ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಶೇ. 3ರಷ್ಟು ಅನುದಾನ ಮೀಸಲಿಗೆ ಆಗ್ರಹ

Mainashree
Updated On : 6 Jul 2013, 10:40 am

ಹಗರಿಬೊಮ್ಮನಹಳ್ಳಿ: ರಾಜ್ಯ ಸರ್ಕಾರ ಬಜೆಟ್‌ನಲ್ಲಿ ಅಂಗವಿಕಲರಿಗೆ ಶೇ. 3ರಷ್ಟು ಅನುದಾನ ಮೀಸಲಿಡಬೇಕು ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗಾಗಿ ರಾಜ್ಯ ಅಂಗವಿಕಲರ ಹಾಗೂ ಪಾಲಕರ ಒಕ್ಕೂಟದ ಸದಸ್ಯರು  ಗುರುವಾರ ತಹಸೀಲ್ದಾರ್ ಕಚೇರಿ ಎದುರು ಧರಣಿ ನಡೆಸಿ ಮನವಿಪತ್ರ ಅರ್ಪಿಸಿದರು.
ತಾಲೂಕಿನ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ನೂರಕ್ಕೂ ಅಧಿಕ ಸತ್ಯಾಗ್ರಹಿಗಳು, ಅಂಗವಿಕಲರಿಗೆ ಬಜೆಟ್‌ನಲ್ಲಿ ಶೇ. 3ರಷ್ಟು ಅನುದಾನ ಮೀಸಲಿಡಬೇಕು, ಪ್ರತ್ಯೇಕ ಸಚಿವಾಲಯ ರಚನೆ ಮಾಡಬೇಕು, ರು. 2500ಗೆ ಮಾಸಾಶನ ಹೆಚ್ಚಳ ಮಾಡಬೇಕೆಂಬ ಬೇಡಿಕೆಗಳಿಗೆ ಆಗ್ರಹಿಸಿದರು. ಒಕ್ಕೂಟದ ಜಿಲ್ಲಾ ಸಂಚಾಲಕ ಎಚ್. ಉಸ್ಮಾನ ಬಾಷಾ ಮಾತನಾಡಿ, ಸಮಾಜದಲ್ಲಿ ಘನತೆ, ಗೌರವ, ಸ್ವಾಭಿಮಾನದಿಂದ ಅಂಗವಿಕಲರು ಬದುಕಲು ವಿಶೇಷ ಶಿಕ್ಷಣ ಮತ್ತು ಉದ್ಯೋಗದ ಅವಕಾಶವನ್ನು ಸರ್ಕಾರ ಕಲ್ಪಿಸಿಕೊಡಬೇಕು. ಆ ಮೂಲಕ ಅಂಗವಿಕಲರ ಬದುಕಿಗೆ ರಕ್ಷಣೆ ನೀಡಬೇಕು. ಅಧಿಕಾರಿಗಳ ವಿಳಂಬದಿಂದಾಗಿ ಸರ್ಕಾರದ ಸೌಲಭ್ಯಗಳು ಸರಿಯಾದ ಸಮಯಕ್ಕೆ ಅಂಗವಿಕಲರಿಗೆ ಮುಟ್ಟುತ್ತಿಲ್ಲ. ಅಂಗವಿಕಲರ ಬಗ್ಗೆ ಉದಾಸೀನತೆ ತೋರುವ ಅಧಿಕಾರಿಗಳ ಮೇಲೆ ಕಟ್ಟುನಿಟ್ಟಿನ ಕ್ರಮ ಜರುಗಿಸುವ ಮೂಲಕ ಅಂಗವಿಕಲರಿಗೆ ಸರ್ಕಾರಿ ಸೌಲಭ್ಯಗಳು ತಲುಪುವಂತೆ ಕ್ರಮ ವಹಿಸಬೇಕೆಂದು ಆಗ್ರಹಿಸಿದರು. ಅಗತ್ಯ ವಸ್ತುಗಳ ಬೆಲೆ ಏರಿಕೆ ಮತ್ತು ಅರ್ಥಿಕ ಬಿಕ್ಕಟ್ಟು ವಿಪರೀತ ಹೆಚ್ಚಾಗುತ್ತಿದ್ದು, ಇದು ಅಂಗವಿಕಲರ ಜೀವನದ ಮೇಲೆ ಕೆಟ್ಟ ಪರಿಣಾಮ ಬೀರಿದೆ. ಸರ್ಕಾರ ನೀಡುತ್ತಿರುವ ರು. 400-1000 ಮಾಸಾಶನ ಯಾವುದಕ್ಕೂ ಸಾಕಾಗುತ್ತಿಲ್ಲ. ಅದ್ದರಿಂದ ನಮಗೆ ನೀಡುತ್ತಿರುವ ಮಾಸಾಶನವನ್ನು ರು. 2500ಕ್ಕೆ ಹೆಚ್ಚಿಸಬೇಕೆಂದು ಒತ್ತಾಯಿಸಿದರು.
ಒಕ್ಕೂಟದ ಅಧ್ಯಕ್ಷ ಜವಳಿ ಕೊಟ್ರೇಶಪ್ಪ, ಕಾರ್ಯದರ್ಶಿ ಪಿ. ಚಾಂದ್‌ಬೀ, ದಶಮಾಪುರ ಹುಲುಗಪ್ಪ, ಎಚ್. ಹುಚ್ಚಪ್ಪ, ಸಂಗಮೇಶ್ವರ ನಾಗರಾಜ, ಬಾವಿ ಬಸಪ್ಪ, ಎಂ. ಬಸವರಾಜ, ಬಿ.ಎಂ. ಮೃತ್ಯುಂಜಯ, ಪದ್ದಣ್ಣ, ವಿರೂಪಾಕ್ಷಗೌಡ, ಕುಬೇರಪ್ಪ, ಹಸೇನ್‌ಸಾಬ್, ಬಸಮ್ಮ, ದುರ್ಗಮ್ಮ, ವೀರೇಶ, ಧರ್ಮಪ್ಪ, ಕೆ. ಕೊಟ್ರಮ್ಮ, ಕೆ. ನಾಗರಾಜ, ಸಕ್ರಮ್ಮ, ಕೆ. ದುರ್ಗಪ್ಪ ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement