ಅಪಘಾತ: ಓರ್ವ ಸ್ಥಳದಲ್ಲೇ ಸಾವು
ಕುರುಗೋಡು: ಪಟ್ಟಣ ವ್ಯಾಪ್ತಿಯ ಲಕ್ಷ್ಮೀಪುರ, ಕೋಳೂರು ಕ್ರಾಸ್ ಮತ್ತು ಕೋಳೂರು ಠಾಣಾ ವ್ಯಾಪ್ತಿಯಲ್ಲಿ ಶನಿವಾರ ತಡರಾತ್ರಿ ಮತ್ತು ಭಾನುವಾರ ಮೂರು ವಿವಿಧ ಸ್ಥಳಗಳಲ್ಲಿ ರಸ್ತೆ ಅಪಘಾತ ಜರುಗಿದ್ದು, ಓರ್ವ ಸ್ಥಳದಲ್ಲೇ ಮೃತಪಟ್ಟು, 6 ಜನ ಗಾಯಗೊಂಡಿರುವ ಘಟನೆ ಜರುಗಿವೆ.
ಲಕ್ಷ್ಮೀಪುರ: ಶ್ರೀನಿವಾಸ್ ಕ್ಯಾಂಪ್‌ನಲ್ಲಿ ಕೂಲಿ ಕೆಲಸ ಮುಗಿಸಿ ಲಕ್ಷ್ಮೀಪುರಕ್ಕೆ ಶನಿವಾರ ರಾತ್ರಿ ನಾಲ್ಕು ಜನ ನಡೆದುಕೊಂಡು ಹೋಗುವ ಸಂದರ್ಭದಲ್ಲಿ ಬೈಕ್ ಡಿಕ್ಕಿ ಹೊಡೆದ ಪರಿಣಾಮ, ದಾರಿಹೋಕ ಗಾದಿಲಿಂಗಪ್ಪ, ಶೇಖರಪ್ಪ ಗಾಯಗೊಂಡಿದ್ದು, ಕುರುಗೋಡು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಆದರೆ ಬೈಕ್ ಸವಾರ ಲಕ್ಷ್ಮೀಕಾಂತ ರೆಡ್ಡಿ (28) ಗಂಭೀರ ಗಾಯಗೊಂಡಿದ್ದು, ವೈದ್ಯರ ಸಲಹೆ ಮೆರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಕಳುಹಿಸಿಕೊಡಲಾಗಿದೆ.
ಕೋಳೂರು ಕ್ರಾಸ್‌ನಲ್ಲಿ ಹಾದು ಹೋಗಿರುವ ಸಿರಗುಪ್ಪ ಬಳ್ಳಾರಿ ರಸ್ತೆಯಲ್ಲಿ ಭಾನುವಾರ ಟಾಟಾ ಏಸ್‌ನಲ್ಲಿ ಸಿರಿಗೇರಿಯಿಂದ ಬಳ್ಳಾರಿಗೆ ಗುಜರಿ ಸಾಮಾನು ಸಾಗಿಸುವ ಸಂದರ್ಭ ಬೆಂಗಳೂರಿನ ಖಾಸಗಿ ಆ್ಯಂಬುಲೆನ್ಸ್ ಮಧ್ಯ ಮಾರ್ಗದಲ್ಲಿ ಮಾನವಿಗೆ ಹೋಗುವಾಗ ಅಪಘಾತ ಸಂಭವಿಸಿದೆ. ಡಿಕ್ಕಿ ಹೊಡೆದ ಪರಿಣಾಮ ಟಾಟಾ ಏಸ್ ಚಾಲಕ ಸಿರಿಗೇರಿ ಗ್ರಾಮದ ನಾಯಕರ ಶಿವಣ್ಣ (25) ಗಾಯಗೊಂಡಿದ್ದು, ಪ್ರಯಾಣಿಕ ಬಳ್ಳಾರಿ ವೀರೇಶ್ (28), ಆ್ಯಂಬುಲೆನ್ಸ್ ಚಾಲಕ ಶಿವಾನಂದ ಬಳ್ಳಾರಿ ವಿಮ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕೋಳೂರು: ಕೋಳೂರು ಗ್ರಾಮದ ಮುಂದಿನ ಶ್ರೀರಂಗಪಟ್ಟಣ-ಬೀದರ್ ರಾಜ್ಯ ಹೆದ್ದಾರಿಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಭಾನುವಾರ ನಸುಕಿನ ಜಾವ ಮಹಿಳೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತ ಮಹಿಳೆ ಗೊಲ್ಲರ ಭುವನೇಶ್ವರಿ (43) ಬೆಳಗ್ಗೆ ಬಹಿರ್ದೆಸೆಗೆಂದು ರಸ್ತೆ ದಾಟುವ ಸಂದರ್ಭದಲ್ಲಿ ಬಳ್ಳಾರಿಯಿಂದ ಸಿರುಗುಪ್ಪ ಕಡೆಗೆ ವೇಗವಾಗಿ ಚಲಿಸುತ್ತಿದ್ದ ಇಂಡಿಕಾ ಕಾರು ಡಿಕ್ಕಿ ಹೊಡೆದ ಪರಿಣಾಮ ಈ ಘಟನೆ ನಡೆದಿದೆ. ಚಾಲಕ ಕಾರು ಸಮೇತ ಪರಾರಿಯಾಗಿದ್ದಾನೆ. ಘಟನಾ ಸ್ಥಳಕ್ಕೆ ವೃತ್ತ ನಿರೀಕ್ಷಕ ಲಕ್ಷ್ಮೀ ಕಾಂತಯ್ಯ, ಪಿಎಸ್‌ಐ ರಾಮರೆಡ್ಡಿ ಭೇಟಿ ನೀಡಿದ್ದಾರೆ. ಈ ಎಲ್ಲಾ ಪ್ರಕರಣಗಳು ಕುರುಗೋಡು ಪೊಲೀಸ್ ಠಾಣೆಯಲ್ಲಿ ದಾಖಲಾಗಿವೆ.