ಬಸ್ ನಿಲ್ದಾಣ ಪೂರ್ಣ ನಿರ್ಮಾಣಕ್ಕೆ ಜಿಂದಾಲ್ ಬದ್ಧ
ಹೊಸಪೇಟೆ: ನಗರದ ನೂತನ ಬಸ್ ನಿಲ್ದಾಣದ ಪೂರ್ಣ ತಯಾರಿಗೆ ಜಿಂದಾಲ್ ಸಂಸ್ಥೆ ಬದ್ಧವಾಗಿದ್ದು, ಎರಡನೇ ಹಂತದ ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದು ಜಿಂದಾಲ್ ಸಂಸ್ಥೆಯ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ಶಶಿಕುಮಾರ್ ಹೇಳಿದರು. ನಗರದಲ್ಲಿ ಶುಕ್ರವಾರ ನೂತನ ಬಸ್ ನಿಲ್ದಾಣದ 2ನೇ ಹಂತದ ಕಾಮಗಾರಿಗೆ ಭೂಮಿಪೂಜೆ ಸಂದರ್ಭದಲ್ಲಿ ಮಾತನಾಡಿ, ಅದಷ್ಟು ಬೇಗ ನೂತನ ಬಸ್ ನಿಲ್ದಾಣದ ಕಾಮಗಾರಿ ಪೂರ್ಣಗೊಳಿಸುವ ವಿಶ್ವಾಸ ಹೊಂದಿದ್ದೇವೆ. ಈಗಾಗಲೇ ನಗರದಲ್ಲಿ ನೂತನ ಬಸ್ ನಿಲ್ದಾಣದಲ್ಲಿ ಅರ್ಧ ಭಾಗ ನಿರ್ಮಾಣಗೊಂಡಿರುವುದನ್ನು ನೋಡಿದರೆ ವಿಜಯನಗರ ಕಾಲದ ಕಟ್ಟಡಗಳನ್ನು ಹೋಲಿಕೆಯಾಗುವ ರೀತಿಯಲ್ಲಿ ಕಟ್ಟಡ ನಿರ್ಮಾಣವಾಗಿದೆ. ಇನ್ನುಳಿದ ಅರ್ಧಭಾಗವನ್ನು ಸಹ ಮೊದಲಿನಂತೆಯೇ ನಿರ್ಮಿಸಲಾಗುತ್ತಿದೆ ಎಂದರು. ಬಿಜೆಪಿ ಮುಖಂಡ ಧರ್ಮೇಂದ್ರ ಸಿಂಗ್ ಭೂಮಿಪೂಜೆ ನೆರವೇರಿಸಿದರು. ಜಿಂದಾಲ್ ಸಂಸ್ಥೆಯ ಅಸಿಸ್ಟೆಂಟ್ ಮ್ಯಾನೇಜರ್ ಬಾಲು, ಗುತ್ತಿಗೆದಾರ ಅಯ್ಯಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.