ಸಿದ್ದರಾಮಯ್ಯರಿಂದ ನ್ಯಾಯ ಪರ ಆಡಳಿತ
ಕುರುಗೋಡು: ಹಾಲುಮತ ಸಮುದಾಯದ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಸಾಮಾಜಿಕ, ಸಮಾನತೆ ಹಾಗೂ ನ್ಯಾಯ ಪರವಾದ ಅಡಳಿತ ನೀಡಿ ಪ್ರಶ್ನಾತೀತ ನಾಯಕರಾಗಿದ್ದಾರೆ ಎಂದು ಗುಲ್ಬರ್ಗಾ ಕನಕ ಗುರು ಪೀಠದ ಸಿದ್ದರಾಮಾನಂದಪುರ ಸ್ವಾಮೀಜಿ ಹೇಳಿದರು. ಅವರು ಸಮೀಪದ ಸೋಮಲಾಪುರ ಗ್ರಾಮದಲ್ಲಿ ಭಾನುವಾರ ಕನಕ ಗುರು ಪೀಠದ ಶಾಖಾ ಮಠದ ಭೂಮಿ ಪೂಜೆ ನೆರವೇರಿಸಿ ಸಾನ್ನಿಧ್ಯ ವಹಿಸಿ ಮಾತನಾಡಿದರು. ಸಮುದಾಯವನ್ನು ಪ.ಪಂ. ಗುಂಪಿಗೆ ಸೇರಿಸುವಂತೆ ಸರ್ಕಾರಕ್ಕೆ ಒತ್ತಾಯಿಸಲಾಗುವುದು. ಈ ಬಗ್ಗೆ ಸರ್ಕಾರದ ಗಮನ ಸೆಳೆಯಲು ಹೈದ್ರಾಬಾದ್ ಕರ್ನಾಟಕ ಪ್ರಾಂತದ 6 ಜಿಲ್ಲೆಯ ಮುಖಂಡರ ನಿಯೋಗ ಸಿದ್ಧಗೊಂಡಿದ್ದು ಇಷ್ಟರಲ್ಲೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದರು. ಮಾಜಿ ಎಂಎಲ್‌ಸಿ ಕೆ.ಎಸ್.ಎಲ್. ಸ್ವಾಮಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ರಾಜಕೀಯ ಸಾಧನೆಗಿಂತ ಶಿಕ್ಷಣದ ಸಾಧನೆ ಮುಖ್ಯ. ರಾಜ್ಯದಲ್ಲಿ ಹಾಲುಮತ ಸಮುದಾಯದ 14 ಶಾಸಕರಿದ್ದಾರೆ. ಜನ ಶಿಕ್ಷಣದಿಂದ ವಂಚಿತರಾಗಿದ್ದಾರೆ. ಗುರುಪೀಠದ ಶಾಖೆಯಲ್ಲಿ ಸಂಚಾರಿ ಕುರಿಗಾರರ ಮಕ್ಕಳಿಗೆ ಉಚಿತ ಹಾಸ್ಟೆಲ್ ಸೌಲಭ್ಯ ಒದಗಿಸುವುದು ಮುಖ್ಯ ಗುರುಪೀಠದ ಉದ್ದೇಶವಾಗಿದೆ ಎಂದರು. ಜಿಪಂ ಮಾಜಿ ಅಧ್ಯಕ್ಷೆ ಜೀವೇಶ್ವರಿ ರಾಮಕೃಷ್ಣ ಕಾರ್ಯಕ್ರಮದ ಅಧಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ಶಾಖಾ ಪೀಠದ ಭವಾನಿ ಕೆ. ಮರಿಸಿದ್ದನಗೌಡರನ್ನು ಸನ್ಮಾನಿಸಲಾಯಿತು. ಕುರುಗೋಡಿನ ಕೆ. ಬಸಪ್ಪ, ತಾಪಂ ಮಾಜಿ ಸದಸ್ಯ ಮಲ್ಲಿಕಾರ್ಜುನ, ಡಾ. ತೆರಸಾಲಪ್ಪ, ಮಾಜಿ ಮೇಯರ್ ಹನುಮಂತಪ್ಪ, ಜಿಲ್ಲೆಯ ವಿವಿಧ ಗ್ರಾಮದ ಹಾಲುಮತ ಸಮುದಾಯದ ಮುಖಂಡರು ಇದ್ದರು. ಕನಕ ಗುರು ಪೀಠದ ಧರ್ಮದರ್ಶಿ ಕೆ.ಎಂ. ಹಾಲಪ್ಪ, ಕೆ.ವೆಂಕಟೇಶ್ ಕಾರ್ಯಕ್ರಮ ನಿರ್ವಹಿಸಿದರು.