ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಬ್ಯಾರೇಜ್ ನಿರ್ಮಿಸಿ ನೀರಿನ ದಾಹಕ್ಕೆ ಬ್ರೇಕ್

Lingaraj Badiger
Updated On : 8 Jul 2013, 11:37 am

ಹಗರಿಬೊಮ್ಮನಹಳ್ಳಿ: ತುಂಗಭದ್ರಾ ಜಲಾಶಯದ ಹಿನ್ನಿರಿನಲ್ಲಿ ಮುಳುಗಡೆಯಾಗಿರುವ ನಾರಾಯಣದೇವರಕೆರೆ ಗ್ರಾಮದ ಹಳೆಯ ಕೆರೆಯನ್ನು ಪುನರ್ ಜೀವನಗೊಳಿಸಿ, ಬ್ಯಾರೇಜ್ ಕಮ್ ಬ್ರಿಡ್ಜ್ ನಿರ್ಮಿಸಿ ತಾಲೂಕಿನ ಎಲ್ಲ ಗ್ರಾಮಗಳ ಕುಡಿಯುವ ನೀರಿನ ತೊಂದರೆ ನಿವಾರಿಸಲು ಪ್ರಾಮಾಣಿಕ ಪ್ರಯತ್ನ ಮಾಡುವೆ ಎಂದು ಶಾಸಕ ಎಸ್. ಭೀಮಾನಾಯ್ಕ ಭರವಸೆ ನೀಡಿದರು.
ತಾಲೂಕಿನ ನಾರಾಯಣದೇವರಕೆರೆ ಗ್ರಾಮದ ಬಳಿಯ ಹಳೆಯ ಕೆರೆಗೆ ಭಾನುವಾರ ಸಂಜೆ ತುಂಗ ಭದ್ರಾ ಜಲಾಶಯದ ಹಿನ್ನೀರು ಸ್ಥಳಕ್ಕೆ ಭೇಟಿ ನೀಡಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಐತಿಹಾಸಿಕ ನಾರಾಯಣದೇವರಕೆರೆ ತುಂಗಭದ್ರಾ ಜಲಾಶಯದಲ್ಲಿ ಮುಳುಗಡೆಯಾದ ಸಂದರ್ಭದಲ್ಲೇ ಕೆರೆ ಕೂಡ ಹಿನ್ನೀರಿನಲ್ಲಿ ಮುಳುಗಡೆಯಾಗಿತ್ತು. ಅಪಾರ ಪ್ರಮಾಣದಲ್ಲಿ ನೀರಿನ ಸಂಗ್ರಹ ಸಾಮರ್ಥ್ಯ ಇರುವ ಈ ಕೆರೆ ಪಾಳೆಗಾರರ ಕಾಲಕ್ಕೆ ನಿರ್ಮಾಣಗೊಂಡಿದ್ದು, ಸದ್ಯ ಹಲವು ಸಣ್ಣಪುಟ್ಟ ಬಿರುಕುಗಳನ್ನು ಬಿಟ್ಟರೆ ಕೆರೆ ಇನ್ನೂ ಕೂಡ ಉತ್ತಮ ಸ್ಥಿತಿಯಲ್ಲಿದೆ. ಹಾಳಾಗುತ್ತಿರುವ ಕೆರೆಯನ್ನು  ಕ್ಷೇತ್ರದ ಕುಡಿಯುವ ನೀರಿನ ಸಮಸ್ಯೆ ನಿವಾರಿಸಿಕೊಳ್ಳಲು ಸಮರ್ಪಕವಾಗಿ ಬಳಸಿಕೊಳ್ಳಲು ಉತ್ತಮ ಅವಕಾಶವಿದೆ. ಶೀಘ್ರದಲ್ಲೇ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳ ಸಭೆ ಕರೆದು ಚರ್ಚಿಸಿದ ಬಳಿಕ ಸರ್ಕಾರಕ್ಕೆ ಹೊಸ ಕಾಮಗಾರಿ ಬಗ್ಗೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದರು.
ಕ್ರಸ್ಟ್‌ಗೇಟ್ ಅಳವಡಿಕೆ: ಸದ್ಯ ಕೆರೆಯ ಒಂದು ಭಾಗ ಒಡೆದಿದ್ದು, ಜನವರಿ ತಿಂಗಳಿಗೆಲ್ಲ ಕೆರೆಯಲ್ಲಿ ಹಿನ್ನೀರಿನ ಪ್ರಮಾಣ ಕ್ಷೀಣಿಸುತ್ತದೆ. ಬ್ಯಾರೇಜ್ ಕಮ್ ಬ್ರಿಡ್ಜ್ ನಿರ್ಮಾಣ ಮಾಡಿ, ಕ್ರಸ್ಟ್‌ಗೇಟ್ ಅಳವಡಿಸಿದರೆ ವರ್ಷಪೂರ್ತಿ ಹಿನ್ನೀರನ್ನು ಸಂಗ್ರಹಿಸಿಡಲು ಸಾಧ್ಯ.
