ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹ
ಕನ್ನಡಪ್ರಭ ವಾರ್ತೆ, ಬಳ್ಳಾರಿ, ಜು. 4
ಕೊಳಗೇರಿ ಪ್ರದೇಶಗಳ ಸಮಗ್ರ ಅಭಿವೃದ್ಧಿಗೆ ರಾಜ್ಯ ಸರ್ಕಾರ ಬಜೆಟ್‌ನಲ್ಲಿ ಪ್ರತ್ಯೇಕ ಅನುದಾನ ಮೀಸಲಿಡುವುದು ಸೇರಿದಂತೆ ತಮ್ಮ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಸ್ಲಂ ಜನಾಂದೋಲನ ಹಾಗೂ ಜಿಲ್ಲಾ ಕೊಳೆಗೇರಿ ನಿವಾಸಿಗಳ ಒಕ್ಕೂಟ ಆಗ್ರಹಿಸಿದೆ.
ಈ ಕುರಿತು ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿಪತ್ರ ಸಲ್ಲಿಸಿದ ಒಕ್ಕೂಟ, ಬಜೆಟ್‌ನಲ್ಲಿ 2011ರ ಜನಗಣತಿ ಪರಿಗಣಿಸಿ ರಾಜ್ಯದಲ್ಲಿರುವ ಸ್ಲಂ ನಿವಾಸಿಗಳು, ನಗರ ಬಡಜನರ ಜನಸಂಖ್ಯೆಗೆ ಅನುಗುಣವಾಗಿ ರಾಜಸ್ವದಲ್ಲಿ ಹಣ ಮೀಸಲಿಟ್ಟು, ಇದರ ಅನುಷ್ಠಾನಕ್ಕೆ ಸಾಮಾಜಿಕ ನ್ಯಾಯ ಸಚಿವಾಲಯ ಘೋಷಿಸಬೇಕು. ನರ್ಮ್ ಯೋಜನೆಯ ಸ್ಲಂಮುಕ್ತ ನಗರಗಳ ಭಾಗವಾಗಿ ರಾಜೀವ್ ಅವಾಸ್ ಯೋಜನೆಯಲ್ಲಿ ಕೊಳಗೇರಿ ನಿವಾಸಿಗಳಿಗೆ ಭೂಮಿ ಹಕ್ಕು ನೀಡಿ ಒಂಟಿ ಮನೆಗಳನ್ನೇ ನಿರ್ಮಿಸಲು ಬಜೆಟ್‌ನಲ್ಲಿ ಘೋಷಿಸಬೇಕು. ರಾಜ್ಯದ ಕೊಳೆಗೇರಿ ನಿವಾಸಿಗಳ ಪುನರ್‌ವಸತಿಗೆ ಭೂಸ್ವಾಧೀನ ಮಾಡಲು ಕೊಳಗೇರಿ ಅಭಿವೃದ್ಧಿ ಮಂಡಳಿಗೆ ಬಜೆಟ್‌ನಲ್ಲಿ ರು. 500 ಕೋಟಿ ಮೀಸಲಿಡಬೇಕು ಎಂದು ಆಗ್ರಹಿಸಿದೆ.
ನಿವಾಸಿಗಳಿಗೆ ಮೂಲ ಸೌಲಭ್ಯ ಕಲ್ಪಿಸಲು ಪ್ರತ್ಯೇಕವಾಗಿ ರು. 500 ಕೋಟಿ ಹಣವನ್ನು ನೀಡಬೇಕು. 2013ರ ವಿಧಾನಸಭಾ ಚುನಾವಣೆ ಪ್ರಣಾಳಿಕೆಯಲ್ಲಿ ಘೋಷಿಸಿರುವಂತೆ ನಿವಾಸಿಗಳಿಗೆ ಹಕ್ಕುಪತ್ರ ನೀಡಲು ಹಣ ಮೀಸಲಿಟ್ಟು, ರಾಜ್ಯದ ಎಲ್ಲ ಕೊಳೆಗೇರಿ ನಿವಾಸಿಗಳಿಗೆ ಭೂಮಿ ಹಕ್ಕನ್ನು ನೀಡಬೇಕು. ಸಿ.ಎಸ್. ದ್ವಾರಕನಾಥ್ ಅವರ ವರದಿಯನ್ನು ಅನುಷ್ಠಾನಗೊಳಿಸಬೇಕು. ಅಲೆಮಾರಿ ಸಮುದಾಯಗಳನ್ನು ಸಮಗ್ರವಾಗಿ ಸಮೀಕ್ಷೆ ಮಾಡಿ ಬಿಟ್ಟು ಹೋಗಿರುವ ಸಮುದಾಯಗಳನ್ನು ಸೇರಿಸಿ ಅವರ ಅಭಿವೃದ್ಧಿಗೆ ಪೂರಕವಾದ ಯೋಜನೆಗಳನ್ನು ಮಾಡಬೇಕು ಎಂದು ಒತ್ತಾಯಿಸಿದೆ.
ಈ ಸಂದರ್ಭದಲ್ಲಿ ಜಿಲ್ಲಾ ಕೊಳೆಗೇರಿ ನಿವಾಸಿಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಶಶಿಕಲಾ, ಸಂಚಾಲಕ ಎನ್. ಶೇಖರ್ ಬಾಬು, ಸ್ಲಂ ಜನಾಂದೋಲನ-ಕರ್ನಾಟಕ ರಾಜ್ಯ ಸಂಘಟನಾ ಸಂಚಾಲಕ ರಾಮಚಂದ್ರ, ಸದಸ್ಯ ಎನ್. ಹುಲಿಗೆಮ್ಮ ಇತರರು ಇದ್ದರು.