ಬಿಜೆಪಿ ಸರ್ಕಾರದ ಅಭಿವೃದ್ಧಿ ಕಾಮಗಾರಿಗಳಿಗೆ ತಡೆ
ಹಗರಿಬೊಮ್ಮನಹಳ್ಳಿ: ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಂಜೂರಾಗಿದ್ದ ರು. 8 ಕೋಟಿ ಅನುದಾನದ ಹಗರಿಬೊಮ್ಮನಹಳ್ಳಿ ತಾಲೂಕಿನ 42 ಗ್ರಾಮಗಳಲ್ಲಿ ರಸ್ತೆ ನಿರ್ಮಾಣ ಕಾಮಗಾರಿಗಳ ಟೆಂಡರ್ ಪ್ರಕ್ರಿಯೆ ಈಗಾಗಲೆ ಮುಗಿದು, ವರ್ಕ್ ಆರ್ಡರ್ ನೀಡಿದ್ದರೂ ಇಲ್ಲಿತನಕ ಕಾಮಗಾರಿಗಳನ್ನು ಆರಂಭಿಸಿದೇ ನಿರ್ಲಕ್ಷ್ಯ ವಹಿಸಲಾಗಿದೆ ಎಂದು ಮಾಜಿ ಶಾಸಕ ಕೆ. ನೇಮಿರಾಜ ನಾಯ್ಕ ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಟೆಂಡರ್ ಆಗಿರುವ ಕಾಮಗಾರಿಗಳನ್ನು ತಡೆಹಿಡಿಯುವುದು ಸರಿಯಲ್ಲ. ಪಟ್ಟಣ ಸೇರಿದಂತೆ ತಾಲೂಕಿನ 40ಕ್ಕೂ ಅಧಿಕ ಗ್ರಾಮಗಳಲ್ಲಿ ಉತ್ತಮ ರಸ್ತೆ ನಿರ್ಮಾಣ ಮಾಡುವ ಉದ್ದೇಶದಿಂದ ಅಂದಿನ ಬಿಜೆಪಿ ಸರ್ಕಾರದ ಮಟ್ಟದಲ್ಲಿ ಒತ್ತಡ ಹಾಕಿ ಜಲಸಂಪನ್ಮೂಲ ಇಲಾಖೆಯಿಂದ ಅನುದಾನವನ್ನು ಮಂಜೂರು ಮಾಡಿಸಲಾಗಿತ್ತು. ಆದರೆ ಈಗ ನೋಡಿದರೆ ಕಾಮಗಾರಿಗಳನ್ನು ತಡೆಹಿಡಿಯುವ ಮೂಲಕ ಉತ್ತಮ ರಸ್ತೆ ಸೌಲಭ್ಯದಿಂದ ಗ್ರಾಮೀಣ ಜನತೆ ವಂಚಿತರಾಗುವಂತೆ ಮಾಡಿದೆ ಎಂದು ದೂರಿದರು.
ಉದ್ಧಾರ ಮಾಡಲಿ: ಕ್ಷೇತ್ರದ ಹಾಲಿ ಶಾಸಕರ ಕುಮ್ಮಿಕ್ಕಿನಿಂದಲೆ ಇವತ್ತು ಟೆಂಡರ್ ಆಗಿರುವ ಕಾಮಗಾರಿಗಳನ್ನು ತಡೆಹಿಡಿಯಲಾಗಿದೆ ಎಂದು ಆರೋಪಿಸಿದ ನೇಮಿರಾಜ, ಕ್ಷೇತ್ರದ ಅಭಿವೃದ್ಧಿ ಬಗ್ಗೆ ಆಸಕ್ತಿ ಇದ್ದರೆ ಸರ್ಕಾರದ ಮೇಲೆ ಪ್ರಭಾವ ಬೀರಿ ಹೆಚ್ಚು ಅನುದಾನ ತಂದು ಕ್ಷೇತ್ರವನ್ನು ಉದ್ಧಾರ ಮಾಡಲಿ. ಆದರೆ ಈ ರೀತಿ ಅಭಿವೃದ್ಧಿ ಕಾರ್ಯಕ್ಕೆ ಕೊಕ್ಕೆ ಹಾಕುವುದು ಸರಿಯಲ್ಲಿ ಎಂದು ಹಾಲಿ ಶಾಸಕ ಭೀಮಾನಾಯ್ಕ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು.
