ಶಿಕ್ಷಣದಿಂದ ಮಾತ್ರ ದೇಶದ ಅಭಿವೃದ್ಧಿ: ಡಾ. ಕೆ. ವೆಂಕಟೇಶ
ಹೊಸಪೇಟೆ: ದಲಿತ ಸಮುದಾಯ ಸೇರಿದಂತೆ ತಳ ಸಮುದಾಯದ ಪ್ರತಿಯೊಬ್ಬರಿಗೂ ಉತ್ತಮ ಶಿಕ್ಷಣ ದೊರೆತಾಗ ಮಾತ್ರ ಸಮಾಜ ಮತ್ತು ದೇಶ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಸ್ಥಳೀಯ ಪದವಿ ಕಾಲೇಜಿನ ಪ್ರಾಧ್ಯಾಪಕ ಡಾ. ಕೆ. ವೆಂಕಟೇಶ್ ಹೇಳಿದರು.
ನಗರದ ಯಾತ್ರಿನಿವಾಸದಲ್ಲಿ ಸ್ಲಂ ಜನಾಂದೋಲನ-ಕರ್ನಾಟಕ, ಹೊಸಪೇಟೆ ಸ್ಲಂ ಜನಜಾಗೃತಿ ಆಂದೋಲನ ಸಮಿತಿ ಹಾಗೂ ಸಮಾನ ಮಕ್ಕಳ ಮಂಟಪ ಸಂಯುಕ್ತಾಶ್ರಯದಲ್ಲಿ ಗುರುವಾರ ನಡೆದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು. ತಳ ಸಮುದಾಯದಲ್ಲಿ ಮಹಿಳೆಯರಿಗೆ ಸರಿಯಾದ ಶಿಕ್ಷಣ ದೊರೆಯದೇ ಅನೇಕ ಮಹಿಳೆಯರು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಮಹಿಳೆಯರಿಗೆ ವೃತ್ತಿಪರ ಮತ್ತು ಸಾಂಪ್ರದಾಯಿಕವಲ್ಲದ ಕೋರ್ಸ್ಗಳನ್ನು ಸರ್ಕಾರ ಒದಗಿಸಬೇಕು. ಪತ್ರಿಕೋದ್ಯಮ, ಆನಿಮೇಷನ್ ಸೇರಿದಂತೆ ಇತರೆ ಹೊಸ ಕೋರ್ಸ್ಗಳನ್ನು ಕಾಲೇಜುಗಳಲ್ಲಿ ಓದಲು ಅನುಕೂಲವಾಗುವಂತಹ ವಾತಾವರಣವನ್ನು ನಿರ್ಮಿಸಬೇಕು ಎಂದರು. ಸಮಾನ ಮಕ್ಕಳ ಮಂಟಪದ ಸಂಯೋಜಕ ಕೆ. ವೆಂಕಟೇಶಲು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಪ್ರಾಧ್ಯಾಪಕ ವೈ.ಜೆ. ರಾಜೇಂದ್ರ, ರೋಟರಿ ಕ್ಲಬ್ ಅಧ್ಯಕ್ಷ ಎಚ್.ಶ್ರೀನಿವಾಸರಾವ್, ಅಸಿಸ್ಟೆಂಟ್ ಸಿ.ಡಿ.ಪಿ.ಒ. ಪರಮೇಶ್ವರಪ್ಪ, ನಗರಸಭೆ ಕಾರ್ಯನಿರ್ವಾಹಕ ಅಭಿಯಂತರ ಮನ್ಸೂರ್ ಅಹಮದ್, ಹೊಸಪೇಟೆ ಸ್ಲಂ ಸಮಿತಿಯ ಉಪಾಧ್ಯಕ್ಷ ಕೆ.ಎಚ್.ಸುನೀಲ್, ರಾಜ್ಯ ಸಂಘಟನಾ ಸಂಚಾಲಕರಾದ ರಾಮಚಂದ್ರ, ಎನ್.ಹುಲಿಗೆಮ್ಮ, ವಕೀಲ ಸುನಂದ ಇದ್ದರು.
ಸಂಚಾಲಕಿ ಎನ್.ಹುಲಿಗೆಮ್ಮ ಸ್ವಾಗತಿಸಿದರು. ಮಾರೆಮ್ಮ ವಂದಿಸಿದರು. ಎಂ. ಹನುಮಂತರಾಯ ನಿರೂಪಿಸಿದರು.