ್ಲೇ ಹೇಳುತ್ತಾರೆ ಬಯಲು ಕಮ್ಮಾರರ ಕುಟುಂಬದ ಯಜಮಾನಿ ಮೀನಾಕ್ಷಿ.
24 ಜನರಿರುವ ಕುಟುಂಬ: ಬಯಲು ಕಮ್ಮಾರರದ್ದು 24 ಮಂದಿಯ ತುಂಬು ಕುಟುಂಬ, ಒಂದೇ ಕಡೆ ವಾಸ, ನೆರಳಿಗಾಗಿ ಪಟ್ಟಣದ ಹೊರ ವಲಯದ ಕೊಳಚೆ ಪ್ರದೇಶದಲ್ಲಿ ಜೋಪಡಿ ಹಾಕಿಕೊಂಡು ದಿನದ ರಾತ್ರಿ ಕಳೆಯುತ್ತಾರೆ. ಮಳೆಗಾಲದಲ್ಲಿ ಗುಡಿ ಗುಂಡಾರಗಳೇ ಗತಿ. ಕಾದ ಕಬ್ಬಿಣ ಮಣಿಸುವ ಕಾಯಕ ಕರಗತ ಮಾಡಿಕೊಂಡ ಈ ಕುಟುಂಬದ ಸಣ್ಣ ಮಕ್ಕಳು ಸೇರಿದಂತೆ ಮಹಿಳೆಯರು ಇದೇ ಕೆಲಸದಲ್ಲಿ ತೊಡಗಿದ್ದಾರೆ. ಇದರಿಂದಲೇ ಇವರ ಬದುಕಿನ ಬಂಡಿ ಸಾಗುತ್ತಿದೆ. ಈ ವೃತ್ತಿ ಬಿಟ್ಟರೆ ಬೇರಾವ ಕೆಲಸ ಮಾಡಲು ಇವರಿಗೆ ಬರಲ್ಲ.
ಹಬ್ಬ ಹರಿದಿನಗಳಿಗೆ ಸ್ವಗ್ರಾಮಗಳಿಗೆ ಹೋಗದೇ ಇವರು ಕಾಯಕ ಮಾಡುತ್ತಾರೆ, ರಾಜ್ಯದಲ್ಲಿದ್ದು 25 ವರ್ಷ ಕಳೆಯುತ್ತಾ ಬಂದರೂ ಸರ್ಕಾರ ಈವರೆಗೂ ಇವರಿಗೊಂದು ಮನೆ ಸೇರಿದಂತೆ ಯಾವುದೇ ಸೌಲಭ್ಯ ನೀಡಿಲ್ಲ. ಪಡಿತರ ಚೀಟಿಯನ್ನೂ ಕೊಟ್ಟಿಲ್ಲ. ಇಂಥ ನೂರಾರು ಕುಟುಂಬಗಳು ದೇಶದಲ್ಲಿ ಅಲೆಮಾರಿ ಜನಾಂಗಗಳಂತೆ ಬಯಲಿನಲ್ಲಿ ಬದುಕು ಸಾಗಿಸುತ್ತಿವೆ. ಇವರಿಗೆ ಸರ್ಕಾರದ ಸೌಲಭ್ಯಗಳು ಮರೀಚಿಕೆಯಾಗಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement