ಅನ್ನಭಾಗ್ಯ: ಬಡವರು ವಂಚಿತರಾಗದಿರಲಿ
ಕನ್ನಡಪ್ರಭ ವಾರ್ತೆ, ಬಳ್ಳಾರಿ, ಜು. 10
ರಾಜ್ಯದಲ್ಲಿರುವ ಪ್ರತಿಯೊಬ್ಬ ಬಡವರು ಹಸಿವಿನಿಂದ ಬಳಲಬಾರದು ಎಂಬ ಸದುದ್ದೇಶದಿಂದ ರಾಜ್ಯ ಸರ್ಕಾರ ಜಾರಿಗೊಳಿಸಿರುವ ಅನ್ನಭಾಗ್ಯ ಯೋಜನೆಯಿಂದ ಅರ್ಹ ಫಲಾನುಭವಿಗಳು ವಂಚಿತರಾಗಬಾರದು ಎಂದು ರಾಜ್ಯ ಕಾರ್ಮಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪಿ.ಟಿ. ಪರಮೇಶ್ವರ ನಾಯ್ಕ ಹೇಳಿದರು.
ಬುಧವಾರ ಜಿಲ್ಲಾಡಳಿತ, ಜಿಪಂ, ಆಹಾರ, ನಾಗರಿಕ ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಸಹಯೋಗದಲ್ಲಿ ನಗರದ 5ನೇ ವಾರ್ಡ್ನ ವ್ಯಾಪ್ತಿಯಲ್ಲಿ ಬರುವ ಮುಂಡ್ರಿಗಿಯಲ್ಲಿ ಬುಧವಾರ ಆಯೋಜಿಸಿದ್ದ ಅನ್ನಭಾಗ್ಯ ಯೋಜನೆ ಉದ್ಘಾಟಿಸಿ ಅವರು ಮಾತನಾಡಿ, ಬಿಪಿಎಲ್ ಕಾರ್ಡ್ದಾರರು ಅಥವಾ ಅದರಿಂದ ವಂಚಿತರಾದವರನ್ನು ಗುರುತಿಸಿ ಅರ್ಹ ಫಲಾನುಭವಿಗಳಿಗೆ ಈ ಯೋಜನೆ ಸದುಪಯೋಗವಾಗಬೇಕು. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯವರು ಈ ಯೋಜನೆ ದುರುಪಯೋಗವಾಗದಂತೆ ಎಚ್ಚರ ವಹಿಸಬೇಕು ಎಂದರು.
ಕಾಂಗ್ರೆಸ್ ಬಡವರ ಪರ: ಬಡವರ ಪರ, ಹಸಿವು ನೀಗಿಸುವ ಕಾರ್ಯಕ್ರಮ ಇದಾಗಿದ್ದು, ಯಾರೊಬ್ಬರೂ ವಂಚಿತರಾಗಬಾರದು. ಅನ್ನಕ್ಕಾಗಿ ಪರದಾಡಬಾರದು ಎಂಬ ಸದುದ್ದೇಶದಿಂದ ರು. 27 ಖರೀದಿಸಿದ ಕೆಜಿ ಅಕ್ಕಿಯನ್ನು ಕೇವಲ ರು. 1ಗೆ ನೀಡಲಾಗುತ್ತಿದೆ. ಕೇಂದ್ರದಲ್ಲಿನ ಕಾಂಗ್ರೆಸ್ ಸರ್ಕಾರ ಬಡವರ ಪರ ಚಿಂತನೆ ನಡೆಸುತ್ತಿದ್ದು, ಆಹಾರ ಭದ್ರತೆ ಯೋಜನೆ ಜಾರಿಗೆ ತರಲು ಮುಂದಾಗಿದೆ. ಕೇಂದ್ರ-ರಾಜ್ಯ ಸರ್ಕಾರಗಳೆರಡೂ ಹಸಿವಿನ ಹೊಟ್ಟೆಗೆ ಅನ್ನ ನೀಡುವ ಕಾರ್ಯಕ್ಕೆ ಮುಂದಾಗುತ್ತಿವೆ ಎಂದು ತಿಳಿಸಿದರು.
ರಾಜ್ಯಾದ್ಯಂತ ಸಾಮೂಹಿಕವಾಗಿ ಹಮ್ಮಿಕೊಂಡಿರುವ ಅನ್ನಭಾಗ್ಯ ಯೋಜನೆಗೆ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದರೆ, ಜಿಲ್ಲಾ ಕೇಂದ್ರಗಳಲ್ಲಿ ಆಯಾ ಜಿಲ್ಲಾ ಉಸ್ತುವಾರಿ ಸಚಿವರೇ ಚಾಲನೆ ನೀಡುವಂತೆ ಸಿಎಂ ಆದೇಶಿಸಿದ್ದಾರೆ. ಕಾಂಗ್ರೆಸ್ ಪಕ್ಷ ವಿಧಾನಸಭೆ ಚುನಾವಣೆಗೂ ಮುನ್ನ ರಾಜ್ಯದ ಬಿಪಿಎಲ್ ಕಾರ್ಡುದಾರರಿಗೆ 30 ಕೆಜಿ ಅಕ್ಕಿ ನೀಡುವ ಕುರಿತು ತನ್ನ ಪ್ರಣಾಳಿಕೆಯಲ್ಲಿ ಭರವಸೆ ನೀಡಿತ್ತು. ಇಂದು ಸರ್ಕಾರವು ಕೊಟ್ಟ ಮಾತಿಗೆ ತಪ್ಪದಂತೆ ಉಳಿಸಿಕೊಂಡಿದೆ ಎಂದರು.
ಅನುದಾನ ಬಿಡುಗಡೆ: ಇದೇ ಸಂದರ್ಭದಲ್ಲಿ ಮುಂಡ್ರಿಗಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗೆ ರು. 17 ಲಕ್ಷ, ಆಶ್ರಯ ಕಾಲೋನಿಯ ಶೌಚಾಲಯ ನಿರ್ಮಾಣಕ್ಕೆ ರು. 7.5 ಲಕ್ಷ, ಗ್ರಾಮದ ವ್ಯಾಪ್ತಿಯ ರಸ್ತೆ ಅಭಿವೃದ್ಧಿಗೆ ರು. 9 ಲಕ್ಷ ಬಿಡುಗಡೆ ಮಾಡುವುದಾಗಿ ಸಚಿವ ನಾಯ್ಕ ಭರವಸೆ ನೀಡಿದರು.
ಸಂಡೂರು ಶಾಸಕ ಈ. ತುಕಾರಾಂ ಮಾತನಾಡಿ, ಹಸಿದ ಹೊಟ್ಟೆಗೆ ಅಗ್ಗದ ದರದಲ್ಲಿ ಅಕ್ಕಿ ನೀಡುವ ಈ ಮಹತ್ವಾಕಾಂಕ್ಷಿ ಯೋಜನೆ ಇದಾಗಿದೆ. ತನ್ನ ಅಧಿಕಾರವಧಿಯಲ್ಲಿ ಕಾಂಗ್ರೆಸ್ ಸರ್ಕಾರ ದಕ್ಷ, ಜನಪರ ಆಡಳಿತ ನೀಡುವ ಮೂಲಕ ಜನರ ಮನಸ್ಸಿನಲ್ಲಿ ಸದಾ ಅಚ್ಚಳಿಯದೇ ಉಳಿಯಲಿದೆ ಎಂದು ತಿಳಿಸಿದರು.
ಸರ್ಕಾರದ ಕ್ರಮ ಸ್ವಾಗತಾರ್ಹ: ವಿಧಾನಪರಿಷತ್ ಸದಸ್ಯ ಮೃತ್ಯುಂಜಯ ಜಿನಗಾ ಮಾತನಾಡಿ, ಸರ್ಕಾರ ಬಡವರ ಪರ ಹಮ್ಮಿಕೊಳ್ಳುವ ಕಾರ್ಯಕ್ರಮಗಳನ್ನು ಪಕ್ಷಭೇದ ಮರೆತು ಎಲ್ಲರೂ ಸ್ವಾಗತಿಸಬೇಕು. ಮುಂದಿನ ದಿನಗಳಲ್ಲಿ ಸರ್ಕಾರ ಇಂತಹ ಅಭಿವೃದ್ಧಿ ಪರ ಕಾರ್ಯಕ್ರಮಗಳನ್ನು ನಿರಂತರವಾಗಿ ಹಮ್ಮಿಕೊಳ್ಳಲಿ. ಪಡಿತರ ಚೀಟಿಗೆ ಸಂಬಂಧಿಸಿದಂತೆ ಎಲ್ಲ ಗೊಂದಲಗಳೂ ನಿವಾರಣೆ ಆಗಬೇಕು ಹಾಗೂ ಬಿಪಿಎಲ್ ಕಾರ್ಡ್ನ ಹಗರಣಗಳನ್ನು ಸರಿಪಡಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಬಳ್ಳಾರಿ ನಗರ ಶಾಸಕ ಅನಿಲ್ ಲಾಡ್ ಮಾತನಾಡಿ, ಸರ್ಕಾರದ ಈ ಯೋಜನೆ ದುರುಪಯೋಗವಾಗಬಾರದು. ರು. 4000 ಕೋಟಿ ವೆಚ್ಚದಲ್ಲಿ ಬೇರೆ ರಾಜ್ಯದಿಂದ ಅಕ್ಕಿ ಖರೀದಿಸಿ, ಬಡಜನತೆಗೆ ರು. 1ಗೆ ನೀಡುತ್ತಿದೆ. ಅಕ್ಕಿ ಪಡೆದ ಫಲಾನುಭವಿಗಳು ಅಂಗಡಿಗಳಿಗೆ ಮಾರಾಟ ಮಾಡಬಾರದು. ಈ ಕುರಿತು ಸಾಕಷ್ಟು ಕಡೆ ಚರ್ಚೆ ನಡೆಯುತ್ತಿದ್ದು, ಯಾರೂ ಮಾರಲು ಮುಂದಾಗಬಾರದು. ಯಾವತ್ತಾದ್ರು ಒಂದು ದಿನ ಯೋಜನೆ ಸ್ಥಗಿತಗೊಂಡಲ್ಲಿ, ಅಂದು ನಿಮಗೆ ಮಾಡಲು ಕೆಲಸವೂ ಇರಲ್ಲ. ಹೀಗಾಗಿ ಅಕ್ಕಿ ಪಡೆಯುವ ಜತೆಗೆ ಕೆಲಸವನ್ನು ಮಾಡಬೇಕು ಎಂದರು.
ಬಳ್ಳಾರಿ ಸಂಸದೆ ಜೆ. ಶಾಂತಾ, ಶಾಸಕ ಭೀಮಾನಾಯ್ಕ, ಜಿಲ್ಲಾಧಿಕಾರಿ ಆದಿತ್ಯ ಆಮ್ಲಾನ್ ಬಿಸ್ವಾಸ್, ಜಿಪಂ ಅಧ್ಯಕ್ಷೆ ಸುಮಂಗಳಮ್ಮ ಗುಬಾಜಿ, ಪಾಲಿಕೆ ಸದಸ್ಯ ಷೇಕ್ಷಾವಲಿ, ಕಾಂಗ್ರೆಸ್ ಅಧ್ಯಕ್ಷ ಜೆ.ಎಸ್. ಆಂಜನೇಯಲು ಇದ್ದರು. ದೊಡ್ಡಬಸವ ಗವಾಯಿ ನಾಡಗೀತೆ ಹಾಡಿದರು. ಜಿಲ್ಲಾ ಆಹಾರ ಇಲಾಖೆಯ ಉಪನಿರ್ದೇಶಕ ಮಂಟೆಸ್ವಾಮಿ ಸ್ವಾಗತಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕೊಟ್ರಪ್ಪ ನಿರೂಪಿಸಿ, ವಂದಿಸಿದರು.