ನೂತನ ಎಸ್ಪಿಯಾಗಿ ಚೇತನ್ ಸಿಂಗ್ ರಾಥೋಡ್
ಬಳ್ಳಾರಿ: ಬಳ್ಳಾರಿಯ ನೂತನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಡಾ. ಚೇತನ್ ಸಿಂಗ್ ರಾಥೋಡ್ ಅವರು ಜು. 8ರಂದು ಅಧಿಕಾರ ಸ್ವೀಕರಿಸಲಿದ್ದಾರೆ. ಈಗಿನ ಎಸ್ಪಿ ಡಾ. ಚಂದ್ರಗುಪ್ತ ಅಧಿಕಾರ ಹಸ್ತಾಂತರ ಮಾಡಲಿದ್ದಾರೆ. ರಾಥೋಡ್ ಅವರು ಹಾವೇರಿ ಎಸ್ಪಿಯಾಗಿ ಕಾರ್ಯನಿರ್ವಹಿಸಿ, ಇದೀಗ ಬಳ್ಳಾರಿ ಎಸ್ಪಿಯಾಗಿ ವರ್ಗಾವಣೆಯಾಗಿದ್ದಾರೆ. ಮಧ್ಯಪ್ರದೇಶದ ಶಹಜಾಪುರ ಜಿಲ್ಲೆಯವರಾಗಿದ್ದಾರೆ.
ಕಾಲುವೆಗೆ ನೀರು ಬಿಡಲು ಆಗ್ರಹ
ಬಳ್ಳಾರಿ: ಮಲೆನಾಡಿನಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಈಗಾಗಲೇ ಜಲಾಶಯದಲ್ಲಿ 25 ಟಿಎಂಸಿಯಷ್ಟು ನೀರು ಸಂಗ್ರಹವಾಗಿದ್ದು, ಜು. 9ರಂದು ನಡೆಯಲಿರುವ ತುಂಗಭದ್ರಾ ಜಲಾಶಯ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ರೈತರ ಜಮೀನುಗಳಿಗೆ ನೀರು ಒದಗಿಸುವ ಕುರಿತು ಕ್ರಮ ಕೈಗೊಳ್ಳುವಂತೆ ರೈತ ಮುಖಂಡ ಜಿ. ಪುರುಷೋತ್ತಮಗೌಡ ಒತ್ತಾಯಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಕಳೆದ ವರ್ಷ ಆಂಧ್ರ ಮತ್ತು ಕರ್ನಾಟಕದ ಅಧಿಕಾರಿಗಳ ಮಧ್ಯೆ ಸಮನ್ವಯ ಕೊರತೆಯಿಂದಾಗಿ ಹಾಗೂ ನವೆಂಬರ್ ತಿಂಗಳಿನ ನಂತರವೂ ಕೈಗಾರಿಕೆಗಳಿಗೆ ನೀರು ಪೂರೈಸಿರುವುದರಿಂದ ರೈತರ ಬೇಸಿಗೆ ಬೆಳೆಗಳಿಗೆ ನೀರು ಸಾಲದೇ ರೈತರು ಆರ್ಥಿಕ ನಷ್ಟ ಹೊಂದಿರುತ್ತಾರೆ.
ಈ ಹಿನ್ನೆಲೆಯಲ್ಲಿ ನೂತನವಾಗಿ ಆಯ್ಕೆಯಾಗಿರುವ ಎಲ್ಲ ಜನಪ್ರತಿನಿಧಿಗಳು, ಅಧಿಕಾರಿಗಳೊಂದಿಗೆ ಹಾಗೂ ರೈತರೊಂದಿಗೆ ಚರ್ಚಿಸಿ, ಸುಗ್ಗಿ ಮತ್ತು ಬೇಸಿಗೆ ಬೆಳೆಗಳಿಗೆ ನೀರು ಪೂರೈಸುವ ಕ್ರಮ ಕೈಗೊಂಡು, ಕಾಲುವೆಯ ಕಾಮಗಾರಿಗಳನ್ನು ತಕ್ಷಣ ಪೂರ್ಣಗೊಳಿಸಿ ರೈತರ ಜಮೀನುಗಳಿಗೆ ನೀರು ಒದಗಿಸಬೇಕೆಂದು ಅವರು ಒತ್ತಾಯಿಸಿದ್ದಾರೆ.