ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಯುವಜನಾಂಗ ಅಧಃಪತನದತ್ತ ಸಾಗಿದ್ದು ದುರಂತ

Lingaraj Badiger
Updated On : 12 Jul 2013, 11:45 am

ಕನ್ನಡಪ್ರಭ ವಾರ್ತೆ, ಕೊಟ್ಟೂರು, ಜು. 11
ರಾಷ್ಟ್ರದ ಭವಿಷ್ಯಕ್ಕೆ ಆಧಾರ ಸ್ತಂಭವಾಗಬೇಕಿದ್ದ ಯುವ ಜನಾಂಗ ಇತ್ತೀಚಿನ ದಿನಗಳಲ್ಲಿ ಅಧಃಪತನದತ್ತ ಸಾಗಿರುವುದು ದೊಡ್ಡ್ದ ದುರಂತ. ದೇಶದೆಲ್ಲೆಡೆ ಭ್ರಷ್ಟಾಚಾರ ವ್ಯಾಪಿಸಿ ಜೈಲುಗಳ ಸಂಖ್ಯೆ ದ್ವಿಗುಣಗೊಳ್ಳುತ್ತಿದೆ. ಇವುಗಳ ನಿರ್ಮೂಲನೆ ಆಗಿ ಸಶಕ್ತ ಸಮಾಜ ತಲೆಯೆತ್ತದ ಹೊರತೂ ರಾಷ್ಟ್ರಕ್ಕೆ ಉಳಿಗಾಲವಿಲ್ಲ ಎಂದು ರಾಮಕೃಷ್ಣ ಮಠದ ತ್ಯಾಗೀಶ್ವರಾನಂದಾಜೀ ಮಹಾರಾಜ್ ಹೇಳಿದರು.
ಇಲ್ಲಿನ ಕೊಟ್ಟೂರೇಶ್ವರ ಮಹಾವಿದ್ಯಾಲಯದ ಸಭಾ ಭವನದಲ್ಲಿ ಸ್ವಾಮಿ ವಿವೇಕಾನಂದ ರಥಯಾತ್ರಾ ಸ್ವಾಗತ ಸಮಿತಿ ಏರ್ಪಡಿಸಿದ್ದ ಸಮಾರಂಭದಲ್ಲಿ ಮಾತನಾಡಿದ ಅವರು, ನೈತಿಕತೆ, ಆದರ್ಶ ಯುವಕರಲ್ಲಿ ಕುಸಿಯುತ್ತಿದೆ. ಚರಿತ್ರೆಯನ್ನು ವಿರೂಪಗೊಳಿಸುವ ನಿಟ್ಟಿನತ್ತ ಯುವ ಜನಾಂಗದ ದಿಕ್ಕು ಸಾಗಿರುವುದು ನೋವಿನ ಸಂಗತಿ. ಸ್ವಾಮಿ ವಿವೇಕಾನಂದ ಕನಸಿನ ಭಾರತ ನಿರ್ಮಾಣ ಗಟ್ಟಿಗೊಳ್ಳಬೇಕು. ಈ ನಿಟ್ಟಿನತ್ತ ಈಗಲಾದರೂ ಯುವಜನಾಂಗ ಎಚ್ಚೆತ್ತುಕೊಳ್ಳಬೇಕು ಎಂದರು.
ರಾಷ್ಟ್ರ ನಿರ್ಮಾಣದಲ್ಲ ಸಾಗಿ: ದುಸ್ಥಿತಿಯಲ್ಲೂ ಸಬಲರಾಗುವುದು ಅವಶ್ಯಕತ ಇದೆ. ಶಕ್ತಿಯ ಜೀವನ ಪ್ರತಿ ಹಂತದಲ್ಲೂ ಸದುಪಯೋಗ ಪಡಿಸಿಕೊಳ್ಳಲು ಸ್ವ ಸಾಮರ್ಥ್ಯ ಬೆಳೆಸಿಕೊಳ್ಳುವತ್ತ ಮುಂದಾಗಬೇಕು. ವಿವೇಕಾನಂದರ ಜೀವನಾದರ್ಶ ಗುಣಗಳನ್ನು ಮೈಗೂಡಿಸಿಕೊಳ್ಳಬೇಕು, ವಿವೇಕಾನಂದರು ಕೇವಲ ರಾಷ್ಟ್ರಕ್ಕೆ ಸೀಮಿತರಾದವರಲ್ಲ. ರಾಷ್ಟ್ರದ ಯುವಜನಾಂಗ ಅವರ ವಿಚಾರಧಾರೆಗಳನ್ನು ಸೀಮಿತವಾಗಿ ಬಳಸಿಕೊಂಡು ಬಲಿಷ್ಠ ರಾಷ್ಟ್ರ ನಿರ್ಮಾಣದತ್ತ ಸಾಗಬಹುದು ಎಂದರು.
ಉಪನ್ಯಾಸಕ ಬಿ. ಗೋವಿಂದಪ್ಪ ಮಾತನಾಡಿ, ಪರಂಪರೆ, ಸಂಸ್ಕೃತಿ ಮತ್ತು ನೆಲದ ಶ್ರೇಷ್ಠತೆ ಹೆಚ್ಚಿಸಿದವರು ಸ್ವಾಮಿ ವಿವೇಕಾನಂದರು. ಅವನತಿ ಮತ್ತು ಪ್ರಗತಿ ಯುವ ಶಕ್ತಿಯ ಆಧಾರ ಎಂಬ ಅವರ ಸಂದೇಶವನ್ನು ಪ್ರತಿ ಹಂತದಲ್ಲಿ ಯುವಜನತೆ ಅರಿತು ತಮ್ಮ ಬದುಕನ್ನು ರೂಪಿಸಿಕೊಳ್ಳಬೇಕು ಎಂದರು. ಸಮಾರಂಭದ ಸಾನ್ನಿಧ್ಯ ವಹಿಸಿದ್ದ ಚಾನುಕೋಟಿ ಮಠಾಧ್ಯಕ್ಷ ಶ್ರೀ ಸಿದ್ದಲಿಂಗ ಸ್ವಾಮೀಜಿ, ವಕೀಲ ಎಂ.ಎಂ.ಜೆ. ಸ್ವರೂಪಾನಂದ ಮಾತನಾಡಿದರು. ಪ್ರಾಚಾರ್ಯ ಕೆ.ಬಿ. ಪುರ್ತಗೆರೆ, ಕೊ.ಮ. ಆಡಳಿತ ಮಂಡಳಿ ಸದಸ್ಯ ಪಿ. ಹರೀಶ್‌ಗೌಡ, ಸೋಮಶೇಖರ್, ಎಚ್. ಮೃತ್ಯುಂಜಯ ಪಾಲ್ಗೊಂಡಿದ್ದರು. ಉಪನ್ಯಾಸಕ ಬಸವರಾಜ್ ಸ್ವಾಗತಿಸಿ, ನಿರೂಪಿಸಿದರು. ರಥಯಾತ್ರೆ ಸ್ವಾಗತ ಸಮಿತಿ ಕಾರ್ಯದರ್ಶಿ ದೇವರಮನಿ ಕೊಟ್ರೇಶ್ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement