ಆತ್ಮಹತ್ಯೆಗೆ ಪ್ರೇರಣೆ: ಪತಿಗೆ ಕಠಿಣ ಶಿಕ್ಷೆ
ಬಳ್ಳಾರಿ: ಮಕ್ಕಳಾಗದ ಕಾರಣಕ್ಕೆ ತನ್ನ ಪತ್ನಿಯ ಆತ್ಮಹತ್ಯೆಗೆ ಪ್ರೇರೇಪಿಸಿದ್ದಕ್ಕಾಗಿ ಪತಿಗೆ 5 ವರ್ಷ ಕಠಿಣ ಶಿಕ್ಷೆಯೊಂದಿಗೆ ರು. 20 ಸಾವಿರ ದಂಡ ವಿಧಿಸಿ ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶ ಡಿ. ವಿಶ್ವೇಶ್ವರ ಭಟ್ ತೀರ್ಪು ನೀಡಿದ್ದಾರೆ.
ಸಿರುಗುಪ್ಪದ ಪರಮೇಶ ಎಂಬ ವ್ಯಕ್ತಿ ತನ್ನ ಪತ್ನಿ ಮಾರೆಮ್ಮಾಳಿಗೆ ಮಕ್ಕಳಾಗದೇ ಇದ್ದುದರಿಂದ ಪ್ರತಿದಿನ ಬೈಯುವುದು, ಹೊಡೆಯುವುದು ಮಾಡುತ್ತಿದ್ದನು. ಅಲ್ಲದೆ 2011ರ ನವೆಂಬರ್ 18ರಂದು ಸಂಜೆ 5 ಗಂಟೆ ಸುಮಾರಿಗೆ ಮಾರೆಮ್ಮಾಳ ಮೇಲೆ ದೈಹಿಕ ಹಲ್ಲೆ ನಡೆಸಿ ಎಲ್ಲಾದರೂ ಹೋಗಿ ಸಾಯಿ ಎಂದು ಹೇಳಿದ್ದನು. ಇದರಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಮೈಮೇಲೆ ಸೀಮೆ ಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಳು. ಈ ಆತ್ಮಹತ್ಯೆಗೆ ಪರಮೇಶನೇ ಪ್ರೇರೇಪಣೆ ನೀಡಿದ್ದಾನೆಂದು ವಿಚಾರಣೆಯಿಂದ ಸಾಬೀತಾಗಿದೆ. ಸಿರುಗುಪ್ಪ ಪೊಲೀಸರು ಭಾರತೀಯ ದಂಡ ಸಂಹಿತೆ ಕಲಂ 498 (ಎ), 306ರಡಿ ಪ್ರಕರಣ ದಾಖಲಿಸಿ ತನಿಖೆ ಪೂರೈಸಿ ಆಪಾದನಾ ಪಟ್ಟಿ ಸಲ್ಲಿಸಿದ್ದರು. ಸರ್ಕಾರಿ ಅಭಿಯೋಜಕಿ ಅಂಜಲಿದೇವಿ ವಾದ ಮಂಡಿಸಿದ್ದರು.