  ಹಳೇಕೆರೆಯ ಏರಿಯನ್ನು ಹೊಡೆದು, ಬ್ಯಾರೇಜ್ ಕಮ್ ಬ್ರಿಡ್ಜ್ ಮಾದರಿಯಲ್ಲಿ ತಡೆ ಡ್ಯಾಂ ಕಟ್ಟಿ, ನೀರನ್ನು ನಿಲ್ಲಿಸಿದರೆ ಇಲ್ಲಿಂದಲೇ ವರ್ಷಪೂರ್ತಿ ಕ್ಷೇತ್ರದ ಬಹುತೇಕ ಗ್ರಾಮಗಳಿಗೆ ಕುಡಿಯುವ ನೀರು ಪೂರೈಕೆ ಮಾಡಬಹುದು. ಜತೆಗೆ ವರ್ಷ ಪೂರ್ತಿ ಕೆರೆಯಲ್ಲಿ ಹಿನ್ನೀರು ನಿಲ್ಲುವುದರಿಂದ ಈ ಕೆರೆಯ ಸುತ್ತಮುತ್ತಲಿನ ಐವತ್ತಕ್ಕೂ ಅಧಿಕ ಗ್ರಾಮಗಳಲ್ಲಿ ಅಂತರ್ಜಲ ವೃದ್ಧಿಯಾಗಿ ಬೋರ್‌ವೆಲ್ ಆಧಾರಿತ ಕೃಷಿ ಅವಲಂಬಿಸಿರುವ ರೈತ ಕುಟುಂಬಗಳನ್ನು ರಕ್ಷಿಸಿದಂತಾಗುತ್ತದೆ ಎಂದು ವಿವರಿಸಿದರು.
ಅಂತರ್ಜಲ ವೃದ್ಧಿ: ಕ್ಷೇತ್ರದ ಕುಡಿಯುವ ನೀರಿನ ಸಮಸ್ಯೆ ಹಾಗೂ ಅಂತರ್ಜಲ ವೃದ್ಧಿಸುವ ಮಹತ್ವಪೂರ್ಣ ನಾರಾಯಣದೇವರಕೆರೆಯ ಹಳೆಯ ಕೆರೆಯನ್ನು ಈ ದೃಷ್ಟಿಯಲ್ಲಿ ಪುನರುಜ್ಜೀವನಗೊಳಿಸಲಾಗುವುದು ಎಂದ ಭೀಮಾನಾಯ್ಕ, ಸದ್ಯ ಹಿನ್ನೀರು ಸಂಗ್ರಹವಾಗಿರುವುದರಿಂದ ಕಾಮಗಾರಿ ಆರಂಭಿಸಲು ಸಾಧ್ಯವಿಲ್ಲ. ಅದ್ದರಿಂದ ಪ್ರಸ್ತಾವನೆ ಸಿದ್ಧಪಡಿಸಲು ಅಧಿಕಾರಿಗಳಿಗೆ ತಿಳಿಸಲಾಗುವುದು. ಮುಂದಿನ ಬೇಸಿಗೆ ಕಾಲಕ್ಕೆ ಡ್ಯಾಂ ನಿರ್ಮಿಸಲಾಗುವುದು ಎಂದು ಹೇಳಿದರು.
ಜಿಪಂ ಸದಸ್ಯ ರೋಗಾಣಿ ಹುಲುಗಪ್ಪ, ತಾಪಂ ಸದಸ್ಯ ಉಪ್ಪಾರ ಬಾಲಪ್ಪ, ಮಾಜಿ ಸದಸ್ಯ ಚಿಂತ್ರಪಳ್ಳಿ ದೇವೇಂದ್ರಪ್ಪ, ಮುಖಂಡರಾದ ತಂಬ್ರಹಳ್ಳಿ ಯಮುನಪ್ಪ, ಹಂಚಿನಮನಿ ಹನುಮಂತಪ್ಪ, ಯುವ ಜೆಡಿಎಸ್ ಅಧ್ಯಕ್ಷ ಡಿಶ್ ಪಾಂಡುರಂಗನಾಯ್ಕ ಸೇರಿದಂತೆ ಹಲವರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement