ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಲಾರ್ವ ಸಮೀಕ್ಷೆಗೆ 10 ತಂಡ

Mainashree
Updated On : 7 Jul 2013, 12:13 pm

ಹೂವಿನಹಡಗಲಿ: ಮಹಾಮಾರಿ ಡೆಂಘೀ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಪುರಸಭೆಯು 10 ತಂಡಗಳನ್ನು ರಚನೆ ಮಾಡಿ ಮನೆ ಮನೆಗೆ ತೆರಳಿ ಲಾರ್ವ ಸಮೀಕ್ಷೆಗೆ ಕ್ರಮ ಕೈಗೊಂಡಿದ್ದಾರೆ. ಪಟ್ಟಣದ ಕೆಲವೆಡೆಗಳಲ್ಲಿ ಲಾರ್ವಗಳು ಪತ್ತೆಯಾಗಿದ್ದು, ಈ ಕುರಿತು ಜನರಲ್ಲಿ ಅರಿವು ಮೂಡಿಸುತ್ತಾ ಸಂಗ್ರಹಿಸಿ ಇಡಲಾಗಿರುವ ನೀರಿನಲ್ಲಿ ಉತ್ಪತ್ತಿಯಾಗಿರುವ ಲಾರ್ವಗಳನ್ನು ನಾಶ ಮಾಡಲು ಮೆಲಾಥಿನ್ ಔಷಧಿ ಬಳಕೆ ಮಾಡಲಾಗುತ್ತಿದೆ.
ಪಟ್ಟಣದ ಕಿತ್ತೂರು ರಾಣಿ ಚನ್ನಮ್ಮ ಪ್ಯಾರಾಮೆಡಿಕಲ್‌ನ 20 ವಿದ್ಯಾರ್ಥಿಗಳು, 10 ಪುರಸಭೆ ಸಿಬ್ಬಂದಿ ಹಾಗೂ ಆರೋಗ್ಯ ಇಲಾಖೆ ಸಹಯೋಗದಲ್ಲಿ ಲಾರ್ವ ಸಮೀಕ್ಷೆ ಕಾರ್ಯ ನಡೆಯುತ್ತಿದೆ. ಲಾರ್ವ ಸಮೀಕ್ಷೆಗೆ ಈ ಹಿಂದೆಯೇ ಜಿಲ್ಲಾಧಿಕಾರಿಗಳು ಆದೇಶಿಸಿದ್ದರೂ ತಲೆಕೆಡಿಸಿಕೊಳ್ಳದ ಪುರಸಭೆ ಕೊನೆಗೂ ಎಚ್ಚೆತ್ತುಕೊಂಡು ಈಗ ಕ್ರಮ ಕೈಗೊಂಡಿದೆ.
ಎಲ್ಲ ಕಡೆ ಲಾರ್ವ ಸಮೀಕ್ಷೆ: ಈ ಕುರಿತು ಆರೋಗ್ಯ ಇಲಾಖೆ ವೆಂಕಟೇಶರನ್ನು ಮಾತನಾಡಿಸಿದಾಗ, ಮನೆ ಮನೆಗೆ ತೆರಳಿ ನೀರು ಸಂಗ್ರಹಿಸಿರುವ ಕೊಳಾಯಿ ಮತ್ತಿತರ ನೀರು ಸಂಗ್ರಹವಾಗಿರುವ ಮಣ್ಣಿನ ಕುಡಿಕೆ ಸೇರಿದಂತೆ ಎಲ್ಲ ಕಡೆಗಳಲ್ಲಿ ಲಾರ್ವ ಸಮೀಕ್ಷೆ ಮಾಡುತ್ತಿದ್ದೇವೆ, ಅನೇಕ ಕಡೆಗಳಲ್ಲಿ ಲಾರ್ವಗಳು ಕಂಡು ಬಂದಿದ್ದು, ಈ ಕುರಿತು ಜನರಿಗೆ ಅರಿವು ಮೂಡಿಸುತ್ತೇವೆ, ಆದರೆ ಜನರ ಸಹಕಾರ ನೀಡುತ್ತಿಲ್ಲ. ಹರಿಜನಕೇರಿ ಸೇರಿದಂತೆ ಕೆಲವೆಡೆ ಕೊಳಗೇರಿ ಪ್ರದೇಶಗಳಾಗಿ ಮಾರ್ಪಟ್ಟಿವೆ, ಇದಕ್ಕೆ ಪುರಸಭೆಯ ನಿರ್ಲಕ್ಷ್ಯ ಕಾರಣವಾಗಿದೆ. ಆ ರಸ್ತೆಯಲ್ಲಿ ಓಡಾಡುವಾಗ ಸಾರ್ವಜನಿಕರು ಮೂಗು ಮುಚ್ಚಿಕೊಂಡು ತಿರುಗಾಡುವ ಪರಿಸ್ಥಿತಿಯನ್ನು ಪುರಸಭೆ ತಂದಿದೆ ಎಂದು ಸಾರ್ವಜನಿಕರು ದೂರುತ್ತಾರೆ. ಹರಿಜನಕೇರಿಯಲ್ಲಿ ಮಹಿಳೆಯರ ಶೌಚಾಲಯವಿದ್ದರೂ ಪ್ರಯೋಜನಕ್ಕೆ ಬಾರದಂತಾಗಿದೆ, ಸಮರ್ಪಕ ನೀರಿನ ನಿರ್ವಹಣೆ ಕೊರತೆ ಹಾಗೂ ಜನರ ಬಳಕೆ ಸರಿಯಾಗಿಲ್ಲದ ಕಾರಣ ಆ ಭಾಗದ ಮಹಿಳೆಯರಿಗೆ ಬಯಲು ಶೌಚಾಲಯವೇ ಗತಿಯಾಗಿದ್ದು, ಪುರಸಭೆ ನಿರ್ಮಾಣ ಮಾಡಿರುವ ಸಿಸಿ ರಸ್ತೆಯ ಮೇಲೆ ಓಡಾಡಲು ಆಗದಂತೆ ಹೊಲಸು ತುಂಬಿದೆ, ಇದರಿಂದ ಸಾಂಕ್ರಾಮಿಕ ಕಾಯಿಲೆ ಭಯದಲ್ಲಿ ವಾಸ ಮಾಡುತ್ತಿದ್ದೇವೆ ಎನ್ನುತ್ತಾರೆ ಅಲ್ಲಿನ ನಿವಾಸಿಗಳು.
ಸ್ವಚ್ಛತೆ: ಈ ಕುರಿತು ಪುರಸಭೆ ಪ್ರಭಾರಿ ಮುಖ್ಯಾಧಿಕಾರಿಯನ್ನು ಮಾತನಾಡಿಸಿದಾಗ, ಪಟ್ಟಣದಲ್ಲಿರುವ ದೊಡ್ಡ ಪ್ರಮಾಣದ ಕಾಲುವೆ ಮತ್ತು ಚರಂಡಿಗಳನ್ನು ಸ್ವಚ್ಛ ಮಾಡಲು ರು. 3 ಲಕ್ಷಗಳಿಗೆ ಟೆಂಡರ್ ಕರೆದು ಮಲ್ಲಿಕಾರ್ಜುನ ಎಂಬುವರಿಗೆ ನೀಡಲಾಗಿದೆ. ಒಂದು ಕಡೆಯಿಂದ ಸ್ವಚ್ಛತೆ ಮಾಡುತ್ತಿದ್ದಾರೆ. ಹರಿಜನಕೇರಿಗೆ ತಾವು ಭೇಟಿ ನೀಡಿದ್ದು, ಈ ಕೂಡಲೇ ಸ್ವಚ್ಛತೆ ಕ್ರಮ ಕೈಗೊಳ್ಳುತ್ತೇವೆಂದು ಹೇಳಿದರು. ಹರಿಜನಕೇರಿಯಲ್ಲಿರುವ ಮಹಿಳೆಯರ ಶೌಚಾಲಯದಲ್ಲಿ ನೀರಿನ ನಿರ್ವಹಣೆ ತೊಂದರೆ ಇದ್ದು, ನೀರು ಸಂಗ್ರಹಿಸಿದರೆ ಸೋರಿಕೆಯಾಗುತ್ತಿದೆ. ಆದ್ದರಿಂದ ಬೇಗನೆ ದುರಸ್ತಿ ಮಾಡಿ ಮಹಿಳೆಯರಿಗೆ ಶೌಚಾಲಯದ ಸೌಲಭ್ಯ ಒದಗಿಸಿ ಕೊಡುತ್ತೇವೆಂದು ಭರವಸೆ ನೀಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement