ಬೇಡಿಕೆ ಈಡೇರಿಕೆಗಾಗಿ ಧರಣಿ
ಕನ್ನಡಪ್ರಭ ವಾರ್ತೆ, ಬಳ್ಳಾರಿ, ಜು. 8
ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಮಾದಿಗ ದಂಡೋರ ಮೀಸಲಾತಿ ಹೋರಾಟ ಸಮಿತಿಯ ಪದಾಧಿಕಾರಿಗಳು ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಿ, ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿಗಳಿಗೆ ಮನವಿಪತ್ರ ಸಲ್ಲಿಸಿದರು.
ಧರಣಿ ನಿರತ ಸಮಿತಿಯ ಮುಖಂಡರು ಮಾತನಾಡಿ, ಪರಿಶಿಷ್ಟ ಜಾತಿ ಪಟ್ಟಿಯ 101 ಜಾತಿಗಳ ಪೈಕಿ ಮಾದಿಗರಿಗೆ ಪ್ರತ್ಯೇಕ ಮೀಸಲಾತಿ ಕಲ್ಪಿಸಬೇಕೆಂದು ಹಲವು ವರ್ಷಗಳಿಂದ ಹೋರಾಟ ಮಾಡಿಕೊಂಡು ಬಂದಿದ್ದರೂ, ಇಲ್ಲಿಯವರೆಗೆ ಎಲ್ಲಾ ರಾಜಕೀಯ ಪಕ್ಷಗಳು ಮಾದಿಗರ ಬೇಡಿಕೆಗಳನ್ನು ಈಡೇರಿಸುವಲ್ಲಿ ವಿಫಲವಾಗಿವೆ. ಕೇವಲ ಸುಳ್ಳು ಭರವಸೆಗಳನ್ನು ನೀಡಿ, ಮಾದಿಗ ಸಮುದಾಯವನ್ನು ಕಡೆಗಣಿಸಿದ್ದಾರೆ ಎಂದು ಆರೋಪಿಸಿದರು.
ಅನ್ಯಾಯವಾಗಿದೆ: ಹಲವು ವರ್ಷಗಳಿಂದ ಸಮಾಜದಲ್ಲಿ ಕಡೆಗಣನೆಗೆ ಗುರಿಯಾಗಿರುವ ಮಾದಿಗ ಸಮುದಾಯದವರು ಮೇಲ್ವರ್ಗದ ಕುತಂತ್ರಕ್ಕೆ ಬಲಿಯಾಗಿದ್ದಾರೆ. ಮಾದಿಗ ಸಮಾಜ ಅವಮಾನ, ಅಪಮಾನಗಳಿಗೆ ಗುರಿಯಾಗಿದೆ. ಪರಿಶಿಷ್ಟ ಜಾತಿಯಲ್ಲಿ 101 ಜಾತಿಗಳನ್ನು ಸೇರಿಸಿ, ನಿಜವಾದ ಹಿಂದುಳಿದ ಮಾದಿಗ ಸಮುದಾಯಕ್ಕೆ ಅನ್ಯಾಯವಾಗಿದೆ. ಬೇರೆ ರಾಜ್ಯಗಳಲ್ಲಿ ಪರಿಶಿಷ್ಟ ಜಾತಿಯಿಂದ ಹೊರಗಿರುವ ಲಂಬಾಣಿ, ಬೋವಿ, ಕೊರಮ, ಕೊರಚ ರಾಜ್ಯದಲ್ಲಿ ಪರಿಶಿಷ್ಟ ಪಟ್ಟಿಯಲ್ಲಿ ಸೇರಿಸಿದ್ದಾರೆ. ಇದರಿಂದಾಗಿ ನಿಜವಾದ ಸಮುದಾಯ ಕಡೆಗಣನೆಗೆ ಗುರಿಯಾಗಿದೆ ಎಂದು ತಿಳಿಸಿದರು.
ವರದಿ ಮಂಡಿಸಿ: ಈಗಾಗಲೇ ಒಳಮೀಸಲಾತಿ ಜಾರಿಗೊಳಿಸುವಂತೆ ಆಗ್ರಹಿಸಿ ಬೆಳಗಾವಿ ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕಲಾಯಿತು. ಈ ಸಂದರ್ಭದಲ್ಲಿ ಪೊಲೀಸರು ಲಾಠಿಚಾರ್ಜ್ ನಡೆಸಿದರು. ಇದನ್ನು ತೀವ್ರವಾಗಿ ಖಂಡಿಸಿದ್ದ ಅಂದಿನ ವಿಪಕ್ಷ ನಾಯಕ, ಹಾಲಿ ಸಿಎಂ ಸಿದ್ದರಾಮಯ್ಯ ಗಲಭೆಯನ್ನು ತನಿಖೆಗೆ ಒಪ್ಪಿಸಬೇಕೆಂದು ಆಗ್ರಹಿಸಿದ್ದರು. ಇದೀಗ ಅವರೇ ಮುಖ್ಯಮಂತ್ರಿಯಾಗಿದ್ದು, ಜು. 12ರಿಂದ 30ರ ವರೆಗೆ ನಡೆಯುವ ಬಜೆಟ್ ಅಧಿವೇಶನದಲ್ಲಿ ಎ.ಜೆ. ಸದಾಶಿವ ವರದಿಯನ್ನು ಮಂಡಿಸಿ, ಕೇಂದ್ರಕ್ಕೆ ಶಿಫಾರಸು ಮಾಡಬೇಕೆಂದು ಆಗ್ರಹಿಸಿದರು.
ಗುತ್ತಿಗೆ ಪೌರ ಕಾರ್ಮಿಕರ ಪದ್ಧತಿಯನ್ನು ರದ್ದುಗೊಳಿಸಿ, ಅವರನ್ನು ಕಾಯಂಗೊಳಿಸಬೇಕು. ರಾಜ್ಯದಲ್ಲಿನ ಗ್ರಾಮ ಸಹಾಯಕರನ್ನು ಗ್ರೂಪ್ ಡಿ ನೌಕರರೆಂದು ಪರಿಗಣಿಸಬೇಕು. ಚರ್ಮ ಕುಶಲ ಕರ್ಮಿಗಳಿಗೆ ಮತ್ತು ಸ್ಲಂ ನಿವಾಸಿಗಳಿಗೆ ಉಚಿತ ನಿವೇಶನ ನೀಡಬೇಕು. ಅರೆಕಾಲಿಕ ಪೌರಕಾರ್ಮಿಕರ ವೇತನ ಹೆಚ್ಚಿಸಿ, ಮೂಲ ಸೌಕರ್ಯ ಒದಗಿಸಬೇಕು ಎಂದು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಸಮಿತಿಯ ಮುಖಂಡರಾದ ಕೆ. ಗಿರಿಮಲ್ಲಪ್ಪ, ಎಚ್. ಅರ್ಜುನ್, ಸಾಹಿತಿ ಎನ್.ಡಿ. ವೆಂಕಮ್ಮ, ವೆಂಕಟೇಶ್, ಪ್ರಸಾದ್ ಸೇರಿದಂತೆ ಮಾದಿಗ ಸಮಾಜದ ಮುಖಂಡರು, ಕಾರ್ಯಕರ್ತರು ಇದ್ದರು.