ಸಮಾಜಕ್ಕಾಗಿ ಉತ್ತಮ ಕಾರ್ಯ ಮಾಡಿ
ಹೊಸಪೇಟೆ: ಪ್ರತಿಯೊಬ್ಬರೂ ಉತ್ತಮ ಕಾರ್ಯಗಳನ್ನು ಕೈಗೊಳ್ಳುವ ಮೂಲಕ ಉತ್ತಮ ಸಮಾಜ ನಿರ್ಮಾಣಕ್ಕೆ ಮಂದಾಗಬೇಕು ಎಂದು ಕರ್ಕಿಹಳ್ಳಿಯ ಶಿವಚಿದಂಬರ ಮಹಾಸ್ವಾಮೀಜಿ ಹೇಳಿದರು.
ನಗರದ ಚಿತ್ತವಾಡ್ಗಿಯ ಸಂಗೀತ ಭಾರತಿ ಸಂಸ್ಥೆಯಲ್ಲಿ ಶನಿವಾರ ನಡೆದ ಸಮಾರಂಭದಲ್ಲಿ ಮಾತನಾಡಿದ ಅವರು, ಸಂಘ-ಸಂಸ್ಥೆಗಳ ಮೂಲಕ ಪ್ರತಿಭಾವಂತರನ್ನು ಗುರುತಿಸಿ, ಅವರಿಗೆ ಪುರಸ್ಕಾರಗಳನ್ನು ದೊರಕಿಸಿಕೊಡುವ ಮೂಲಕ ಪ್ರತಿಭಾವಂತರನ್ನು ಪ್ರೋತ್ಸಾಹಿಸಿದಂತಾಗುತ್ತದೆ. ಇದನ್ನು ಚಿತ್ತವಾಡ್ಗಿಯ ಸಂಗೀತ ಭಾರತಿ ಸಂಸ್ಥೆಯು ಅನೇಕ ವರ್ಷಗಳಿಂದ ಮಾಡುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮನುಷ್ಯ ತನ್ನ ನಿತ್ಯದ ಜೀವನದ ಜಂಜಾಟಗಳೊಂದಿಗೆ ಮನಸ್ಸಿನ ಶಾಂತಿಗಾಗಿ ದೇವರ ಧ್ಯಾನ, ಪೂಜೆ ಸೇರಿದಂತೆ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ ಮನಸ್ಸಿನ ಶಾಂತಿಯನ್ನು ಕಾಪಾಡಿಕೊಳ್ಳಲು ಮುಂದಾಗಬೇಕು. ಇನ್ನೊಬ್ಬರಿಗೆ ಕೇಡು ಬಯಸದೆ, ಸ್ವಾವಲಂಬಿ ಜೀವನ ಸಾಗಿಸುವುದನ್ನು ಮನುಷ್ಯ ಕಲಿತುಕೊಳ್ಳಬೇಕು ಎಂದು ಅವರು ಹೇಳಿದರು.
ಇದೇ ಸಂದರ್ಭದಲ್ಲಿ ಕರ್ಕಿಹಳ್ಳಿಯ ಶಿವಚಿದಂಬರ ಸ್ವಾಮೀಜಿಗೆ ಆದಿಗುರು ಶಂಕರ ಪ್ರಶಸ್ತಿಯನ್ನು ನೀಡಿ ಗೌರವಿಸಿದರು. ಪ್ರಧಾನ ಅರ್ಚಕ ದಿಕ್ಷೀತ್ ಸ್ವಾಮಿಗಳು, ಆದಿಗುರು ಶ್ರೀ ಶಂಕರರ ಪರಿಷತ್ ಮತ್ತು ಸಂಗೀತ ಭಾರತಿ ಅಧ್ಯಕ್ಷ ಎಚ್. ಪಿ. ಕಲ್ಲಂಭಟ್ಟ, ಇಫ್ಕೋ ಸಂಸ್ಥೆಯ ಹಿರಿಯ ಅಧಿಕಾರಿ ವಿಷ್ಣುತೀರ್ಥ ಕಲ್ಲೂರಕರ್, ಪೊಲೀಸ್ ಇನ್ಸ್ಪೆಕ್ಟರ್ ಕುಲಕರ್ಣಿ, ವಿಶ್ವ ಶಿವಶಂಕರ ಭಟ್ಟ, ಇಫ್ಕೋ ಟೋಕಿಯಾದ ಮಹಾಂತೇಶ್ ಸೇರಿದಂತೆ ಇತರರು ಭಾಗವಹಿಸಿದ್ದರು.