ವಿದ್ಯುತ್ ಕಂಬ ಬೀಳುವ ಅಪಾಯ
ಕೂಡ್ಲಿಗಿ: ತಾಲೂಕಿನ ಬಣವಿಕಲ್ಲು ಗ್ರಾಮದ ಅನೇಕ ಕಡೆ ವಿದ್ಯುತ್ ಕಂಬಗಳು ಶಿಥಿಲಗೊಂಡು ಮುರಿದು ಬೀಳುವ ಹಂತದಲ್ಲಿವೆ. ಆದರೂ ಜೆಸ್ಕಾಂ ಮಾತ್ರ ದುರಸ್ತಿ ಮಾಡದೇ ನಿರ್ಲಕ್ಷ್ಯ ವಹಿಸಿದೆ ಎಂದು ಗ್ರಾಮದ ಯುವಕರು ಆರೋಪಿಸಿದ್ದಾರೆ.
ಗ್ರಾಮದ ಅನೇಕ ಕಡೆ ಸುಮಾರು ಏಳೆಂಟು ಕಂಬಗಳು ಅಪಾಯದ ಸ್ಥಿತಿಯಲ್ಲಿವೆ. ಜನಸಾಮಾನ್ಯರು, ಚಿಕ್ಕ ಮಕ್ಕಳು ಪ್ರತಿನಿತ್ಯ ಆ ಕಂಬಗಳ ಅಕ್ಕಪಕ್ಕ ಓಡಾಡುವುದು ಸಾಮಾನ್ಯ. ಅಲ್ಲದೆ, ಶಿಥಿಲಗೊಂಡ ವಿದ್ಯುತ್ ಕಂಬಗಳ ತಂತಿಗಳಲ್ಲಿ ನಿತ್ಯ ವಿದ್ಯುತ್ ಹರಿಯುವುದರಿಂದ ಅಪಾಯ ಕಟ್ಟಿಟ್ಟ ಬುತ್ತಿ ಎಂಬಂತೆ ಜನತೆ ಭಯ ಪಡುತ್ತಿದ್ದಾರೆ. ಗ್ರಾಮದ ಅನೇಕ ಯುವಕರು ಈ ಬಗ್ಗೆ ಗ್ರಾಮ ಪಂಚಾಯಿತಿಗೆ ದೂರು ನೀಡಿದ್ದಾರೆ. ಅಲ್ಲದೇ ಸ್ಥಳೀಯ ಗ್ರಾಪಂ ವತಿಯಿಂದ ಜೂ. 18ರಂದು ನಡೆದ ಗ್ರಾಮ ಸಭೆಯಲ್ಲಿ ಚರ್ಚಿಸಿ, ವಿದ್ಯುತ್ ಇಲಾಖೆಗೆ ಶಿಥಿಲಗೊಂಡ ಬೀದಿದೀಪ ಕಂಬಗಳನ್ನು ತೆರವುಗೊಳಿಸಿ ಹೊಸ ಕಂಬಗಳನ್ನು ಅಳವಡಿಸುವಂತೆ ಮನವಿ ಸಲ್ಲಿಸಲಾಗಿದೆ. ಜೆಸ್ಕಾಂ ಕ್ರಮಕ್ಕೆ ಮುಂದಾಗದಿರುವುದು ಜನತೆಗೆ ಆಕ್ರೋಶ ಮೂಡಿಸಿದೆ. ಇತ್ತ ಗಮನಹರಿಸದಿದ್ದರೆ ಪ್ರತಿಭಟಿಸಲಾಗುವುದು ಎಂದು ಗ್ರಾಮದ ಜಿ. ಚೌಡೇಶ್, ಗುರುಸಿದ್ದಪ್ಪ, ಸಿದ್ದೇಶ್, ಎಚ್. ನಾಗರಾಜ, ಬಿ. ಚೌಡಪ್ಪ ಎಚ್ಚರಿಸಿದ್ದಾರೆ.