ಗೃಹಿಣಿ ಕೊಲೆ: ಮೂವರಿಗೆ ಜೀವಾವಧಿ ಶಿಕ್ಷೆ
ಬಳ್ಳಾರಿ: ಪತ್ನಿಗೆ ಕಿರುಕುಳ ನೀಡಿ ಕೊಲೆ ಮಾಡಿದ ಆಪಾದನೆ ಹಿನ್ನೆಲೆಯಲ್ಲಿ ಮೂವರು ಆರೋಪಿಗಳಿಗೆ ಜೀವಾವಧಿ ಶಿಕ್ಷೆಯೊಂದಿಗೆ ರು. 10 ಸಾವಿರ ದಂಡ ವಿಧಿಸಿ ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶ ಡಿ. ವಿಶ್ವೇಶ್ವರ ಭಟ್ ತೀರ್ಪು ನೀಡಿದ್ದಾರೆ.
ಬಳ್ಳಾರಿಯ ಮುಂಡ್ರಿಗಿ ಗ್ರಾಮದ ನಜೀಮಾ ಅಲಿಯಾಸ್ ನಜ್ಮಾ ಎಂಬುವವಳೆ ಮೃತಪಟ್ಟ ಮಹಿಳೆ. ನಜೀಮಾಳ ಪತಿ ಖಾದರ್ ಭಾಷಾ, ಅತ್ತೆ ಕಲೀಮುನ್ನೀಸಾ ಹಾಗೂ ಮಾವ ಅಬ್ದುಲ್ ಗಫೂರ್ ಆರೋಪಿಗಳು. ನಜೀಮಾಳನ್ನು ಖಾದರ್ ಬಾಷಾ ಎಂಬಾತನಿಗೆ ವಿವಾಹ ಮಾಡಿಕೊಡಲಾಗಿತ್ತು.
ಮದುವೆಯಾದ ಒಂದು ತಿಂಗಳ ಅನಂತರ ನಜೀಮಾಳಿಗೆ ಅಡುಗೆ ಹಾಗೂ ಮನೆಗೆಲಸ ಮಾಡಲು ಬರುವುದಿಲ್ಲ ಎಂದು ಪ್ರತಿದಿನ ಮಾನಸಿಕ, ದೈಹಿಕ ಹಿಂಸೆ ನೀಡುತ್ತಿದ್ದು, 2010ರ ಜುಲೈ 12ರಂದು ಮಧ್ಯಾಹ್ನ 2 ಗಂಟೆಗೆ ಈ ಮೂವರು ಸೇರಿ ನಜೀಮಾಳನ್ನು ಮನೆಯಲ್ಲಿ ಕೂಡಿ ಹಾಕಿ ಮೈಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಿದ್ದಾರೆ ಎಂದು ಸಾಕ್ಷಾಧಾರಗಳಿಂದ ರುಜುವಾತಾಗಿದೆ.
ಬಳ್ಳಾರಿ ಗ್ರಾಮೀಣ ಪೊಲೀಸರು ಭಾರತೀಯ ದಂಡ ಸಂಹಿತೆ ಕಲಂ 498 (ಎ), 306, 302ರಡಿ ಪ್ರಕರಣ ದಾಖಲಿಸಿ ತನಿಖೆ ಪೂರೈಸಿ ಆಪಾದನಾ ಪಟ್ಟಿ ಸಲ್ಲಿಸಿದ್ದರು. ಸರ್ಕಾರಿ ಅಭಿಯೋಜಕಿ ಅಂಜಲಿದೇವಿ ವಾದ ಮಂಡಿಸಿದ್ದರು.