ಗಣಿ ಧೂಳಿನೊಂದಿಗೆ ಕರಗಿತು ಬಳ್ಳಾರಿ ಕಾಪ್ಟರ್ ಹಾರಾಟ
ಬೆಂಗಳೂರು ಬಿಟ್ಟರೆ, ಅತಿ ಹೆಚ್ಚು ಹೆಲಿಕಾಪ್ಟರ್ ಹೊಂದಿದ್ದ ಬಳ್ಳಾರಿ ಜಿಲ್ಲೆಯಲ್ಲಿ ಇದೀಗ ನೋಡೋಣವೆಂದರೆ ಒಂದು ಹೆಲಿಕಾಪ್ಟರ್ ಸಹ...
ಕನ್ನಡಪ್ರಭ ವಾರ್ತೆ, ಬಳ್ಳಾರಿ, ಜು. 9-
ಬೆಂಗಳೂರು ಬಿಟ್ಟರೆ, ಅತಿ ಹೆಚ್ಚು ಹೆಲಿಕಾಪ್ಟರ್ ಹೊಂದಿದ್ದ ಬಳ್ಳಾರಿ ಜಿಲ್ಲೆಯಲ್ಲಿ ಇದೀಗ ನೋಡೋಣವೆಂದರೂ ಒಂದು ಹೆಲಿಕಾಪ್ಟರ್ ಸಹ ಕಣ್ಣಿಗೆ ಬೀಳದು! ಕೆಂಧೂಳಿನ ಪ್ರಭಾವ ಕಡಿಮೆಯಾದಂತೆ ಐಷಾರಾಮಿ ಬದುಕಿಗೆ ಕತ್ತರಿ ಬಿದ್ದಿದೆ. ಇನ್ನು ಐಷಾರಾಮಿಗಳ ಕಾರಿಗೂ ಕೊಂಚ ಬ್ರೇಕ್ ಬಿದ್ದಿದೆ. ಇದ್ದ ಹೆಲಿಕಾಪ್ಟರ್ ಅನ್ನು ಕೆಲವು ಗಣಿ ಮಾಲೀಕರು ಮಾರಿದ್ದರೆ, ಇನ್ನು ಕೆಲವರು ಲೀಸ್‌ಗೆ ನೀಡಿ, ಹೆಲಿಕಾಪ್ಟರ್ ಬಳಕೆಯಿಂದ ದೂರ ಉಳಿದಿದ್ದಾರೆ.
ಗಣಿ ಭೂಮ್‌ನಲ್ಲಿದ್ದಾಗ ಬಳ್ಳಾರಿಯಲ್ಲಿ ಹೆಲಿಕಾಪ್ಟರ್‌ಗಳದ್ದೇ ಕಾರುಬಾರು ಇತ್ತು. ಬೆಳಗ್ಗೆ ಬಳ್ಳಾರಿಯಲ್ಲಿದ್ದವರು ಮಧ್ಯಾಹ್ನ ಬೆಂಗಳೂರಿನಲ್ಲಿ, ಸಂಜೆ ಬಳ್ಳಾರಿಯಲ್ಲಿರುತ್ತಿದ್ದರು. ಬೆಳಗ್ಗೆ ವಿಧಾನಸಭಾ ಅಧಿವೇಶನಕ್ಕೆ ಹೋಗಿ, ಮಧ್ಯಾಹ್ನಕ್ಕೆ ಬರುತ್ತಿದ್ದ ಕಾಲವೊಂದಿತ್ತು. ಸಣ್ಣಪುಟ್ಟ ಕೆಲಸಗಳಿಗೂ ಹೆಲಿಕಾಪ್ಟರ್ ಅನ್ನು ಬಳಸಲಾಗುತ್ತಿತ್ತು. ಇನ್ನು ಹಲವು ಸಂದರ್ಭದಲ್ಲಿ ಬಳ್ಳಾರಿಯಿಂದ ಹೊಸಪೇಟೆಗೆ, ಹೊಸಪೇಟೆಯಿಂದ ಬಳ್ಳಾರಿಗೆ ಬರುವುದಕ್ಕೂ ಹೆಲಿಕಾಪ್ಟರ್ ಬಳಕೆಯನ್ನು ಕಂಡ ಬಳ್ಳಾರಿ ಜಿಲ್ಲೆಗೆ, ಇದೀಗ ಅಬ್ಬರದ ಹೆಲಿಕಾಪ್ಟರ್ ಹಾರಾಟ ಇತಿಹಾಸದ ಪುಟದಲ್ಲಿ ಸೇರಿದಂತೆ ಭಾಸವಾಗುತ್ತಿದೆ!
ಪ್ರತ್ಯೇಕ ಹೆಲಿಪ್ಯಾಡ್ ವ್ಯವಸ್ಥೆ: ಸುಪ್ರೀಂ ಕೋರ್ಟ್ ಗಣಿಗಾರಿಕೆ ಸ್ಥಗಿತಕ್ಕೆ ಆದೇಶಿಸಿದ್ದರಿಂದ ಲೋಹದ ಹಕ್ಕಿಗಳ ಹಾರಾಟಕ್ಕೆ ಕಡಿವಾಣ ಹಾಕಿದಂತಾಗಿದೆ. ರೆಡ್ಡಿ ಸಹೋದರರು ಹಾಗೂ ಬಿ. ಶ್ರೀರಾಮುಲು ಅವರು ಹೆಲಿಕಾಪ್ಟರ್‌ಗಾಗಿಯೇ ಸಿರುಗುಪ್ಪ ರಸ್ತೆಯಲ್ಲಿ ಪ್ರತ್ಯೇಕವಾದ ಹೆಲಿಪ್ಯಾಡ್ ವ್ಯವಸ್ಥೆ ಮಾಡಿಕೊಂಡಿದ್ದರು.
ಹೆಲಿಕಾಪ್ಟರ್‌ಗಳ ಧಣಿಗಳು: ಬಿಸಿಲ ನಾಡು ಎಂಬ ಖ್ಯಾತಿಯೊಂದಿಗೆ ಗಣಿ ನಾಡು ಎಂಬ ಖ್ಯಾತಿಗೂ ಗಣಿ ಧಣಿಗಳ ವೈಭವವೇ ಕಾರಣವಾಯ್ತು. ಪ್ರತಿಯೊಬ್ಬ ಗಣಿ ಮಾಲೀಕರು, ಇತರರು ಜೇಬಿನಲ್ಲಿ ನೋಟಿನ ಕಂತೆಯನ್ನೇ ಇಟ್ಟುಕೊಳ್ಳುತ್ತಿದ್ದರು. ಇದೀಗ ನೋಟಿನ ಕಂತೆಯ ಬದಲಾಗಿ, ತನಿಖೆಯ ಚಿಂತೆಯನ್ನು ತಲೆಯಲ್ಲಿ ಇಟ್ಟುಕೊಳ್ಳುವಂತೆ ಮಾಡಿದೆ. ಜನಾರ್ದನ ರೆಡ್ಡಿ, ಆನಂದ್‌ಸಿಂಗ್, ಅನಿಲ್‌ಲಾಡ್, ಸಂತೋಷ್ ಲಾಡ್, ನೂರ್ ಅಹಮದ್, ಎಸ್.ಕೆ. ಮೋದಿ, ಬಲ್ಡೋಟ ಹೆಲಿಕಾಪ್ಟರ್, ಚಿಕ್ಕ ವಿಮಾನ ಹೊಂದಿದ್ದರು.
- ಶಶಿಧರ ಮೇಟಿ