ದೇಶದ ಕೀರ್ತಿ ಎತ್ತಿ ಹಿಡಿದ ಡಾ. ರಾವ್
ಬಳ್ಳಾರಿ: ಬಳ್ಳಾರಿಯ ಮೇಡಂ ಕ್ಯೂರಿ ಅಕಾಡೆಮಿ ವತಿಯಿಂದ ಖ್ಯಾತ ವಿಜ್ಞಾನಿ ಪ್ರೊ. ಸಿ.ಎನ್.ಆರ್. ರಾವ್ ಅವರ 79ನೇ ಜನ್ಮದಿನಾಚರಣೆ ಕಾರ್ಯಕ್ರಮವನ್ನು ನಗರದ ಬಾಲಕಿಯರ ಸರ್ಕಾರಿ ಪ.ಪೂ. ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಮೇಡಂ ಕ್ಯೂರಿ ವಿಜ್ಞಾನ ಅಕಾಡೆಮಿ ಅಧ್ಯಕ್ಷ ಎಸ್. ಮಂಜುನಾಥ ಮಾತನಾಡಿ, ಕನ್ನಡ ಮಾಧ್ಯಮದಲ್ಲಿ ಕಲಿತರೂ ವಿಜ್ಞಾನ ಕ್ಷೇತ್ರದಲ್ಲಿ ಜಗತ್ತೇ ನಿಬ್ಬೆರಗಾಗುವಂಥ ಅದ್ವಿತೀಯ ಸಾಧನೆ ಮಾಡಿದ ವಿಜ್ಞಾನಿ ಪ್ರೊ. ಸಿ.ಎನ್.ಆರ್. ರಾವ್. ಅವರು ಸತತ ಆರು ದಶಕಗಳಿಂದ ರಸಾಯನ ಶಾಸ್ತ್ರ ಹಾಗೂ ವಸ್ತು ವಿಜ್ಞಾನದಲ್ಲಿ ಹತ್ತು ಹಲವು ಬಗೆಯ ಮಹತ್ತರ ಸಂಶೋಧನೆ ನಡೆಸಿ, ದೇಶದ ಕೀರ್ತಿ ಎತ್ತಿ ಹಿಡಿದಿದ್ದಾರೆ ಎಂದರು.
ಪ್ರೊ. ರಾವ್ ಅವರ ನಿರಂತರ ಅಧ್ಯಯನ, ಕಠಿಣ ಪರಿಶ್ರಮ ಮತ್ತು ದಿಟ್ಟ ಗುರಿ ದೇಶದ ಯುವಜನತೆಗೆ ಸದಾ ಆದರ್ಶಪ್ರಾಯವಾಗಿವೆ. ಅಂತೆಯೇ ಇಂದಿನ ವಿದ್ಯಾರ್ಥಿ ಸಮುದಾಯ ಅವರನ್ನು ಮಾದರಿಯನ್ನಾಗಿ ಸ್ವೀಕರಿಸಬೇಕು ಎಂದರು. ಪ್ರಾಚಾರ್ಯ ಕೆ. ತಿಮ್ಮಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿಜ್ಞಾನಿಗಳ ಸಂಶೋಧನೆ ನಮ್ಮ ಸಮಾಜದ ಅಭಿವೃದ್ಧಿಗೆ ಪ್ರಮುಖ ಕಾರಣವಾಗಿದ್ದು, ಈ ನಿಟ್ಟಿನಲ್ಲಿ ಅವರನ್ನು ಸ್ಮರಿಸುವಂತಹ ಈ ರೀತಿಯ ಕಾರ್ಯಕ್ರಮಗಳು ಶ್ಲಾಘನೀಯ ಎಂದರು.
ಕಾರ್ಯಕ್ರಮದ ಆರಂಭದಲ್ಲಿ ಪ್ರೊ. ರಾವ್ ಅವರ ನೆಚ್ಚಿನ ವಿಜ್ಞಾನಿ ಲೀನಸ್ ಪಾಲಿಂಗ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ಕಾಲೇಜಿನ ಉಪನ್ಯಾಸಕರಾದ ಸತ್ಯಪ್ರಕಾಶ್, ನಾಗೇಂದ್ರ, ಎ.ಎಂ. ಜಯಶ್ರೀ, ಜ್ಯೋತಿ, ಮಂಜುಳಾ ಹಿರೇಮಠ್, ಅಕಾಡೆಮಿ ಕಾರ್ಯದರ್ಶಿ ಎಂ. ಪ್ರಶಾಂತ್, ಸಹಕಾರ್ಯದರ್ಶಿ ಪಿ. ರಘು ಇದ್ದರು. ಅಕಾಡೆಮಿ ಎಸ್. ಗುರುಕುಮಾರ್ ಸ್ವಾಗತಿಸಿದರು. ಉಪಾಧ್ಯಕ್ಷೆ ಡಾ. ಬಿ.ಎಂ. ಶಿವಶಾಂತಲಾ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.