ಜಿಲ್ಲಾದ್ಯಂತ ಉತ್ತಮ ಮಳೆ: ರೈತರು ಖುಷ್
ಬಳ್ಳಾರಿ: ಬಳ್ಳಾರಿ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಬುಧವಾರ ಸಂಜೆ ಉತ್ತಮ ಮಳೆಯಾಗಿದ್ದು, ರೈತರಲ್ಲಿ ಹಾಗೂ ಸಾರ್ವಜನಿಕರಲ್ಲಿ ಸಂತಸ ಮೂಡಿಸಿದೆ. ಬಳ್ಳಾರಿ ನಗರದಲ್ಲಿ ಬೆಳಗ್ಗೆಯಿಂದಲೇ ಮೋಡ ಕವಿದ ವಾತವರಣವಿದ್ದು, ಸಂಜೆ ಉತ್ತಮ ಮಳೆಯಾಗಿದೆ. ಜಿಲ್ಲೆಯ ಹೊಸಪೇಟೆ, ಬಳ್ಳಾರಿ, ಸಿರುಗುಪ್ಪ, ಹಗರಿಬೊಮ್ಮನಹಳ್ಳಿಯಲ್ಲಿ ಉತ್ತಮ ಮಳೆಯಾಗಿದ್ದರೆ, ಸಂಡೂರು, ಕೂಡ್ಲಿಗಿ, ಹೂವಿನಹಡಗಲಿ ತಾಲೂಕಿನಲ್ಲಿ ಸಾಧಾರಣ ಮಳೆಯಾದ ವರದಿಯಾಗಿದೆ. ಹಗರಿಬೊಮ್ಮನಹಳ್ಳಿಯಲ್ಲಿ ಮಧ್ಯಾಹ್ನ ಪ್ರಾರಂಭವಾಗಿ ಸಂಜೆ ಉತ್ತಮ ಮಳೆ ಸುರಿದಿದೆ. ಕೂಡ್ಲಿಗಿಯಲ್ಲಿ ಬೆಳಗ್ಗೆಯಿಂದ ಜಿಟಿಜಿಟಿ ಮಳೆಯಾಗಿದ್ದು, ರೈತರಲ್ಲಿ ಅಶಾಭಾವನೆ ಮೂಡಿಸಿದೆ. ಸಿರುಗುಪ್ಪ ತಾಲೂಕಿನಲ್ಲಿ 2.8 ಮಿ.ಮೀ ರಷ್ಟು ಮಳೆಯಾಗಿದೆ. ಕುರುಗೋಡು ಪಟ್ಟಣದಲ್ಲಿ ಉತ್ತಮ ಮಳೆಯಾಗಿದ್ದು, ಪಟ್ಟಣದ ಮುಖ್ಯ ವೃತ್ತದ ಚರಂಡಿ ಒಡೆದು ಚರಂಡಿ ನೀರು ರಸ್ತೆಗೆ ನುಗ್ಗಿತ್ತಲ್ಲದೆ ಚರಂಡಿಗಳೆಲ್ಲಾ ಒಡೆದು ನೀರು ರಸ್ತೆಗೆ ಹರಿಯುತ್ತಿತ್ತು. ಜುಲೈ ತಿಂಗಳಲ್ಲಿ ಈವರೆಗೆ ಒಟ್ಟು 178.7 ಮಿ.ಮೀ. ಮಳೆಯಾಗಿದ್ದು, ಸರಾಸರಿ 25.5 ಮಿ.ಮೀ. ಮಳೆಯಾದ ವರದಿಯಾಗಿದೆ.
ಹಗರಿಬೊಮ್ಮನಹಳ್ಳಿಯಲ್ಲೂ ಮಳೆ
ಹಗರಿಬೊಮ್ಮನಹಳ್ಳಿ: ಬುಧವಾರ ಮಧ್ಯಾಹ್ನದಿಂದ ಹಗರಿಬೊಮ್ಮನಹಳ್ಳಿ ಪಟ್ಟಣ ಸೇರಿದಂತೆ ಸುತ್ತಲಿನ ಗ್ರಾಮಗಳಲ್ಲಿ ಉತ್ತಮ ಮಳೆಯಾಯಿತು.
ಮಧ್ಯಾಹ್ನ 12 ಗಂಟೆ ಸುಮಾರಿಗೆ ಜಿಟಿಜಿಟಿ ಮಳೆ ಆರಂಭವಾದ ನಂತರ ಜೋರಾಗಿಯೇ ಸುರಿಯಲಾರಂಭಿಸಿತು.
ಸಂಜೆ ಐದು ಗಂಟೆವರೆಗೂ ಉತ್ತಮವಾಗಿ ಮಳೆ ಸುರಿದಿದ್ದರಿಂದ ಪಟ್ಟಣದ ರಸ್ತೆಗಳ ಮೇಲೆಲ್ಲ ಮಳೆ ನೀರಿನದ್ದೆ ಕಾರುಬಾರು. ಮಧ್ಯಾಹ್ನವೇ ಮಳೆ ಬಂದಿದ್ದರಿಂದ ಪಟ್ಟಣದಲ್ಲಿ ಜನಜೀವನ ಅಸ್ತವ್ಯಸ್ತವಾಗಿತ್ತು. ಸುರಿಯುವ ಮಳೆಯಲ್ಲಿಯೇ ಹಲವರು ಛತ್ರಿ ಹಿಡಿದು, ತಲೆ ಮೇಲೆ ಟವೆಲ್ ಹಾಕಿಕೊಂಡು ರಸ್ತೆಯ ಮೇಲೆ ಜನ ಸಂಚರಿಸಿಸುತ್ತಿರುವ ದೃಶ್ಯಗಳು ಕಂಡುಬಂದವು. ಬಹುದಿನಗಳಿಂದ ಮಳೆ ಇಲ್ಲದೆ ಕಂಗಾಲಾಗಿದ್ದ ರೈತರ ಮುಖದಲ್ಲಿ ಬುಧವಾರ ಸುರಿದ ಮಳೆ ಸಂತಸ ಮೂಡಿಸಿತು. ಇನ್ನೇನ್ನು ಮಳೆ ಕೈಕೊಟ್ಟಿತು ಎನ್ನುವಾಗಲೆ ವರುಣ ಕೃಪೆ ತೋರಿದ ಎಂಬ ಸಂತಸದ ಮಾತುಗಳು ರೈತರರಿಂದ ಕೇಳಿಬಂದವು.