ವಿವೇಕಾನಂದರ ದೇಶಾಭಿಮಾನ ಆದರ್ಶವಾಗಲಿ
ಕನ್ನಡಪ್ರಭ ವಾರ್ತೆ, ಕೂಡ್ಲಿಗಿ, ಜು. 11
ಯುವ ಜನತೆಯ ಜಾಗೃತಿಯಿಂದ ದೇಶದ ಅಭಿವೃದ್ಧಿ ಎಂದನ್ನರಿತ ಸ್ವಾಮಿ ವಿವೇಕಾನಂದರ ರಾಷ್ಟ್ರಾಭಿಮಾನ ಇಂದು ಎಲ್ಲರಿಗೂ ಆದರ್ಶವಾಗಬೇಕಿದೆ ಎಂದು ಕೂಡ್ಲಿಗಿ ಹಿರೇಮಠ ಸಂಸ್ಥಾನದ ಶ್ರೀ ಪ್ರಶಾಂತ ಸಾಗರ ಸ್ವಾಮೀಜಿ ತಿಳಿಸಿದರು.
ಗುರುವಾರ ಪಟ್ಟಣದ ಪಂಚಾಚಾರ್ಯ ಮಂಗಲ ಮಂದಿರದಲ್ಲಿ ನಡೆದ ಸ್ವಾಮಿ ವಿವೇಕಾನಂದರ 150ನೇ ಜನ್ಮ ವರ್ಷಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಯುವ ಸಮೂಹದ ಜಾಗೃತಿಯಿಂದ ದೇಶದಲ್ಲಿನ ಭ್ರಷ್ಟಾಚಾರ ದೂರ ಮಾಡಿ ರಾಷ್ಟ್ರದ ಏಳ್ಗೆಗೆ ಸಹಕಾರಿಯಾಗುತ್ತದೆ. ದೇಶದಲ್ಲಿ ಅನೇಕ ಮಹಾತ್ಮರು ಮರೆಯಾಗಿದ್ದರು, ಅವರ ಆದರ್ಶ ಜೀವನ, ನಡೆ, ನುಡಿ, ಆಚಾರ, ವಿಚಾರಗಳು ಪ್ರಸ್ತುತ ದಿನಗಳಲ್ಲೂ ಎಲ್ಲರಿಗೂ ಆದರ್ಶವಾಗಿವೆ ಎಂದರು.
ರಾಷ್ಟ್ರಭಕ್ತಿ ಮೂಡಿಸಲು
ಬೆಂಗಳೂರು ರಾಮಕೃಷ್ಣ ಮಠದ ಸ್ವಾಮಿ ತ್ಯಾಗೀಶ್ವರರಾನಂದಜೀ ಮಾತನಾಡಿ, ಜನತೆಯಲ್ಲಿ ರಾಷ್ಟ್ರಭಕ್ತಿ, ಭಾವೈಕ್ಯತೆ ಮೂಡಿಸಲು ರಥಯಾತ್ರೆ ಕೈಗೊಳ್ಳಲಾಗಿದೆ. ಈಗಾಗಲೆ ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಬಳ್ಳಾರಿ ಸೇರಿದಂತೆ 36 ಸಭೆಗಳನ್ನು ಪೂರೈಸಿದೆ. ಪಟ್ಟಣದಲ್ಲಿ 37ನೇ ಸಭೆ ನಡೆಸಲಾಗುತ್ತಿದೆ. ಸ್ಥಳೀಯ ಶಾಸಕ ನಾಗೇಂದ್ರ ಸೇರಿದಂತೆ ನಾನಾ ಸಂಘಟನೆ ಪದಾಧಿಕಾರಿಗಳು ಸಹಕರಿಸಿದ್ದಾರೆ. ವಿವೇಕಾನಂದರ ಆಶಯದಂತೆ ಪ್ರತಿಯೊಬ್ಬರು ಶಿಕ್ಷಣ ಪಡೆಯಬೇಕು. ಆ ಮೂಲಕ ದೇಶದಲ್ಲಿ ಉತ್ತಮ ಪ್ರಜೆಯಾಗಿ, ದೇಶಾಭಿಮಾನ ಬೆಳೆಸಿಕೊಳ್ಳುವುದು ಎಲ್ಲರ ಗುರಿಯಾಗಲಿ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಶಾಸಕರ ಆಪ್ತ ಸಹಾಯಕ ಡಾ. ವೆಂಕಟಗಿರಿ ದಳವಾಯಿ, ಬಂಗಾರಿ ಹನುಮಂತು, ಆರ್.ಕೆ. ಶೆಟ್ರು, ಕಾಟೇರ್ ಹಾಲೇಶ್, ಪಪಂ ಸದಸ್ಯರು, ವಿವಿಧ ಮುಖಂಡರು ಹಾಜರಿದ್ದರು. ಇದಕ್ಕೂ ಮುನ್ನ ಶ್ರೀವೀರಭದ್ರೇಶ್ವರ ಚಿತ್ರ ಮಂದಿರದಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ರಾಷ್ಟ್ರಭಕ್ತಿ ಸಂದೇಶ ಸಾರುವ ಸ್ವಾಮಿ ವಿವೇಕಾನಂದರ ರಥಯಾತ್ರೆ ಮೆರವಣಿಗೆ ನಡೆಸಲಾಯಿತು. ಮಹಿಳಾ ವೀರಗಾಸೆ ನೃತ್ಯ, ತಮಟೆ, ಡೊಳ್ಳು ಸೇರಿದಂತೆ ವಿವಿಧ ಜಾನಪದ ಕಲಾ ತಂಡಗಳು ಮೆರವಣಿಗೆಗೆ ಮೆರಗು ತಂದವು.