ಪಟ್ಟಣದ ಹೊಸಪೇಟೆ-ಶಿವಮೊಗ್ಗ ರಾಜ್ಯ ಹೆದ್ದಾರಿ ಮೇಲೆ ಬಸವೇಶ್ವರ ವೃತ್ತ ಮತ್ತು ಬಸವಣ್ಣನವರ ಪುತ್ಥಳಿ ಪ್ರತಿಷ್ಠಾಪಿಸುವ ಕಾಮಗಾರಿ ತಾವು ಶಾಸಕರಾಗಿದ್ದ ಅವಧಿಯಲ್ಲೇ ಆರಂಭವಾಗಿದ್ದವು. ಆದರೆ ವಿಧಾನಸಭೆ ಚುನಾವಣೆ ಘೋಷಣೆಯಾಗಿ, ನೀತಿಸಂಹಿತೆ ಜಾರಿಯಲ್ಲಿದ್ದರಿಂದ ಪೂರ್ಣಗೊಂಡ ಕಾಮಗಾರಿಗಳನ್ನು ಉದ್ಘಾಟಿಸಲು ಆಗಲಿಲ್ಲ. ಕೂಡಲೆ ಪೂರ್ಣಗೊಂಡ ಕಾಮಗಾರಿಗಳನ್ನು ಲೋಕಾರ್ಪಣೆ ಮಾಡುವಂತೆ ತಾಲೂಕಾಡಳಿತವನ್ನು ನೇಮಿರಾಜ ನಾಯ್ಕ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ನರೇಗಲ್ ಕೊಟ್ರೇಶ್, ತಾಪಂ ಮಾಜಿ ಅಧ್ಯಕ್ಷ ಪಿ. ಸೂರ್ಯಬಾಬು, ಎಪಿಎಂಸಿ ಮಾಜಿ ಅಧ್ಯಕ್ಷ ಕೆ. ರೋಹಿತ್, ಅಡವಿಆನಂದದೇವನಹಳ್ಳಿ ಕೊಟ್ರೇಶ್, ಬ್ಯಾಟಿ ಮಲ್ಲೇಶ, ಹರಿಜನ ರಾಮಣ್ಣ, ನಾಗಯ್ಯ ಇದ್ದರು.
ಅರ್ಜಿ ಆಹ್ವಾನ
ಬಳ್ಳಾರಿ: ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಇಲಾಖೆಯು 2013-14ನೇ ಸಾಲಿಗಾಗಿ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಮುಸ್ಲಿಂ, ಕ್ರಿಶ್ಚಿಯನ್, ಜೈನ್ ಜನಾಂಗದ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ಮುಂದುವರೆಸಲು ಉತ್ತೇಜನ ನೀಡುವ ಸಲುವಾಗಿ ಪ್ರೋತ್ಸಾಹ ಧನ ನೀಡಲು ಅರ್ಜಿ ಆಹ್ವಾನಿಸಿದೆ. ಅರ್ಜಿಗಳನ್ನು ಅಗತ್ಯ ದಾಖಲೆಗಳನ್ನು ಲಗತ್ತಿಸಿ ಜು. 31ರೊಳಗಾಗಿ ಜಿಲ್ಲಾ ಅಧಿಕಾರಿಗಳು, ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಬಳ್ಳಾರಿಗೆ ಸಲ್ಲಿಸಬೇಕೆಂದು ಪ್ರಕಟಣೆ ತಿಳಿಸಿದೆ.