ಪ್ರಥಮ ಚಿಕಿತ್ಸೆಯಿಂದ ಜೀವ ರಕ್ಷಣೆ
ಬಳ್ಳಾರಿ: ಅಪಘಾತ ಇನ್ನಿತರೆ ತುರ್ತು ಸಂದರ್ಭಗಳಲ್ಲಿ ಪ್ರಥಮ ಚಿಕಿತ್ಸೆ ನೀಡುವುದರಿಂದ ಗಾಯಾಳುಗಳ ಜೀವ ರಕ್ಷಣೆ ಮಾಡಬಹುದಾಗಿದೆ ಎಂದು ವಿಮ್ಸ್ನ ಪ್ರಾಚಾರ್ಯ ಡಾ. ವಿದ್ಯಾಧರ ಕಿನ್ನಾಳ್ ತಿಳಿಸಿದರು.
ಬಳ್ಳಾರಿ ಜಿಲ್ಲಾ ಹಾಗೂ ತಾಲೂಕು ಗೃಹರಕ್ಷಕದಳ ವತಿಯಿಂದ ಪ್ರಾದೇಶಿಕ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಕಚೇರಿಯಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಪ್ರಥಮ ಚಿಕಿತ್ಸೆ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. ಪ್ರತಿಯೊಂದು ವಾಹನದಲ್ಲೂ ಪ್ರಥಮ ಚಿಕಿತ್ಸೆ ಸಲಕರಣೆಗಳನ್ನು ಹೊಂದಿರುವುದು ಅತ್ಯಾವಶ್ಯ. ವಿಮ್ಸ್ನ ವತಿಯಿಂದಲೂ ಗೃಹರಕ್ಷಕರಿಗಾಗಿ ಒಂದು ದಿನದ ಪ್ರಥಮ ಚಿಕಿತ್ಸೆ ಕುರಿತು ವಿಶೇಷ ತರಗತಿಯನ್ನು ಆಯೋಜಿಸಲಾಗುವುದು ಎಂದರು.
ಅಧ್ಯಕ್ಷತೆ ವಹಿಸಿದ್ದ ಗೃಹರಕ್ಷಕದಳದ ಸಮಾದೇಷ್ಟ ಎಂ.ಎ. ಷಕೀಬ್ ಮಾತನಾಡಿ, ತರಬೇತಿ ಪಡೆದ ಶಿಬಿರಾರ್ಥಿಗಳು ತುರ್ತು ಸಂದರ್ಭಗಳಲ್ಲಿ ಜೀವ ಉಳಿಸುವಲ್ಲಿ ನೆರವಾಗುವ ಮನೋಭಾವ ಬೆಳೆಸಿಕೊಳ್ಳಬೇಕೆಂದರು. ಈ ಸಂದರ್ಭದಲ್ಲಿ ಗೃಹರಕ್ಷಕ ಅಧಿಕಾರಿಗಳಾದ ಸುರೇಶ್ ಮತ್ತು ಬಸವಲಿಂಗ, ಕಚೇರಿ ಸಿಬ್ಬಂದಿ ಮತ್ತು ಬಳ್ಳಾರಿ ಘಟಕದ ಹಲವಾರು ಗೃಹರಕ್ಷಕರು ಭಾಗವಹಿಸಿದ್ದರು. ಸಹಾಯಕ ಬೋಧಕ ಎಚ್. ತಿಪ್ಪೇಸ್ವಾಮಿ ಸ್ವಾಗತಿಸಿ, ನಿರೂಪಿಸಿದರು. ಶಿಬಿರಾರ್ಥಿಗಳು ಅನಿಸಿಕೆಗಳನ್ನು ಹಂಚಿಕೊಂಡರು. ಘಟಕಾಧಿಕಾರಿ ಜಿ.ಬಸವರಾಜ್ ವಂದಿಸಿದರು.
