ತುಂಗಭದ್ರಾ ಜಲಾಶಯಕ್ಕೆ 96 ಸಾವಿರ ಕ್ಯುಸೆಕ್ ನೀರು
ಮುನಿರಾಬಾದ್: ಚಿಕ್ಕಮಗಳೂರು ಹಾಗೂ ಶಿವಮೊಗ್ಗದಲ್ಲಿ ವ್ಯಾಪಕ ಪ್ರಮಾಣದಲ್ಲಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ತುಂಗಭದ್ರಾ ಜಲಾಶಯಕ್ಕೆ ಹರಿದು ಬರುತ್ತಿರುವ ನೀರಿನ ಒಳಹರಿವು ಅಧಿಕಗೊಂಡಿದೆ. ಉತ್ತರ ಕರ್ನಾಟಕದ ರೈತರ ಜೀವನಾಡಿ ತುಂಗಭದ್ರಾ ಜಲಾಶಯಕ್ಕೆ ಭಾನುವಾರ ಸುಮಾರು 96,525 ಕ್ಯುಸೆಕ್ ನೀರು ಹರಿದು ಬಂದಿದೆ. ಇದರಿಂದ ಜಲಾಶಯದ ನೀರಿನ ಮಟ್ಟವು 1615.30 ಅಡಿಗಳಿಗೆ ಏರಿಕೆಯಾಗಿದೆ ಹಾಗೂ ಜಲಾಶಯದಲ್ಲಿ ಸುಮಾರು 46,437 ಕ್ಯುಸೆಕ್ ನೀರು ಶೇಖರಣೆಯಾಗಿದೆ. ಕಳೆದ ಮೂರು ದಿನದಲ್ಲಿ ಜಲಾಶಯಕ್ಕೆ ಸುಮಾರು 2,40,370 ಕ್ಯುಸೆಕ್ ನೀರು ಹರಿದು ಬಂದಿದೆ. ಶುಕ್ರವಾರ ಜಲಾಶಯಕ್ಕೆ ಸುಮಾರು 36,674 ಕ್ಯುಸೆಕ್, ಶನಿವಾರ ಸುಮಾರು 1,07,171 ಕ್ಯುಸೆಕ್ ಹಾಗೂ ಭಾನುವಾರ ಸುಮಾರು 96,525 ಕ್ಯುಸೆಕ್ ನೀರು, ಹೀಗೆ ಮೂರು ದಿನದಲ್ಲಿ ಜಲಾಶಯಕ್ಕೆ 2,40,370 ಕ್ಯುಸೆಕ್ (21 ಟಿಎಂಸಿ) ನೀರು ಸೇರ್ಪಡೆಯಾಗಿದೆ. ಕಳೆದ ವರ್ಷ ಇದೇ ದಿನದಂದು ಜಲಾಶಯದ ನೀರಿನ ಮಟ್ಟ ಸುಮಾರು 1,586 ಅಡಿಗಳಿತ್ತು ಹಾಗೂ ಜಲಾಶಯದಲ್ಲಿ ಕೇವಲ 7.69 ಟಿಎಂಸಿ ನೀರು ಶೇಖರಣೆಯಾಗಿತ್ತು. ಜಲಾಶಯಕ್ಕೆ ಸುಮಾರು 15,160 ಕ್ಯುಸೆಕ್ ನೀರು ಹರಿದು ಬಂದಿತ್ತು. ಕಳೆದ ವರ್ಷಕ್ಕೆ ಹೋಲಿಸಿದರ ಪ್ರಸಕ್ತ ಸಾಲಿನಲ್ಲಿ ಜಲಾಶಯದಲ್ಲಿ ಸುಮಾರು 29 ಅಡಿಗಳಷ್ಟು ಅಧಿಕ ನೀರು ಲಭ್ಯವಿದೆ.