ಬಳ್ಳಾರಿ: ಬಾಲಕಾರ್ಮಿಕರ ಆರೋಗ್ಯ ತಪಾಸಣಾ ಶಿಬಿರ
ಕನ್ನಡಪ್ರಭ ವಾರ್ತೆ, ಬಳ್ಳಾರಿ, ಜು. 7
ಭಾರತೀಯ ರೆಡ್ಕ್ರಾಸ್ ಸಂಸ್ಥೆ, ಸರ್ಕಾರಿ ಬಾಲ ಕಾರ್ಮಿಕರ ಶಾಲೆ ಮತ್ತು ವಿಮ್ಸ್ನ ಸಹಯೋಗದಲ್ಲಿ ಶನಿವಾರ ಬಾಲ ಕಾರ್ಮಿಕರ ವಿಕಾಸ ದಿನದ ಅಂಗವಾಗಿ ನಗರದ ನವಜೀವನ ಸಂಸ್ಥೆಯಲ್ಲಿ ಬಾಲ ಕಾರ್ಮಿಕರ ವಿಶೇಷ ವಸತಿ ಶಾಲೆಯ ಮಕ್ಕಳಿಗಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.
ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ನಾರಾಯಣಗೌಡ ಶಿಬಿರವನ್ನು ಉದ್ಘಾಟಿಸಿದರು. ಅನಂತರ ಮಾತನಾಡಿ, ಜಿಲ್ಲಾಧಿಕಾರಿಗಳ ಆದೇಶದನ್ವಯ ಬಾಲಕಾರ್ಮಿಕ ವಿದ್ಯಾರ್ಥಿಗಳಿಗೆ ಖಾಸಗಿ ಮತ್ತು ಸರ್ಕಾರಿ ಶಾಲೆಗಳಲ್ಲಿ ಉಚಿತವಾಗಿ ಪ್ರವೇಶ ನೀಡಿ ಮತ್ತು ಎಲ್ಲ ಸೌಲಭ್ಯಗಳನ್ನು ನೀಡಬೇಕು. ಈ ಮಕ್ಕಳನ್ನು ಪರಿವರ್ತನೆ ಮಾಡಲು ಶಿಕ್ಷಕರು ಶ್ರಮಿಸಬೇಕು ಎಂದರು.
ಶಿಬಿರದಲ್ಲಿ ಶಾಲೆಯ 80 ಮಕ್ಕಳ ಆರೋಗ್ಯ ತಪಾಸಣೆ ಮಾಡಲಾಯಿತು. ತಪಾಸಣೆಗೊಳಗಾದ ಮಕ್ಕಳಿಗೆ ಡಾ. ಬಿ.ಕೆ. ಶ್ರೀಕಾಂತ್ ಮತ್ತು ಡಾ. ಜೈ ಪ್ರಕಾಶ್ ಉಚಿತ ಔಷಧ ವಿತರಿಸಿದರು.
ಶಿಬಿರದಲ್ಲಿ ಮಕ್ಕಳಿಗೆ ಉಚಿತ ಸಮವಸ್ತ್ರ, ಆಟದ ಸಾಮಗ್ರಿ ವಿತರಿಸಲಾಯಿತು. ಮಕ್ಕಳಿಗಾಗಿ ಚಿತ್ರಕಲಾ ಹಾಗೂ ಕ್ರೀಡಾ ಸ್ಪರ್ಧೆಗಳನ್ನು ಏರ್ಪಡಿಸಿ ವಿಜೇತರಿಗೆ ಬಹುಮಾನ ಮತ್ತು ಪ್ರಮಾಣ ಪತ್ರಗಳನ್ನು ವಿತರಿಸಿದರು.
ಈ ಸಂದರ್ಭದಲ್ಲಿ ಡಾ. ಟೇಕೂರು ರಾಮನಾಥ, ಪಿ. ಸತ್ಯ ನಾರಾಯಣರಾವ್, ಬಿ. ದೇವಣ್ಣ, ಬಿ.ಎನ್. ಸುರೇಶ್, ಪೋಲಾ ರಾಧಾಕೃಷ್ಣ, ಷಕೀಬ್, ಹುಸೇನ್ ಹಾಗೂ ಇತರರು ಇದ್ದರು.
ನಿಖಿತ ತಂಡದವರು ಪ್ರಾರ್ಥಿಸಿದರು. ಸಂಸ್ಥೆಯ ಕಾರ್ಯದರ್ಶಿ ಡಾ. ಕೆ. ನಾಗರಾಜರಾವ್ ನಿರೂಪಿಸಿದರು. ಬಾಲಕಾರ್ಮಿಕ ಯೋಜನಾ ಸಂಘದ ಯೋಜನಾ ನಿರ್ದೇಶಕ ಮೌನೇಶ್ ವಂದಿಸಿದರು.