--
ಸಂತ್ರಸ್ತರಿಗೆ ರು. 37 ಸಾವಿರ ಪರಿಹಾರ ನಿಧಿ ಚೆಕ್
ಬಳ್ಳಾರಿ: ಉತ್ತರಾಖಂಡ ರಾಜ್ಯದಲ್ಲಿ ಇತ್ತೀಚೆಗೆ ಉಂಟಾದ ಭಾರೀ ಮಳೆಯಿಂದಾಗಿ ಸಾವು-ನೋವು ಸಂಭವಿಸಿದ್ದು, ಅಲ್ಲಿನ ಸಂತ್ರಸ್ತರ ಅನುಕೂಲಕ್ಕಾಗಿ ಬಳ್ಳಾರಿ ಎಪಿಎಂಸಿ ದಲ್ಲಾಳಿ ವರ್ತಕರ ಸಂಘದ ವತಿಯಿಂದ ಪ್ರಧಾನಮಂತ್ರಿಗಳ ಪರಿಹಾರ ನಿಧಿಗೆ ರು. 37,761 ಪರಿಹಾರ ನಿಧಿ ಚೆಕ್ನ್ನು ಜಿಲ್ಲಾ ಛೇಂಬರ್ ಆಫ್ ಕಾಮರ್ಸ್ನ ಅಧ್ಯಕ್ಷ ಕೌಡಿಕಿ ಉಮಾಪತೆಪ್ಪರಿಗೆ ನೀಡಲಾಯಿತು.
ಬಳ್ಳಾರಿ ಜಿಲ್ಲಾ ಛೇಂಬರ್ ಆಫ್ ಕಾಮರ್ಸ್ನ ಅಧ್ಯಕ್ಷ ಕೌಡಿಕಿ ಉಮಾಪತೆಪ್ಪರಿಗೆ ಇಲ್ಲಿನ ಎಪಿಎಂಸಿ ದಲ್ಲಾಳಿ ವರ್ತಕರ ಸಂಘದ ಉಪಾಧ್ಯಕ್ಷರಾದ ಪಿ. ಶ್ರೀನಿವಾಸಲು, ಕೆ. ಕೃಷ್ಣ, ಕಾರ್ಯದರ್ಶಿ ವಿ.ರಾಮಚಂದ್ರ, ವೆಂಕಟೇಶ್ ರೆಡ್ಡಿ ಸೇರಿ ಅನೇಕರು ಪರಿಹಾರ ನಿಧಿಯ ಚೆಕ್ ನೀಡಿದರು.
ಪ್ರಶಸ್ತಿಗೆ ಪುಸ್ತಕ ಆಹ್ವಾನ
ಬಳ್ಳಾರಿ: ಕನ್ನಡ ಸಾಹಿತ್ಯ ಪರಿಷತ್ತು ವಿವಿಧ ದತ್ತಿನಿಧಿ ಪ್ರಶಸ್ತಿ ನೀಡಲು ಅರ್ಹ ಲೇಖಕರಿಂದ ಪುಸ್ತಕಗಳನ್ನು ಆಹ್ವಾನಿಸಿದೆ ಎಂದು ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಸಂಗಮೇಶ ಬಾದವಾಡಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಎಂ.ಜಿ. ನಾಗರಾಜ್, ಎಂ.ಜಿ. ಪದ್ಮ ವಿರೂಪಾಕ್ಷಯ್ಯ ಹಾಗೂ ಎಂ.ಜಿ. ಚಂದ್ರಕಾಂತ್ ಅವರು ಕಸಾಪದಲ್ಲಿ ವಿ. ಗೌರಮ್ಮ ಗಂಗಾಧರಯ್ಯ ಮಕ್ಕಳ ಸಾಹಿತ್ಯ ದತ್ತಿ ಪ್ರಶಸ್ತಿ ನೀಡಲು ರು. 2 ಲಕ್ಷ ದತ್ತಿ ಸ್ಥಾಪಿಸಿದ್ದು, ಈ ಪ್ರಶಸ್ತಿಗಾಗಿ 2012ನೇ ಸಾಲಿನಲ್ಲಿ ಪ್ರಕಟವಾದ ಡಾ. ಜಚನಿ ಸಮೀಕ್ಷೆ ಹಾಗೂ ಸಾಹಿತ್ಯ ಕುರಿತು ಬರೆದ ಕೃತಿಗಳನ್ನು ಸಲ್ಲಿಸಬಹುದು. ಆಯ್ಕೆಯಾದ ಪುಸ್ತಕ ಲೇಖಕರಿಗೆ ರು. 10,000 ನಗದು ಪ್ರಶಸ್ತಿ ನೀಡಿ ಗೌರವಿಸಲಾಗುವುದು.
ಶ್ರೇಷ್ಠ ಕಾದಂಬರಿಗೆ ಜಿ.ಎಸ್.ಎಸ್. ಮೂರ್ತಿ ಅವರು ಗುಬ್ಬಿ ಸೋಲೂರು ಮುರುಗಾರಾಧ್ಯ ಪ್ರಶಸ್ತಿ ನೀಡಲು ರು. 1 ಲಕ್ಷ ದತ್ತಿ ಸ್ಥಾಪಿಸಿದ್ದಾರೆ. ಈ ಪ್ರಶಸ್ತಿಗಾಗಿ 2012ನೇ ಸಾಲಿನಲ್ಲಿ ಪ್ರಕಟವಾದ ಶ್ರೇಷ್ಠ ಕಾದಂಬರಿಯನ್ನು ಆಯ್ಕೆ ಮಾಡಲಾಗುವುದು. ಆಯ್ಕೆಯಾದವರಿಗೆ ರು. 5 ಸಾವಿರ ನಗದು ಮತ್ತು ಪ್ರಶಸ್ತಿ ನೀಡಿ ಗೌರವಿಸಲಾಗುವುದು.
ಅದೇ ರೀತಿ 2012ನೇ ಸಾಲಿನಲ್ಲಿ ಕನ್ನಡದಲ್ಲಿ ಪ್ರಕಟವಾದ ಯಾವುದೇ ಪ್ರಕಾರದ ಶ್ರೇಷ್ಠ ಕೃತಿಗೆ ನಿಡಸಾಲೆ ಪುಟ್ಟಸ್ವಾಮಯ್ಯ ಸಾಹಿತ್ಯ ದತ್ತಿ ಪ್ರಶಸ್ತಿ ನೀಡಲಾಗುವುದು. ಆಯ್ಕೆಯಾದವರಿಗೆ ರು. 5000 ನಗದು ಹಣ ಹಾಗೂ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಗುವುದು. ಈ ಸ್ಪರ್ಧೆಯಲ್ಲಿ ಭಾಗವಹಿಸುವವರು ತಮ್ಮ ಮೂರು ಪುಸ್ತಕಗಳನ್ನು ಕಳುಹಿಸಬೇಕು. ಪರಿಶೀಲನೆಗೆ ಬಂದ ಪುಸ್ತಕಗಳನ್ನು ಹಿಂದಿರುಗಿಸಲಾಗುವುದಿಲ್ಲ. ಆಸಕ್ತರು ತಮ್ಮ ಪುಸ್ತಕಗಳನ್ನು ಆ. 30ರೊಳಗೆ ಗೌರವ ಕಾರ್ಯದರ್ಶಿಗಳು, ಕನ್ನಡ ಸಾಹಿತ್ಯ ಪರಿಷತ್ತು, ಪಂಪ ಮಹಾಕವಿ ರಸ್ತೆ, ಚಾಮರಾಜಪೇಟೆ, ಬೆಂಗಳೂರು- 18 ಇವರಿಗೆ ಕಳುಹಿಸಬೇಕು. ಹೆಚ್ಚಿನ ಮಾಹಿತಿಗಾಗಿ ದೂ.ಸಂ-080-26623584ನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.